ಅಪಹರಣಕಾರನ ಸುಳಿವು ನೀಡಲು ಮನವಿ
ಮೈಸೂರು: ನಗರದಲ್ಲಿ ನಡೆಯುತ್ತಿರುವ ಸರ ಅಪಹರಣ ಪ್ರಕರಣಗಳಲ್ಲಿ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿ ಭಾಗಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಚಹರೆಯುಳ್ಳ ವ್ಯಕ್ತಿಯು ಹಿರೋಹೋಂಡಾ ಕರಿಷ್ಮಾ ಹಾಗೂ ಇತರೇ ಬೈಕ್ ಬಳಸಿ ಸರ ಅಪಹರಿಸುತ್ತಿದ್ದಾರೆ.
ಈತನ ಪತ್ತೆಗಾಗಿ ನಗರ ಪೊಲೀಸರು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಸುಳಿವು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆ ಅಥವಾ ದೂ. 0821- 2418302, ಸಿಸಿಬಿ ಘಟಕ ದೂ. 2418532, ಪೊಲೀಸ್ ಕಂಟ್ರೋಲ್ ರೂಂ. 100, 0821- 2418339 ತಿಳಿಸಲು ಕೋರಲಾಗಿದೆ.
ಸರ ಅಪಹರಣ
ಮೈಸೂರು: ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿಕೊಂಡು ಹೋಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಕುವೆಂಪುನಗರ ಆರ್‌ಎಂಪಿ ಕ್ವಾಟ್ರಸ್ ಬಳಿಯ ನಿವಾಸಿ ಪ್ರಮೀಳಾ (55) ಎಂಬವರು ಮನೆ ಮುಂಭಾಗ ನೀರು ಹಾಕುತ್ತಿದ್ದರು. ಬೈಕಿನಲ್ಲಿ ಬಂದ ಇಬ್ಬರು ಪೈಕಿ ಒಬ್ಬ ಬೈಕಿನಿಂದ ಇಳಿದು ಬಂದು ಪ್ರಮೀಳಾ ಅವರಿಗೆ ಚೀಟಿ ತೋರಿಸಿ ವಿಳಾಸ ಕೇಳಿದ್ದಾನೆ. ಚೀಟಿ ನೋಡುತ್ತಿದ್ದ ಪ್ರಮೀಳಾ ಅವರು ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎನ್. ಯಶವಂತಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿ ಸಾವು
ಮೈಸೂರು: ಮಹಡಿ ಮೇಲೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ವಿದ್ಯಾನಗರದಲ್ಲಿ ಮಂಗಳವಾರ ನಡೆದಿದೆ. ವಿದ್ಯಾನಗರ ನಿವಾಸಿ ಜಗದೀಶ್ ಎಂಬವರ ಪುತ್ರಿ ಸೌಮ್ಯ (8) ಮೃತಪಟ್ಟ ಬಾಲಕಿ. ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಸಾವು
ಮೈಸೂರು: ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕನೊಬ್ಬ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಶಾಂತಿನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಗೌಸಿಯಾನಗರ ನಿವಾಸಿ ಫೈರೋಜ್ (19) ಮೃತಪಟ್ಟವರು. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಿಗೆ ಬಸ್ಸಿನಲ್ಲಿ 5 ಲಕ್ಷ ನಗದು ಕಳವು
ಮೈಸೂರು: ಮನೆ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಸಾರಿಗೆ ಬಸ್ಸಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ 5 ಲಕ್ಷವನ್ನು ಕಳವು ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಎಚ್.ಡಿ. ಕೋಟೆ ತಾಲೂಕು ನಾಗನಹಳ್ಳಿ ನಿವಾಸಿ ಜೋಸೆಫ್ ಹಣ ಕಳೆದುಕೊಂಡವರು. ಇವರು ಮನೆ ನಿರ್ಮಾಣಕ್ಕಾಗಿ ನಂಜುಮಳಿಗೆ ವೃತ್ತದಲ್ಲಿರುವ ಎಸ್‌ಬಿಎಂ ಬ್ಯಾಂಕಿನಿಂದ 3.50 ಲಕ್ಷ ಸಾಲದ ಹಾಗೂ ತಮ್ಮ ಖಾತೆಯಲ್ಲಿದ್ದ 1.50 ಲಕ್ಷ ಸೇರಿದಂತೆ 5 ಲಕ್ಷ ಡ್ರಾ ಮಾಡಿ ಬಟ್ಟೆ ಬ್ಯಾಗಿನಲ್ಲಿ ಹಾಕಿಕೊಂಡಿದ್ದರು.
ಜೋಸೆಫ್ ಬಸ್ ನಿರ್ವಾಹಕನಿಂದ ಟಿಕೆಟ್ ತೆಗೆದುಕೊಂಡು ಚಿಲ್ಲರೆಯನ್ನು ಜೇಬಿನಲ್ಲಿ ಹಾಕಿಕೊಂಡರು. ಈ ವೇಳೆ ಬ್ಯಾಗ್ ಹಗುರವಾಗಿರುವುದನ್ನು ಕಂಡು ಮುಟ್ಟಿದ್ದಾಗ ಹಣ ಕಳವಾಗಿತ್ತು. ಪಕ್ಕದಲ್ಲಿ ನಿಂತಿದ್ದ ಆ ಅಪರಿಚಿತ ವ್ಯಕ್ತಿ ಸಹ ನಾಪತ್ತೆಯಾಗಿದ್ದ. ಬ್ಯಾಗನ್ನು ಸಂಪೂರ್ಣ ಪರಿಶೀಲಿಸಿದಾಗ ಕೆಳಭಾಗವನ್ನು ಹರಿತವಾದ ವಸ್ತುವಿನಿಂದ ಕುಯ್ದು ಕಳವು ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆ ಇನ್ಸ್‌ಪೆಕ್ಟರ್ ಎಂ.ಎ. ಹರೀಶ್‌ಕುಮಾರ್, ಎಸ್‌ಐಗಳಾದ ಶಿವಣ್ಣ, ಶ್ರೀನಿವಾಸ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಾರಿ ಕಳವು: ನಾಲ್ವರ ಬಂಧನ
ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಆ. 20
ಲಾರಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಅರೇನಹಳ್ಳಿ ಗ್ರಾಮದ ಅಲ್ತಫ್ ಪಾಷಾ, ಸೈಯದ್ ಜಬಿ, ಸೈಯದ್ ಇಫ್ತಾನ್, ರಶೀದ್ ಬಂಧಿತ ಆರೋಪಿಗಳು. ತಾಲೂಕಿನ ಬೆಟ್ಟದಪುರ, ಬೈಲುಕುಪ್ಪೆ ಹಾಗೂ ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ಲಾರಿ, ಟಿಪ್ಪರ್, ಮ್ಯಾಕ್ಸಿಕ್ಯಾಬ್‌ನಂತಹ ದೊಡ್ಡ ವಾಹನಗಳ ಕಳ್ಳತನ ಮಾಡಿರುವ ಆರೋಪ ಹೊತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಮತ್ತೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಪಿ.ವಿ. ವೆಂಕಟೇಶ್, ಬೆಟ್ಟದಪುರ ಪೊಲೀಸ್ ಠಾಣೆಯ ಎಸ್‌ಐ ಜಿ.ಜೆ. ಸತೀಶ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.