ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ
ಕ.ಪ್ರ.ವಾರ್ತೆ , ಮೈಸೂರು , ಆ. 21
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನ್ನು ಮೇಟಗಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮೈಸೂರು ತಾಲೂಕು ಶ್ಯಾದನಹಳ್ಳಿ ನಿವಾಸಿ ನಾಗಪ್ಪ (35) ಕೊಲೆಯಾದವರು. ಇವರನ್ನು ಕೊಲೆ ಮಾಡಿದ ಪತ್ನಿ ಭವ್ಯ ಮತ್ತು ಆಕೆಯ ಪ್ರಿಯಕರ ರಾಘವೇಂದ್ರ ಬಂಧಿತ ಆರೋಪಿಗಳು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚನ್ನಗಿರಿಕೊಪ್ಪಲಿನ ಭವ್ಯ ಮತ್ತು ನಾಗಪ್ಪ ಅವರಿಗೆ 7 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ಯಾದನಹಳ್ಳಿ ಗ್ರಾಮದ ರಾಘವೇಂದ್ರ ಎಂಬಾತನೊಂದಿಗೆ ಭವ್ಯ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವು ಇತ್ತೀಚೆಗಷ್ಟೇ ಬಯಲಾಗಿತ್ತು.
ಇದರಿಂದ ಕುಪಿತಗೊಂಡ ನಾಗಪ್ಪ, ಭವ್ಯಳೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ. ಅವರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ. ಇದರಿಂದಾಗಿ ಭವ್ಯ, ಪ್ರಿಯಕರ ರಾಘವೇಂದ್ರ ಸೇರಿ ನಾಗಪ್ಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಮದ್ಯವ್ಯಸನಿಯಾದ ನಾಗಪ್ಪನಿಗೆ ಆ.15 ರಂದು ಕುಡಿಯಲು ಭವ್ಯ ಹಣ ನೀಡಿದ್ದಾಳೆ. ಕಂಠಪೂರ್ತಿ ಕುಡಿದು ಬಂದಿದ್ದ ನಾಗಪ್ಪನನ್ನು ಪುಸಲಾಯಿಸಿ ಗ್ರಾಮದ ಪಕ್ಕದಲ್ಲೇ ಹಾದುಹೋಗಿರುವ ವರುಣ ನಾಲೆ ದಡಕ್ಕೆ ಕರೆದುಕೊಂಡು ಹೋಗಿದ್ದಾಳೆ. ಪ್ರಿಯಕರ ರಾಘವೇಂದ್ರನೊಂದಿಗೆ ಸೇರಿ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾರೆ.
ಆ.16 ರಂದು ತನ್ನ ಪತಿ ಕೆರೆ ಕಡೆ ಹೋದವ ಇನ್ನೂ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಈಕೆಯ ಮಾತನ್ನು ನಿಜವೆಂದು ನಂಬಿದ ಗ್ರಾಮಸ್ಥರು ಕೂಡಲೇ ಎಲ್ಲೆಡೆ ಹುಡುಕಾಡಿದರೂ ನಾಗಪ್ಪ ಪತ್ತೆಯಾಗಲಿಲ್ಲ. ಆದರೆ, ಆ.17 ರಂದು ನಾಗಪ್ಪ ಶವ ಶ್ರೀರಾಮಪುರದ ಬಳಿ ವರುಣ ನಾಲೆಯಲ್ಲಿ ಪತ್ತೆಯಾಗಿತ್ತು.
ಈ ನಡುವೆ ಪೊಲೀಸರಿಗೆ ಭವ್ಯ ಮತ್ತು ರಾಘವೇಂದ್ರ ಅನೈತಿಕ ಸಂಬಂಧ ವಿಚಾರ ಗೊತ್ತಾಗಿ, ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಈ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂಬಂಧ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ವಿವೇಕಾನಂದ ಮತ್ತು ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.
ಬಾಲಕಿ ಸಾವು: ಪ್ರಕರಣ ದಾಖಲು
ಮೈಸೂರು: ಬಾಲಕಿ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿಲ್ಲ, ಆಕೆಯ ಹೆತ್ತವರೆ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಸಾಕು ತಂದೆ ತಾಯಿ ದೂರು ನೀಡಿದ್ದು, ಈ ಸಂಬಂಧ ನಜರ್ಬಾದ್ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿದ್ಯಾನಗರ ನಿವಾಸಿ ಜಗದೀಶ್, ಗಾಯತ್ರಿ ಎಂಬವರ ಪುತ್ರಿ ಸೌಮ್ಯ (8) ಮಂಗಳವಾರ ಆಟವಾಡುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಸೌಮ್ಯ ಹೆತ್ತವರು ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದರು. ಹೀಗಾಗಿ ಜಗದೀಶನ ಅಕ್ಕ ಮಂಜುಳ ಮತ್ತು ಭಾವ ರವಿಕುಮಾರ್ ಅವರು ಸೌಮ್ಯಳನ್ನು ತಮಿಳುನಾಡಿನಲ್ಲಿ ಸಾಕುತ್ತಿದ್ದರು. ಸೌಮ್ಯಗೆ 5 ವರ್ಷವಾಗಿದ್ದಾಗ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಬಂದು, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಸಾಕು ತಂದೆ ತಾಯಿಯಾದ ಮಂಜುಳ, ರವಿಕುಕುಮಾರ್ ದೂರಿದ್ದಾರೆ. ಈ ಸಂಬಂಧ ನಜರ್ಬಾದ್ ಠಾಣೆ ಪ್ರಭಾರ ಇನ್ಸ್ಪೆಕ್ಟರ್ ಸಿ.ಟಿ. ಜಯಕುಮಾರ್, ಎಸ್ಐ ಉದಯರವಿ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.