ಉಪಚುನಾವಣೆ: ಮತದಾನಕ್ಕೆ ಸಿದ್ಧತೆ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಆ. 20
ಆ. 21ರಂದು ನಡೆಯುವ ಮಂಡ್ಯ ಲೋಕಸಭಾ ಉಪಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಮಂಗಳವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಯಂತ್ರ ವಿಂಗಡಿಸಿ, ಮತಗಟ್ಟೆಗಳಿಗೆ ಸಿಬ್ಬಂದಿ ನಿಯೋಜಿಸಲಾಯಿತು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 246 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ 1,132 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಚುನಾವಣೆಗೆ ಅಗತ್ಯವಿರುವ ಸಿದ್ಧತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಬಿ.ಎನ್. ವೀಣಾ ಕುಮಾರ್ ತಿಳಿಸಿದರು.
61 ಅತಿ ಸೂಕ್ಷ್ಮ ಮತಗಟ್ಟೆಗಳು, 105 ಸೂಕ್ಷ್ಮ ಮತಗಟ್ಟೆಗಳು ಮತ್ತು 80 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, ಅತಿಸೂಕ್ಷ್ಮ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, 10 ಮಂದಿ ಸೆಕ್ಟರ್ ಮ್ಯಾಜಿಸ್ಟೆಟರ್ಗಳು ಸೇರಿದಂತೆ ಎಸ್ಪಿ ಅಭಿನವ್ ಖರೆ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಡಿವೈಎಸ್ಪಿಗಳು, ನಾಲ್ವರು ಇನ್ಸ್ಪೆಕ್ಟರ್ಗಳು ಮತ್ತು ಇಪ್ಪತ್ತು ಎಸ್ಐ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಧ್ರತಾ ಕಾರ್ಯಕ್ಕೆ ನಿಯೋಜಿಸಿದೆ. ಚುನಾವಣೆಯಲ್ಲಿ ಒಟ್ಟು 1,88,439 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಇವರಲ್ಲಿ 95,349 ಮಂದಿ ಪುರುಷ ಮತದಾರರು, 93,090 ಮಹಿಳಾ ಮತದಾರರು ಇದ್ದಾರೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲ ಕ್ರಮ ಈಗಾಗಲೇ ಕೈಗೊಳ್ಳಲಾಗಿದೆ.
ವಿಧಾನ ಪರಿಷತ್: ಆ. 22 ರಂದು ಮೈಸೂರು- ಚಾಮರಾಜನಗರ ಸ್ಥಳಿಯ ಸಂಸ್ಥೆಯ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು, ತಾಲೂಕಿನಲ್ಲಿ ಜಿಪಂ, ತಾಪಂ, ಗ್ರಾಪಂ ಮತ್ತು ಪುರಸಭಾ ಸದಸ್ಯರು, ಸೇರಿದಂತೆ ಕ್ಷೇತ್ರದ ಶಾಸಕರನ್ನು ಒಳಗೊಂಡು ಒಟ್ಟು 733 ಮಂದಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ತಾಲೂಕಿನ ಎಲ್ಲ 31 ಗ್ರಾಪಂಗಳು ಮತ್ತು ಪಟ್ಟಣದ ಪುರಸಭೆಯಲ್ಲಿ ಮತಕೇಂದ್ರ ತೆರೆಯಲಾಗಿದ್ದು, ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.'ಚುನಾವಣೆಗೆ ಜೆಡಿಎಸ್ ಕಾರಣ ಎಂಬ ಹೇಳಿಕೆ ಮೂರ್ಖತನದ್ದು'
ಕೆ.ಆರ್. ನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಉಪಚುನಾವಣೆಗಳು ನಡೆಯುವುದು ಸಹಜ. ಆದರೆ, ಈಗ ನಡೆಯುತ್ತಿರುವ ಎರಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಿಗೆ ಜೆಡಿಎಸ್ ಕಾರಣ ಎಂಬ ಕಾಂಗ್ರೆಸ್ನವರ ಆರೋಪ ಮೂರ್ಖತನದ ಪರಮಾವಧಿ ಎಂದು ಶಾಸಕ ಎನ್. ಚಲುವರಾಯಸ್ವಾಮಿ ಟೀಕಿಸಿದರು.
ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಅವರ ನಿವಾಸದಲ್ಲಿ ಮಂಗಳವಾರ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರನ್ನು ಟೀಕಿಸುವ ಭರದಲ್ಲಿ, ಕಾಂಗ್ರೆಸ್ ನಾಯಕರು ಸಂಯಮದ ಎಲ್ಲೆ ಮೀರುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾನು ಮುಖ್ಯಮಂತ್ರಿಯಾಗುವ ಆವಕಾಶಕ್ಕೆ ಎಚ್.ಡಿ. ದೇವೇಗೌಡರೆ ಮೊದಲ ಅಡ್ಡಗಾಲು ಎಂಬ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷವಾಗಿ ನಾವು ಅಭ್ಯರ್ಥಿ ಹಾಕಿದ್ದೆವು, ಜನರ ವಿಶ್ವಾಸ ಕಳೆದುಕೊಂಡಿದ್ದ ಪರಮೇಶ್ವರ್ ಚುನಾವಣೆಯಲ್ಲಿ ಸೋತರು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸದೆ. ರಾಜಕೀಯ ಲಾಭಕ್ಕೆ ಅನುದಾನ ಬಿಡುಗಡೆ ಮಾಡುತ್ತಿರುವುದು ಅಭಿವೃದ್ಧಿಗೆ ಮಾರಕ ಎಂದ ಅವರು, ಸರ್ಕಾರವನ್ನು ಒಂದು ರುಪಾಯಿಗೆ ಅಕ್ಕಿ ಕೊಡಿ ಎಂದು ಯಾರು ಕೇಳಿರಲಿಲ್ಲ. ಅದೇ ಹಣವನ್ನು ಇತರ ಮೂಲ ಸವಲತ್ತುಗಳಿಗೆ ಬಳಸಬಹುದಿತ್ತು ಎಂದು ಹೇಳಿದರು.
ಮಂಡ್ಯ ಮತ್ತು ಬೆಂಗಳೂರು ಲೋಕಸಬಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸುವುದನ್ನೆ ಕಾಯಕ ಮಾಡಿಕೊಂಡಿರುವ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯ ಸಿ.ಜೆ.ದ್ವಾರಕೀಶ್, ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಸುಬ್ರಮಣ್ಯ, ಉಮೇಶ್, ನಗರ ಜೆಡಿಎಸ್ ಅಧ್ಯಕ್ಷ ಡಿ.ಸಿ. ಮಂಜುನಾಥ್, ಜೆಡಿಎಸ್ ಮುಖಂಡರಾದ ಎಸ್.ಟಿ. ಕೀರ್ತಿ, ಮಿರ್ಲೆ ಧನಂಜಯ, ಹಳಿಯೂರು ಜಗದೀಶ್, ಚುಂಚನಕಟ್ಟೆ ಮಧು, ಹಳಿಯೂರು ಕೃಷ್ಣಮೂರ್ತಿ ಇದ್ದರು.