ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಸರಾ ಪ್ರಯುಕ್ತ ಸೆ. 7, 8 ರಂದು ಸೇನಾ ಮೇಳ

Vishwanath S
Updated On : 22 Aug 2013, 12:20 pm

ಕ.ಪ್ರ.ವಾರ್ತೆ , ಮೈಸೂರು , ಆ. 21
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಮಹೋತ್ಸವ ಅಂಗವಾಗಿ ಸೆ. 7 ಮತ್ತು 8 ರಂದು ಸೇನಾ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸೇನಾ ಮೇಳ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಭೂಸೇನೆ, ವಾಯುದಳ, ನೌಕಾದಳಗಳ ಸೇನಾ ಸಾಹಸ ಚಟುವಟಿಕೆಗಳ ರೋಮಾಂಚಕ ಪ್ರದರ್ಶನ ಶಸ್ತ್ರಾಸ್ತ್ರಗಳ ಮತ್ತು ಉಪಕರಣಗಳ ಪ್ರದರ್ಶನ ಒಳಗೊಂಡಂತೆ ವಿವಿಧ ಪ್ರದರ್ಶನ ಇರುತ್ತದೆ ಎಂದರು.
ಮೇಳದ ಹಿನ್ನೆಲೆಯಲ್ಲಿ ಸೆ. 5 ಮತ್ತು 6 ರಂದು ಮೇಳ ಪ್ರಚಾರಾಂದೋಲನವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸುವರು. ಅಲ್ಲದೆ, ಅರಮನೆ ಆವರಣದಲ್ಲಿ ಸೆ. 6 ಮತ್ತು 7ರಂದು ಮಿಲಿಟರಿ ಬ್ಯಾಂಡ್ ಕಾರ್ಯಕ್ರಮವಿದೆ. ಪಿಆರ್‌ಟಿಸಿ, ಎಂಆರ್‌ಸಿ, ಎಂಇಜಿ, ಎಎಸ್‌ಸಿ, ಕೇಂದ್ರ ಹಾಗೂ ಮತ್ತು ಕಾಲೇಜು ಹಾಗೂ ಎನ್‌ಸಿಸಿ ಕೇಂದ್ರ ತಂಡಗಳು ಬ್ಯಾಂಡ್‌ನಲ್ಲಿ ಪಾಲ್ಗೊಳ್ಳುತ್ತವೆ ಎಂದು ಕರ್ನಾಟಕ- ಕೇರಳ ಸಬ್ ಏರಿಯಾದ ಕರ್ನಲ್ ಆಡಮಿನಿಸ್ಟ್ರೇಷನ್‌ನ ಎಸ್.ಆರ್. ಕಿರಣ್ ತಿಳಿಸಿದರು. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರಿಗೆ ತಿಳಿಸಿದ ಜಿಲ್ಲಾಧಿಕಾರಿ, ಮೇಳಕ್ಕೆ ಸೂಕ್ತ ಬಂದೂಬಸ್ತ್ ಮತ್ತು ಬೈಕ್ ರ್ಯಾಲಿಗೆ ಸುಗಮ ಸಂಚಾರ ವ್ಯವಸ್ಥೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದರು.
ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳುವ ಸಲುವಾಗಿ ಜಿಲ್ಲೆಯ ಹಾಗೂ ನಗರದ ವಿವಿಧೆಡೆಯಿಂದ ಮೇಳದ ಸ್ಥಳಕ್ಕೆ ಬರಲು ಅನುಕೂಲವಾಗುವಂತೆ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ನಗರ, ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.ಕಾರ್ಯಕ್ರಮಕ್ಕೆ ಒಂದು ಸಾವಿರ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಮೇಳಕ್ಕೆ ಕರೆತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದ ಅವರು, ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸುವುದರಿಂದ ಸೇನೆಯ ಬಗ್ಗೆ ಅರಿವು ಮೂಡುತ್ತದೆ ಎಂದರು. ಎಲ್ಲ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಮೇಳ ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು. ಸಭೆಯಲ್ಲಿ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರಾಜೇಶ್ ಸಾಲಿಯಾನ್, ಎಂಡಿಎ ಆಯುಕ್ತರು, ನಗರ ಪಾಲಿಕೆ ಹೆಚ್ಚುವರಿ ಆಯುಕ್ತರು, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement