2ನೇ ದಿನವೂ ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ
ಮೈಸೂರು: ಶಿರಸ್ತೇದಾರ ಎ.ಎಂ. ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಲು ಆಗ್ರಹಿಸಿ ಮೈಸೂರು ವಕೀಲರ ಸಂಘದವರು 2ನೇ ದಿನವಾದ ಬುಧವಾರ ಸಹ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದಾರೆ. ನಂಜನಗೂಡು ಹಿರಿಯ ಸಿವಿಲ್ ನ್ಯಾಯಾಧೀಶರ ಶಿರಸ್ತೇದಾರ ಸ್ಥಾನಕ್ಕೆ ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಬೇಕು. ಆಮೀನ ಹುದ್ದೆ ನೇಮಕಾತಿಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಲಾಪ ಬಹಿಷ್ಕರಿಸಿದ್ದೇವೆ. ಆ. 22ರ ಬೆಳಗ್ಗೆ 10.30ಕ್ಕೆ ಸರ್ವ ಸದಸ್ಯರ ಸಭೆ ಕರೆಯಲಾಗಿದೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.
ಉಪಚುನಾವಣೆ:ಶೇ. 53 ಮತದಾನ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪ ಚುನಾವಣೆಯ ಮತದಾನಕ್ಕೆ ಕೆ.ಆರ್. ನಗರ ತಾಲೂಕಿನಲ್ಲಿ ಶೇ.53 ರಷ್ಟು ಮತದಾನವಾಗಿದೆ.ಬೆಳಗ್ಗೆ 8ಕ್ಕೆ ಮತದಾನ ಆರಂಭವಾಗಿ ಮಧ್ಯಾಹ್ನ ಒಂದು ಗಂಟೆಯಾದರೂ ತಾಲೂಕಿನಾದ್ಯಂತ ಶೇ. 20 ರಷ್ಟು ಮತದಾನ ಆಗಿರಲಿಲ್ಲ. ಕೆಲವು ಮತಗಟ್ಟೆಗಳಲ್ಲಿ ಶೇ. 10 ರಷ್ಟು ಮತದಾನ ನಡೆದಿತ್ತು. ಮತದಾರರು ಚುನಾವಣೆಯ ಬಗ್ಗೆ ತೀವ್ರ ನಿರಾಸಕ್ತಿ ತೋರಿದರಲ್ಲದೆ, ಕೇಂದ್ರದತ್ತ ಸುಳಿಯಲಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚು ಕಾಣಿಸಿದ್ದು ಕಂಡು ಬಂತು. ಆದರೆ, ಮಧ್ಯಾಹ್ನದ ನಂತರ ವೇಗ ಪಡೆದು, ಸಂಜೆ ವೇಳೆಗೆ ಶೇ. 53 ರಷ್ಟು ಮಂದಿ ಮತ ಚಲಾಯಿಸಿದರು.
25ರಂದು ಕವನ ಸಂಕಲನ ಬಿಡುಗಡೆ
ಮೈಸೂರು: ನೆಲದನಿ ಸಾಂಸ್ಕೃತಿಕ ಸಂಸ್ಥೆಯು ಆ. 25ರ ಬೆಳಗ್ಗೆ 10.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಲೇಖಕ ಟಿ. ಸತೀಶ್ ಜವರೇಗೌಡ ಅವರ ಹೊಳೆ ಜಂಗಮನ ಜೋಳಿಗೆ ಕವನ ಸಂಕಲನ ಬಿಡುಗಡೆ ಸಮಾರಂಭ ಆಯೋಜಿಸಿದೆ. ಸಾಹಿತಿ ಡಾ. ಸಿಪಿಕೆ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಪುಸ್ತಕ ಬಿಡುಗಡೆ ಮಾಡುವರು. ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ಸಿ. ನಾಗಣ್ಣ ಪುಸ್ತಕ ಕುರಿತು ಮಾತನಾಡುವರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ. ಪುಟ್ಟಸ್ವಾಮಿ, ಕಾದಂಬರಿಕಾರ ಚಂದ್ರಶೇಖರ ಆಲೂರು ಮುಖ್ಯ ಅತಿಥಿಯಾಗಿ ಆಗಮಿಸುವರು.
ನಾಳೆ ಜಿಪಂನಲ್ಲಿ ಕಾರ್ಯಾಗಾರ
ಮೈಸೂರು: ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿ, ಬೆಂಗಳೂರಿನ ಎನ್ಆರ್ಡಿಎಂಎಸ್ ವಿಭಾಗ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಂಯುಕ್ತವಾಗಿ ಅಭಿವೃದ್ಧಿಯಲ್ಲಿ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಪಾತ್ರ ಒಂದು ದಿನದ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಜಿಪಂ ಸಭಾಂಗಣದಲ್ಲಿ ಆ. 23ರಂದು ಆಯೋಜಿಸಿದೆ. ಜಿಪಂ ಸಿಇಒ, ಉಪ ಕಾರ್ಯದರ್ಶಿ ಮತ್ತು ಮುಖ್ಯ ಯೋಜನಾಧಿಕಾರಿ ಭಾಗವಹಿಸುವರು. ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ. ಪೃಥ್ವಿರಾಜ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿಯ ಹಿರಿಯ ವಿಜ್ಞಾನಿಗಳು ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಬಗ್ಗೆ ತರಬೇತಿ ನೀಡುವರು. ಈ ಕಾರ್ಯಾಗಾರದಲ್ಲಿ ಮೈಸೂರು ವಿಭಾಗದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದವರು ಭಾಗವಹಿಸುವರು. ಮೈಸೂರು ವಿಭಾಗದ ಎಲ್ಲಾ ಅಧಿಕಾರಿಗಳು ಈ ಕಾರ್ಯಾಗಾರದ ಸಂಪೂರ್ಣ ಮಾಹಿತಿ ಪಡೆದುಕೊಂಡು ತಮ್ಮ ಇಲಾಖೆಗಳಲ್ಲಿ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ಯೋಜನಾಧಿಕಾರಿ ಬಿ.ಎಂ. ಪ್ರದೀಪ್ ಕುಮಾರ್, ಎಂ. ವಿನೋದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9341151618 ಅಥವಾ 9844942930 ಸಂಪರ್ಕಿಸಬಹುದು.
ಬ್ಲೇಡ್ ತೋರಿಸಿ ದೋಚಿದ್ದವರ ಸೆರೆ
ಮೈಸೂರು: ಬ್ಲೇಡ್ ತೋರಿಸಿ ಮೊಬೈಲ್ ಮತ್ತು ಪರ್ಸ್ ದೋಚಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಸೋಮೇಶ್ (19) ಮತ್ತು ಮಂಜುನಾಥ್ (18) ಬಂಧಿತ ಆರೋಪಿಗಳು. ಅಭಿಷೇಕ್ ಮತ್ತು ಪ್ರತಾಪ್ ಎಂಬವರು ಪರಾರಿಯಾಗಿದ್ದಾರೆ. ಈ ನಾಲ್ವರು ಸೇರಿಕೊಂಡು ಕರ್ಜನ್ ಪಾರ್ಕ್ ಬಳಿ ಸ್ನೇಹಿತನೊಂದಿಗೆ ಹೋಗುತ್ತಿದ್ದ ರಕ್ಷಿತ್ಗೆ ಬ್ಲೇಡ್ ತೋರಿಸಿ, 500, ಪರ್ಸ್ ಮತ್ತು ಮೊಬೈಲ್ ದೋಚಿದ್ದರು. ಸಾರ್ವಜನಿಕರ ಸಹಾಯದಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದೇವರಾಜ ಠಾಣೆ ಇನ್ಸ್ಪೆಕ್ಟರ್ ಕಾಂತರಾಜು, ಎಸ್ಐಗಳಾದ ಬಾಲಕೃಷ್ಣ, ಲೇಪಾಕ್ಷ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಂಗಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ನೃತ್ಯ
ಕ.ಪ್ರ.ವಾರ್ತೆ , ಮೈಸೂರು , ಆ. 21
ರಂಗಾಯಣ ರಂಗಶಾಲೆಯ ವಿದ್ಯಾರ್ಥಿಗಳು ಇದೇ ಪ್ರಥಮ ಬಾರಿಗೆ ಯಕ್ಷಗಾನ ನೃತ್ಯರೂಪಕ ಪ್ರದರ್ಶಿಸಿದರು.
ಉತ್ತರಕನ್ನಡ ಜಿಲ್ಲೆಯ ಕೆರೆಮನೆ ಶಿವಾನಂದ ಹೆಗಡೆ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ್ ನಾರಾಯಣ್ ವಂದಗದ್ದೆ ಮತ್ತು ಸಚಿನ್ ಭಂಡಾರಿ ನಾಜ್ಗಾರ್ ತರಬೇತಿಯಲ್ಲಿ ಯಕ್ಷಗಾನ ಪ್ರದರ್ಶಿಸಿದರು. ಗಣೇಶ್ ಮುಂಡಾಡಿ ಭಾಗವತಿಕೆ ನಿರ್ವಹಿಸಿದರು.
ಅಂಗವಿಕಲರ ಶೌಚಾಲಯ ಬಾಗಿಲಿಗೆ ಫಲಕ
ಮೈಸೂರು: ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಅಂಗವಿಕಲರಿಗಾಗಿಯೇ ನಿರ್ಮಿಸಿರುವ ಶೌಚಾಲಯದ ಬಾಗಿಲುಗಳ ಮೇಲೆ ಅಂಗವಿಕಲರ ಬಳಕೆಗೆ ಮಾತ್ರ ಎಂದು ಚೀಟಿ ಅಂಟಿಸಲಾಗಿದ್ದರೂ, ಶೌಚಾಲಯದ ಬೀಗದ ಕೀಗಳು ಮಾತ್ರ ಅಂಗವಿಕಲರಿಗೆ ತಲುಪಿಲ್ಲ. ಸದರಿ ಶೌಚಾಲಯವನ್ನು ಅನ್ಯರು ಬಳಸುತ್ತಿದ್ದರ ಬಗ್ಗೆ 'ಕನ್ನಡಪ್ರಭ' ವರದಿ ಪ್ರಕಟಿಸಿತ್ತು. ಇದರಿಂದ ಜಾಗೃತಗೊಂಡ ಅಧಿಕಾರಿಗಳು ಅಂಗವಿಕಲರು ಮಾತ್ರ ಬಳಸುವಂತೆ ಚೀಟಿ ಅಂಟಿಸಿದ್ದರು. ಆ ಚೀಟಿ ಓದಿ ಅಲ್ಲಿಗೆ ಬರುವ ಅಂಗವಿಕಲರಿಗೆ ಮಾತ್ರ ಬೀಗದ ಕೀ ತಲುಪಿಲ್ಲ. ಆ ಕೀಗಳು ಯಾರ ಬಳಿ ಇವೆ ಎಂಬುದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಂಗವಿಕಲರಿಗೆ ಕೀ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.