ಗುರುರಾಯರ ಆರಾಧನೆ ಆರಂಭ
ಕ.ಪ್ರ.ವಾರ್ತೆ , ಮೈಸೂರು , ಆ. 21
ಶ್ರೀ ರಾಘವೇಂದ್ರ ಸ್ವಾಮಿಗಳ 342ನೆಯ ಆರಾಧನಾ ಮಹೋತ್ಸವವನ್ನು ನಗರದ ವಿವಿಧೆಡೆ ಬುಧವಾರ ಆರಂಭವಾಯಿತು.
ಆರಾಧನಾ ಮಹೋತ್ಸವ ಅಂಗವಾಗಿ ನಾರಾಯಣಶಾಸ್ತ್ರಿ ರಸ್ತೆಯ ಸುಬ್ಬರಾಯನ ಕೆರೆ ಸಮೀಪದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಪೂರ್ವಾರಾಧನೆ ಅಂಗವಾಗಿ ಬೆಳಗಿನ ಜಾವ 5ಕ್ಕೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಗುರುರಾಜರಿಗೆ ಪಾದಪೂಜೆ, ಸಹಸ್ರ ಪುಷ್ಪಾರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಅಲಂಕಾರ, ತೀರ್ಥಪ್ರಸಾದ ವಿನಿಯೋಗ, ಸ್ವಸ್ತಿವಾಚನ, ಮಹಾಮಂಗಳಾರತಿ ಹಾಗೂ ಶ್ರೇಯ- ಪ್ರಾರ್ಥನೆ ನಡೆಯಿತು. ಬೆಳಗ್ಗೆ 10 ರಿಂದ ಸ್ವರ ಭಜನಾ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಲ್ಲದೆ ಎಂದಿನಂತೆ ಅಲಂಕಾರ ಸೇವೆ, ಸಂಪೂರ್ಣ ಸೇವೆ, ಕನಕಾಭಿಷೇಕ, ಮಹಾಪೂಜೆ, ರಜತ ತೊಟ್ಟಿಲು ಉತ್ಸವ ಮುಂತಾದ ಸೇವೆಗಳ ಮೂಲಕ ಭಕ್ತರು ಹರಕೆ ತೀರಿಸಿದರು. ಸಂಜೆ 7ಕ್ಕೆ ನಂಜನಗೂಡಿನ ಶಿವರಂಜಿನಿ ಕಲಾ ಬಳಗದ ಆರ್. ಸೋಮಸುಂದರ್ ಮತ್ತು ತಂಡದವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಜಯಲಕ್ಷ್ಮೀಪುರಂನ ರಾಘವೇಂದ್ರಸ್ವಾಮಿ ಸೇವಾ ಸಮಿತಿಯಿಂದ ಬೆಳಗ್ಗೆ ಸುಪ್ರಭಾತ, ಮಹಾ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಸರ್ವಸೇವೆ, ಪಾದಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.