ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೇಣುಗೋಪಾಲಸ್ವಾಮಿ ದೇಗುಲಕ್ಕೆ ಶತಮಾನ

Vishwanath S
Updated On : 22 Aug 2013, 12:17 pm

ಕ.ಪ್ರ.ವಾರ್ತೆ , ಮೈಸೂರು , ಆ. 20
ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಯದುವಂಶದ ಅರಸರ ಕೊಡುಗೆ ಅಗಣ್ಯವಾದದು. ಉತ್ತಮ ಆಡಳಿತದ ಜತೆಗೆ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕತೆಯನ್ನು ಕಟ್ಟಿ ಬೆಳೆಸಿದ ರಾಜರ ಕೈಂಕರ್ಯ ಇಂದಿಗೂ ಸ್ಮರಣೀಯವಾದದು.
ಮೈಸೂರು ಅರಸರ ಕುಟುಂಬದ ಕೊಡುಗೆಗಳಲ್ಲಿ ಒಂದಾದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಇದೀಗ ಶತಮಾನದ ಸಂಭ್ರಮ. ಪ್ರಿನ್ಸ್ ಸುಬ್ರಹ್ಮಣ್ಯ ರಾಜೇ ಅರಸ್ ಅವರು ಸ್ವರ್ಗಸ್ಥರಾದ ಸಂದರ್ಭದಲ್ಲಿ ಅವರಿಗೆ ಸದ್ಗತಿ ಸಿಗಲೆಂಬ ಆಶಯದೊಂದಿಗೆ ಹಾಗೂ ಪತಿಯ ನೆನಪಿಗಾಗಿ ಧರ್ಮಪತ್ನಿ ಲಕ್ಷ್ಮಮ್ಮಣ್ಣಿ ಅವರು 1913 ರಲ್ಲಿ ಈ ದೇವಸ್ಥಾನ ನಿರ್ಮಿಸಿ ಶ್ರೀ ವೇಣುಗೋಪಾಲಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದಲೂ ಇಂದಿನವರೆಗೂ ಪ್ರತಿದಿನ ಪೂಜೆ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗಿದೆ.
ದೇವಸ್ಥಾನದ ಕಟ್ಟಡಗಳು, ನೆಲಹಾಸು ಶಿಥಿಲವಾಗಿದ್ದನ್ನು ಗಮನಿಸಿದ ಕೆಲವು ಮಂದಿ ಭಕ್ತರು ಟ್ರಸ್ಟ್ ಸ್ಥಾಪಿಸಿಕೊಂಡು ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾದರು. ದಾನಿಗಳಿಂದ ಹಣ ಸಂಗ್ರಹಿಸಿ ಕಳೆದ ಜನವರಿಯಿಂದಲೇ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಹೆಸರುವಾಸಿಯಾಗಿದ್ದ ಗಂಜೀಫರ್ ಕಲೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ರಘುಪತಿ ಭಟ್ ಮುಂದಾಳತ್ವದಲ್ಲಿ ಚಿತ್ರಕಲೆ ಬಿಡಿಸಲಾಗಿದೆ. ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ಶ್ರೀಕೃಷ್ಣನ ಪ್ರಭಾವಳಿ ಅಮೋಘವಾಗಿ ಮೂಡಿಬಂದಿದೆ. ಕೃಷ್ಣ ಶಿಲೆಯಲ್ಲಿಯೇ ಗೋಪಾಲನ ಮೂರ್ತಿಯನ್ನು ಸುಂದರವಾಗಿ ಕೆತ್ತಲಾಗಿದೆ. ಶ್ರೀಕೃಷ್ಣ ಬಲಗಡೆ ಶ್ರೀದೇವಿ, ಎಡಗಡೆ ಭೂದೇವಿಯ ವಿಗ್ರಹಗಳು ಕಂಗೊಳಿಸುತ್ತಿವೆ. ಗೋಪಾಲನ ಜತೆಗೆ ಗೋವು, ಕರು ನಿಂತಿರುವುದು ಇಲ್ಲಿನ ವಿಶೇಷವಾಗಿದೆ.
ಪಾಂಚರಾತ್ರಶಾಸ್ತ್ರ ಪ್ರಕಾರ ನಿರ್ಮಾಣ: ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ಆಶೀರ್ವಾದದೊಂದಿಗೆ, ಆಗಮಶಾಸ್ತ್ರ ರೀತ್ಯಾ ದೇವಸ್ಥಾವನ್ನು ನಿರ್ಮಿಸಲಾಗಿದೆ. ಶಿಲ್ಪಶಾಸ್ತ್ರದ ಪ್ರಕಾರ ವಿಶೇಷ ಶಿಲೆಯಿಂದ ಮೂರ್ತಿಗಳನ್ನು ಕೆತ್ತಿಸಲಾಗಿದೆ. ಕೃಷ್ಣಶಿಲೆಯಿಂದ ಕಂಗೊಳಿಸುತ್ತಿರುವ ವೇಣುಗೋಪಾಲನ ಪ್ರಭಾವಳಿ ಅಚ್ಚಳಿಯದೆ ಉಳಿದಿದೆ. ಪಾಂಚರಾತ್ರಶಾಸ್ತ್ರದ ಪ್ರಕಾರ ಸ್ವಾಮಿಯ ದರ್ಶನ ಪಡೆಯುವುದೇ ಜೀವನದ ಸೌಭಾಗ್ಯವಾಗಿದೆ. ಲಕ್ಷ್ಮಮ್ಮಣ್ಣಿಯವರು ತಮ್ಮ ಪತಿಯವರಿಗೆ ಸದ್ಗತಿ ಸಿಗಲೆಂದು ಕಟ್ಟಿಸಿದ್ದು ಇದೇ ಉದ್ದೇಶದಿಂದ. ಸ್ವರ್ಗ ಪ್ರಾಪ್ತಿಯಾಗ ಬಯಸುವ ಪಿತೃಗಳು ಸ್ವಾಮಿಯ ದರ್ಶನ ಮಾಡಿದರೆ ಪರಲೋಕದಲ್ಲಿ ಮೋಕ್ಷ, ಇಹಲೋಕದಲ್ಲಿ ಕಾಮನೆಗಳು ಲಭಿಸುತ್ತದೆ ಎಂಬುದನ್ನು ಶಾಸ್ತ್ರ ಹೇಳುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಎನ್.ಬಿ. ಮೋಹನಕುಮಾರ ಭಟ್ ಕನ್ನಡಪ್ರಭಕ್ಕೆ ತಿಳಿಸಿದರು.
ಈ ದೇವಸ್ಥಾನವನ್ನು ಅಂದಿನಿಂದ ಇಂದಿನವರೆಗೂ ಧರ್ಮದರ್ಶಿಗಳ ಮಂಡಳಿ ನಡೆಸಿಕೊಂಡು ಬರುತ್ತಿದೆ. ವರ್ಷದಲ್ಲಿ ಕೊಠಾರೋತ್ಸವ, ರಥಸಪ್ತಮಿ, ಆಳ್ವಾರ್ ತಿರುನಕ್ಷತ್ರ, ಡೋಲೋತ್ಸವ, ಪ್ರತಿ ಶ್ರಾವಣ ಶನಿವಾರ ನಡೆಯುತ್ತವೆ.
ಭಕ್ತರ ಬಳಗವು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ ಸ್ಥಾಪಿಸಿಕೊಂಡಿದೆ. ಟ್ರಸ್ಟ್ ಅಧ್ಯಕ್ಷ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಎಸ್. ಶ್ರೀಧರ ರಾಜೇ ಅರಸ್, ಕಾರ್ಯದರ್ಶಿ ಟಿ. ಶೋಭಾ ಮದನಗೋಪಾಲ್ ರಾಜೇ ಅರಸ್, ಖಜಾಂಚಿ ಶ್ರೀರಾಮ್ ದೇವರಾಜೇ ಅರಸ್, ಟ್ರಸ್ಟಿಗಳಾದ ಕೆ.ಜಿ. ಮದನಗೋಪಾಲ್ ರಾಜೇ ಅರಸ್ ಸೇರಿದಂತೆ 120 ಮಂದಿ ಭಕ್ತರು ದೇಣಿಗೆ ನೀಡಿದ್ದಾರೆ.
ರಾಜ ಕುಟುಂಬ ಸ್ಥಾಪಿಸಿರುವ ಶತಮಾನದ ಈ ದೇವಸ್ಥಾನದಲ್ಲಿ ಶ್ರೀಕೃಷ್ಣನ ಪ್ರಭಾವಳಿಯೇ ವಿಶೇಷವಾದದು. ವೇಣುಗೋಪಾಲನೊಂದಿಗೆ ಶ್ರೀದೇವಿ, ಭೂದೇವಿ, ಹಸು, ಕರು ಇರುವುದು ಮತ್ತೊಂದು ವಿಶೇಷ.
- ಬಿ.ಎಸ್. ಶ್ರೀಧರ ರಾಜೇ ಅರಸ್, ಟ್ರಸ್ಟ್‌ನ ಅಧ್ಯಕ್ಷರು
ಶತಮಾನದ ದೇವಸ್ಥಾನದ ನಿರ್ಮಾಣಕ್ಕೆ 120ಕ್ಕೂ ಹೆಚ್ಚು ಮಂದಿ ದೇಣಿಗೆ ನೀಡಿದ್ದಾರೆ. ಅವರ ಸಹಾಯದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದೆ.
- ಕೆ.ಜಿ. ಮದನ ಗೋಪಾಲ್ ರಾಜೇ ಅರಸ್, ಟ್ರಸ್ಟಿ

- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement