ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗೆಲವಿಗಾಗಿ 'ಕೈ'-ಕೆಜೆಪಿ ನಡುವೆ ತಿಕ್ಕಾಟ

Vishwanath S
Updated On : 21 Aug 2013, 12:48 pm

ಕ.ಪ್ರ.ವಾರ್ತೆ , ಮೈಸೂರು , ಆ. 20
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಇದೇ ಪ್ರಥಮ ಬಾರಿಗೆ ಉಪ ಚುನಾವಣೆ ಎದುರಾಗಿದ್ದು, ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಕೆಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ.
2010ರ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಚಾಮರಾಜನಗರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರಿಂದ ಈ ಉಪ ಚುನಾವಣೆ ಎದುರಾಗಿದೆ.
ದ್ವಿಸದಸ್ಯ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲಿಗೆ ಜನತಾಪಕ್ಷದ ವಿ.ಎಚ್. ಗೌಡ- ಕಾಂಗ್ರೆಸ್‌ನ ಟಿ.ಎನ್. ನರಸಿಂಹಮೂರ್ತಿ, 2ನೇ ಬಾರಿಗೆ ಜನತಾದಳದ ವೈ. ಮಹೇಶ್- ಕಾಂಗ್ರೆಸ್‌ನ ಸಿ. ರಮೇಶ್, 3ನೇ ಬಾರಿಗೆ ಜೆಡಿಎಸ್‌ನ ಬಿ. ಚಿದಾನಂದ- ಕಾಂಗ್ರೆಸ್‌ನ ಎನ್. ಮಂಜುನಾಥ್, 4ನೇ ಬಾರಿಗೆ ಜೆಡಿಎಸ್‌ನ ಸಂದೇಶ್ ನಾಗರಾಜ್- ಬಿಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಆಯ್ಕೆಯಾಗಿದ್ದರು.
ಉಭಯ ಜಿಲ್ಲೆಗಳ 6314 ಗ್ರಾಪಂ, 256 ತಾಪಂ, 67 ಜಿಪಂ, 74 ಪಪಂ, 122 ಪುರಸಭೆ, 62 ನಗರಸಭೆ, 65 ನಗರಪಾಲಿಕೆ ಸದಸ್ಯರು, 2 ಸಂಸದರು, 15 ವಿಧಾನಸಭಾ ಸದಸ್ಯರು ಹಾಗೂ 5 ವಿಧಾನ ಪರಿಷತ್ ಸದಸ್ಯರು ಮತದಾರರು. ಒಟ್ಟು ಮತದಾರರ ಸಂಖ್ಯೆ 6,982. ಒಟ್ಟು 368 ಮತಗಟ್ಟೆಗಳಲ್ಲಿ ಮೈಸೂರು ಜಿಲ್ಲೆಯಲ್ಲಿ 243, ಚಾಮರಾಜನಗರ ಜಿಲ್ಲೆಯಲ್ಲಿ 125 ಇವೆ.
ಆರಂಭದಿಂದಲೂ ದ್ವಿಸದಸ್ಯ ಸ್ಥಾನಗಳಿಗೆ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದಿಂದ ತಲಾ ಒಬ್ಬರು ಗೆಲ್ಲುತ್ತಿದ್ದರು. ಆದರೆ ಕಳೆದ ಬಾರಿ ಮಾತ್ರ ಜನತಾ ಪರಿವಾರ ತನ್ನ ಸ್ಥಾನ ಉಳಿಸಿಕೊಂಡರೆ ಕಾಂಗ್ರೆಸ್ ಕಳೆದುಕೊಂಡಿತು. ಆ ಸ್ಥಾನ ಬಿಜೆಪಿಯ ಪಾಲಾಗಿತ್ತು. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಎರಡನೇ ಬಾರಿಗೆ ಟಿಕೆಟ್ ನೀಡುತ್ತಿರಲಿಲ್ಲ. ಆದರೆ ಕಳೆದ ಬಾರಿ ಕಾಂಗ್ರೆಸ್ ಮಂಜುನಾಥ್‌ಗೆ ಮತ್ತೆ ಟಿಕೆಟ್ ನೀಡಿದರೂ ಸೋತರು.
ಈ ಬಾರಿ ಫಲಿತಾಂಶದಲ್ಲಿ ಭಿನ್ನ: ದ್ವಿಸದಸ್ಯ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆದಾಗ ಕಾಂಗ್ರೆಸ್ ಹಾಗೂ ಜನತಾ ಪರಿವಾರ ತಲಾ ಒಂದು ಸ್ಥಾನ ಗೆಲ್ಲುತ್ತಿದ್ದವು. ಆದರೆ ಈಗ ಒಂದು ಸ್ಥಾನಕ್ಕೆ ಮಾತ್ರ ಉಪ ಚುನಾವಣೆ ಎದುರಾಗಿರುವುದರಿಂದ ಫಲಿತಾಂಶ ಭಿನ್ನವಾಗಿರುತ್ತದೆ. ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಸೇರಿದ ಹಾಗೂ ಬೆಂಬಲಿತ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರುವುದರಿಂದ ಆ ಪಕ್ಷಕ್ಕೆ ಅನುಕೂಲ. ಹೀಗಾಗಿ ಆ ಪಕ್ಷದ ಟಿಕೆಟ್‌ಗೆ ಭಾರಿ ಬೇಡಿಕೆಯೂ ಇತ್ತು. ಅಂತಿಮವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಧರ್ಮಸೇನ ಅವರಿಗೆ ಟಿಕೆಟ್ ನೀಡಿದೆ.
ದ್ವಿಸದಸ್ಯ ಸ್ಥಾನಗಳಲ್ಲಿ ಈಗಾಗಲೇ ಒಂದು ಸ್ಥಾನದಲ್ಲಿ ತಮ್ಮ ಪಕ್ಷದ ಸಂದೇಶ್ ನಾಗರಾಜ್ ಇದ್ದಾರೆ ಎಂಬುದನ್ನು ನೆಪ ಮಾಡಿಕೊಂಡು ಕಣದಿಂದ ದೂರ ಉಳಿದ ಜೆಡಿಎಸ್ ತವರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಲು ಬಿಜೆಪಿ, ಕೆಜೆಪಿ ಕೈ ಜೋಡಿಸಿದೆ. ಕೆಜೆಪಿ ರಚನೆ ನಂತರ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಷ್ಟಾಗಿ ಬೆಂಬಲ ಇಲ್ಲ. ಹೀಗಾಗಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ ಪರ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಉಭಯ ಜಿಲ್ಲೆಗಳ ಸಚಿವರು, ಶಾಸಕರು, ಮುಖಂಡರ ಸಭೆ ನಡೆಸಿ, ಗೆಲವಿಗೆ ತಂತ್ರ ರೂಪಿಸಿದ್ದಾರೆ. ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ ಹಾಗೂ ಎಲ್ಲ ಶಾಸಕರು ಪ್ರಚಾರ ನಡೆಸಿದ್ದಾರೆ.
ಕೆಜೆಪಿಯಿಂದಲೂ ಪ್ರಚಾರ ಜೋರು: ಕೆಜೆಪಿ ಅಭ್ಯರ್ಥಿ ಯು,ಎಸ್. ಶೇಖರ್ ಪರ ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಉಭಯ ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದಾರೆ.
ಹಲವು ಮಾಜಿ ಶಾಸಕರು ಅವರೊಂದಿಗೆ ಕೈ ಜೋಡಿಸಿದ್ದಾರೆ. ಬಿಜೆಪಿಯ ಮಾಜಿ ಸಿಎಂ. ಡಿ.ವಿ. ಸದಾನಂದಗೌಡ, ಮಾಜಿ ಸಚಿವರಾದ ವಿ. ಸೋಮಣ್ಣ, ಎಸ್.ಎ. ರಾಮದಾಸ್, ಸಿ.ಎಚ್. ವಿಜಯಶಂಕರ್, ಜೆಡಿಎಸ್‌ನ ಶಾಸಕರಾದ ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಾ.ರಾ. ಮಹೇಶ್, ಮಾಜಿ ಸಚಿವ ಎಂ. ಶಿವಣ್ಣ ಮೊದಲಾದವರು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ಮಾಡುವ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿದ್ದರೆ, ಪ್ರತಿಪಕ್ಷಗಳು ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕದ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕುಗೊಳಿಸಲು ಾಂಗ್ರೆಸ್ ಹೊರಟಿದೆ ಎಂದು ಟೀಕಾ ಪ್ರಹಾರ ನಡೆಸಿವೆ.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ತವರು ಜಿಲ್ಲೆಯ ಸಿದ್ದರಾಮಯ್ಯ ಅವರ ಸಿಎಂ ಆಗಿರುವುದು ಹಾಗೂ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು, ಸಂಪನ್ಮೂಲದ ಕೊರತೆ ಇಲ್ಲದಿರುವುದರಿಂದ ಕಾಂಗ್ರೆಸ್‌ನ ಧರ್ಮಸೇನ ಅವರಿಗೆ ಪೂರಕ ವಾತಾವರಣವಿದೆ. ಅವರು ಗೆದ್ದು, ಕಳೆದುಹೋಗಿರುವ ಸ್ಥಾನವನ್ನು ಮತ್ತೆ ಕಾಂಗ್ರೆಸ್‌ಗೆ ಗಳಿಸಿಕೊಡಬಹುದು. ಆದರೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದವರು ಸರಿಯಾಗಿ ಪ್ರಚಾರ ನಡೆಸದಿರುವುದು, ಜಾತಿ ರಾಜಕಾರಣ, ಎದುರಾಳಿ ಅಭ್ಯರ್ಥಿಯ ಧನಬಲ ಕೈ ಮೇಲಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಜೆಡಿಎಸ್- ಬಿಜೆಪಿ- ಕೆಜೆಪಿ ಒಗ್ಗಟ್ಟಿನ ಹೋರಾಟ ನಡೆಸುತ್ತಿರುವುದರಿಂದ ಯು.ಎಸ್. ಶೇಖರ್ ಗೆಲವು ನಿಶ್ಚಿತ ಎಂದು ಮೂರು ಪಕ್ಷಗಳ ಮುಖಂಡರು ವಿಶ್ವಾಸದಿಂದ ಇದ್ದಾರೆ. ಅದಕ್ಕಾಗಿ ಕಳೆದ ಬಾರಿ ಸಂದೇಶ್ ನಾಗರಾಜ್ ಹಾಗೂ ಪ್ರೊ. ಮಲ್ಲಿಕಾರ್ಜುನಪ್ಪ ಅನುಸರಿಸಿದ ತಂತ್ರಗಾರಿಕೆಯನ್ನೇ ಅನುಸರಿಸಿದ್ದಾರೆ. ಇದು ಕೆಲಸ ಮಾಡಿದಲ್ಲಿ ಶೇಖರ್ ಮೇಲ್ಮನೆ ಪ್ರವೇಶಿಸುವ ಮೂಲಕ ಬಿಜೆಪಿ ಗೆದ್ದಿದ್ದ ಸ್ಥಾನವನ್ನು ಕೆಜೆಪಿಗೆ ಉಳಿಸಿಕೊಡಬಹುದು.
ಕಣದಿಂದ ಹಿಂದೆ ಸರಿದ ಬಿಜೆಪಿ
ಚಾಮರಾಜನಗರ ಜಿಲ್ಲೆಯಲ್ಲಿ ಅಷ್ಟಾಗಿ ನೆಲೆ ಇಲ್ಲದಿದ್ದರೂ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಗೋಜಿಗೆ ಹೋಗಲಿಲ್ಲ. ಯಡಿಯೂರಪ್ಪ ಅವರ ನಿರ್ಗಮನದ ನಂತರ ಜರ್ಜರಿತವಾಗಿರುವ ಬಿಜೆಪಿಯು ಯಶಸ್ವಿ ಎಸ್. ಸೋಮಶೇಖರ್ ಅವರಿಂದ ನಾಮಪತ್ರ ಹಾಕಿಸಿ, ಪ್ರಚಾರ ಆರಂಭಿಸಿತ್ತಾದರೂ ಕೊನೆ ಕ್ಷಣ ನಾಮಪತ್ರ ಹಿಂದೆ ತೆಗೆಸಿದೆ. ಜೆಡಿಎಸ್, ಬಿಜೆಪಿ ಜತೆಗೆ ಮೈತ್ರಿಗಿಂತ ಮುಂಚಿತವಾಗಿಯೇ ರಿಯಲ್ ಎಸ್ಟೇಟ್ ಉದ್ಯಮಿ ಯು.ಎಸ್. ಶೇಖರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಭಯ ಪಕ್ಷಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement