'ಕಡಿಮೆ ದರದ ಪಡಿತರ ಸರಿಯಲ್ಲ'
ಕ.ಪ್ರ.ವಾರ್ತೆ , ರಾವಂದೂರು , ಆ. 21
ಸರ್ಕಾರ ಕಡಿಮೆ ಹಣಕ್ಕೆ ಅಕ್ಕಿ ನೀಡಿ ಮನುಷ್ಯರನ್ನು ಸೋಮಾರಿಯನ್ನಾಗಿಸುವ ಬದಲು ನಿರುದ್ಯೋಗ ಸಮಸ್ಯೆ ನಿವಾರಿಸುವತ್ತ ಗಮನ ಹರಿಸಬೇಕು ಎಂದು ಮುರುಘಾಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು.
ರಾವಂದೂರಿನ ಮುರುಘರಾಜೇಂದ್ರ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ 204ನೆ ಮಾಸಿಕ ಶರಣರ ಸ್ಮರಣೋತ್ಸವ, ಮಡಿವಾಳ ಮಾಚಿದೇವರ ಶರಣ ಸ್ಮರಣೋತ್ಸವದಲ್ಲಿ ಮಾತನಾಡಿದರು.
ಉಪನ್ಯಾಸಕ ನಿರಂಜನಬಾಬು ಮಾತನಾಡಿ, ವೈದಿಕ ಸಮಾಜದ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ನೊಂದವರ, ದಲಿತ ಪರ ಹೋರಾಟ ನಡೆಸಿದ ವಚನಕಾರರಲ್ಲಿ ಮಡಿವಾಳ ಮಾಚಿದೇವರು ಮೊದಲಿಗರು. ಶರಣರ ಸಾಹಿತ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿದ್ದ ಇವರು 350ಕ್ಕೂ ಹೆಚ್ಚು ವಚನ ರಚಿಸಿದ್ದಾರೆ. ಇಂತಹ ಮಾಹಾನ್ ಮಾನವತಾವಾದಿ ವಚನಕಾರ ಮತ್ತೊಬ್ಬರಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎಂಎಸ್ಸಿ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದ ರಾವಂದೂರುಕೆಳಗನಹಳ್ಳಿ ನಿವಾಸಿ ಕಿರಣ್ ಮತ್ತು ಉಪನ್ಯಾಸಕ ನಿರಂಜನಬಾಬು ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳು ಜಾನಪದ ಗೀತೆ ಮತ್ತು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಆರ್.ಎಸ್. ಮಹೇಶ್, ಆರ್.ಟಿ. ಸತೀಶ್, ಲಕ್ಷ್ಮಿ ನರಸಿಂಹಚಾರ್, ಆರ್. ರಘು, ಮುಖ್ಯೋಪಾದ್ಯಾಯ ಗುರುಸ್ವಾಮಿ ಇದ್ದರು.