ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೂಕ್ಷ್ಮ ಜೀವಶಾಸ್ತ್ರ ವಿಜ್ಞಾನಿಗಳ ಸಭೆ

Vishwanath S
Updated On : 22 Aug 2013, 12:22 pm

ಮೈಸೂರು: ಭಾರತೀಯ ಸೂಕ್ಷ್ಮ ಜೀವಶಾಸ್ತ್ರ ವಿಜ್ಞಾನಿಗಳ ಸಂಘ ಮೈಸೂರು ಶಾಖೆಯು ಆ. 23ರ ಮಧ್ಯಾಹ್ನ 3.30ಕ್ಕೆ ಸಿಎಫ್‌ಟಿಆರ್‌ಐ ಅಸೆಂಬ್ಲಿ ಹಾಲ್‌ನಲ್ಲಿ ಸೂಕ್ಷ್ಮ ಜೀವಶಾಸ್ತ್ರ ವಿಜ್ಞಾನಿಗಳ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಎನ್. ಉಪೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ. ರಾಮ್ ರಾಜಶೇಖರ್ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಶಾಖೆಯ ಅಧ್ಯಕ್ಷೆ ಡಾ. ಸಹಿದಾ ಕೌಸರ್ ಫಾತಿಮ ಮತ್ತು ಕಾರ್ಯದರ್ಶಿ ಡಾ.ಬಿ.ವೈ. ಸತೀಶ್‌ಕುಮಾರ್ ಭಾಗವಹಿಸುವರು.

ವಿದ್ಯಾರ್ಥಿ ವೇದಿಕೆ ಉದ್ಘಾಟನೆ
ಮೈಸೂರು: ಶಾರದಾ ವಿಲಾಸ ಕಾಲೇಜಿನ ವಿದ್ಯಾರ್ಥಿ ವೇದಿಕೆ ಉದ್ಘಾಟನಾ ಕಾರ್ಯಕ್ರಮ ಆ. 23ರ ಬೆಳಗ್ಗೆ 11.30ಕ್ಕೆ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯುವುದು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ, ಸಂಸ್ಥೆಂಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ ಭಾಗವಹಿಸುವರು.

ಪ್ರತಿಭಾ ಪ್ರದರ್ಶನ
ಮೈಸೂರು: ಮಹಾಜನ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಆ. 23ರ ಬೆಳಗ್ಗೆ 10.45ಕ್ಕೆ ಶಾಲೆಯ ಸುಬ್ಬಲಕ್ಷ್ಮೀ ಸಭಾಂಗಣದಲ್ಲಿ ನಡೆಯುವುದು. ಮೈಸೂರು ವಿವಿ ಲಲಿತ ಕಲಾ ಕಾಲೇಜಿನ ಉಪನ್ಯಾಸಕ ಡಾ.ಕೆ.ಟಿ. ಉದಯಕಿರಣ್, ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಗೌರವ ಕಾರ್ಯದರ್ಶಿ ಡಾ.ಪಿ.ಆರ್. ನಾಗಾಶ್ರೀನಿವಾಸ ಭಾಗವಹಿಸುವರು.

ವಸ್ತು ಪ್ರದರ್ಶನ
ಮೈಸೂರು: ವಿಜಯನಗರ 2ನೇ ಹಂತದ ಅನಂತಗೀತಾ ವಿದ್ಯಾಲಯವು ಆ. 23ರ ಬೆಳಗ್ಗೆ 9.30ಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿದೆ.

ಇಂದು ಪ್ರತಿಭಟನೆ
ಮೈಸೂರು: ಈಜಿಪ್ಟ್‌ನಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಆ. 22ರ ಬೆಳಗ್ಗೆ 11.30ಕ್ಕೆ ನಗರದ ಮಿಲಾದ್‌ಬಾಗ್ ಬಳಿ ಪ್ರತಿಭಟಿಸುವರು.

ನಟರಾಜ್ ತಾ. ಪತ್ರಕರ್ತರ ಸಂಘದ ಅಧ್ಯಕ್ಷ
ಹುಣಸೂರು: ಹುಣಸೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಾಗಿ ಹನಗೋಡು ನಟರಾಜ್ (ಅಧ್ಯಕ್ಷರು), ಬನ್ನಿಕುಪ್ಪೆ ಚೆಲುವರಾಜ್ (ಪ್ರಧಾನ ಕಾರ್ಯದರ್ಶಿ), ಆರ್. ಕೃಷ್ಣ (ಗೌರವಾಧ್ಯಕ್ಷರು), ಕೆ.ಪಿ. ಸಚ್ಚಿನ್ ಪ್ರಕಾಶ್, ಹನಗೋಡು ವೆಂಕಟಪ್ಪ (ಉಪಾಧ್ಯಕ್ಷರು), ಮಹಮ್ಮದ್ ರಫೀಕ್, ಎಚ್.ಜೆ. ಯೋಗೇಂದ್ರ (ಕಾರ್ಯದರ್ಶಿಗಳು), ಧರ್ಮಾಪುರ ನಾರಾಯಣ, ಎಚ್.ಎಸ್. ಸಚ್ಚಿತ್, ದಾ.ರಾ. ಮಹೇಶ್, ಎಚ್.ಆರ್. ಕೃಷ್ಣಕುಮಾರ್, ಜೆ. ಮಹದೇವ್, ಎಚ್.ಎನ್. ದಯಾಕರ್, ಶಂಕರೇಗೌಡ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

ವಿದ್ಯುತ್ ವ್ಯತ್ಯಯ
ನಂಜನಗೂಡು: ಇಲ್ಲಿನ ಪಟ್ಟಣ ವ್ಯಾಪ್ತಿಯ ಹುಲ್ಲಹಳ್ಳಿ ರಸ್ತೆಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 23ರ ಬೆಳಗ್ಗೆ 10 ರಿಂದ ಸಂಜೆ 3 ರವರೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕುಡಿಯುವ ನೀರಿನ ಸ್ಥಾವರಗಳು, ಟೀಚರ್ಸ್ ಕಾಲೋನಿ, ಮಹದೇಶ್ವರ ಬಡಾವಣೆ, ಬಸವನಗುಡಿ ಬ್ಲಾಕ್, ಕೊರೆಹುಂಡಿ ಹಾಗೂ ಹುಲ್ಲಹಳ್ಳಿ ರಸ್ತೆಯ ಅಕ್ಕಪಕ್ಕ ಪ್ರದೇಶಗಳು.

ಗೃಹಿಣಿ ಪರಾರಿ
ಹುಣಸೂರು: ಗೃಹಿಣಿಯೊಬ್ಬಳು ಪರ ಪುರುಷನೊಂದಿಗೆ ಪರಾರಿಯಾಗಿರುವ ಘಟನೆ ಕಲ್ಕುಣಿಕೆಯಲ್ಲಿ ಜರುಗಿದೆ. ಇಲ್ಲಿನ ಕಲ್ಕುಣಿಕೆಯ ಅರಳಿಮರದ ಬೀದಿಯ ನಿವಾಸಿ ಶಿವಾನಂದ ಜೊತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಪಟ್ಟಣದ ಯುವತಿಯೊಂದಿಗೆ ಎರಡು ವರ್ಷದ ಹಿಂದೆ ಮದುವೆಯಾಗಿತ್ತು. ಮನೆಯಿಂದ ತೆರಳುವಾಗ 45 ಗ್ರಾಂ. ಚಿನ್ನ ಹಾಗೂ 40 ಸಾವಿರ ನಗದು ಹಣ ತೆಗೆದುಕೊಂಡು ಹೋಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಲಾರಿ ಮುಷ್ಕರ ಮುಂದುವರಿಕೆ
ಮೈಸೂರು: ಮರಳು ಸಾಗಾಣಿಕೆಗೆ ರಹದಾರಿ ನೀಡುವಂತೆ ಒತ್ತಾಯಿಸಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಸೋಮವಾರ ಮಧ್ಯರಾತ್ರಿಯಿಂದ ಆರಂಭಿಸಿರುವ ಮುಷ್ಕರವು ಬುಧವಾರ ಸಹ ಮುಂದುವರಿಯಿತು. ಮರಳು ಸಾಗಿಸಲು ರಹದಾರಿ ನೀಡಬೇಕು. ಲಾರಿ ಬಾಡಿಗೆಯನ್ನು 5,000 ಹೆಚ್ಚಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ ತಿಳಿಸಿದ್ದಾರೆ.
ಜಿಲ್ಲಾಡಳಿತ ಸ್ಪಷ್ಟನೆ: ಜಿಲ್ಲಾಡಳಿತವು ಸ್ಪಂದಿಸಿಲ್ಲ ಎಂಬ ಮರಳು ಲಾರಿ ಮಾಲೀಕರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಮರಳು ಸಮಿತಿ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಎಲ್ಲ ವೆಚ್ಚ ಸೇರಿ 4700 ಪರಿಷ್ಕೃತ ದರ ನಿಗದಿಪಡಿಸಲು ಜಿಲ್ಲಾಡಳಿತವು ಮರಳು ಲಾರಿ ಮಾಲೀಕರೊಂದಿಗೆ ಚರ್ಚಿಸಿತ್ತು. ಆದರೆ, ಲಾರಿ ಮಾಲೀಕರ ಸಂಘದವರು 5000 ನಿಗದಿಪಡಿಸಲು ಒತ್ತಾಯಿಸಿದ ಕಾರಣ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಇಳಿಮುಖವಾದಲ್ಲಿ ಮತ್ತೆ ಮರಳು ಗಣಿಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಬಹುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮರಳು ಪೂರೈಕೆಯನ್ನು ಅರ್ಹರಿಗೆ ಸೀಮಿತಗೊಳಿಸಿದ್ದು, ಹೆಚ್ಚಿನ ಮರಳು ಉತ್ಪಾದನೆ ಆದಲ್ಲಿ ಮರಳು ಲಾರಿಗಳ ಮಾಲೀಕರಿಗೆ ವಿತರಿಸುವ ಉದ್ದೇಶವಿದೆ. ಜಿಲ್ಲಾಡಳಿತವು ಸಕಾರಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗ ಮೇಳ
ಮೈಸೂರು: ನಗರದ ಸರಸ್ವತಿಪುರಂನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆ. 26ರ ಬೆಳಗ್ಗೆ 10.30ಕ್ಕೆ ಉದ್ಯೋಗ ಮೇಳ ಏರ್ಪಡಿಸಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣ, ಅನುತ್ತೀರ್ಣ, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ, ಐಟಿಐ, ಫಿಟ್ಟರ್, ಮೆಕಾನಿಕ್, ಟರ್ನರ್, ಎಲೆಕ್ಟ್ರಿಷಿಯನ್, ಡಿಪ್ಲೊಮಾ ಮತ್ತು ಜೆಒಸಿಗಳಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಯುವಕ, ಯುವತಿಯರು ವಿವಿಧ ಕಂಪನಿಗಳ ನಿಯೋಜಕರಿಂದ ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೆ ಆಯ್ಕೆ ಮಾಡಲಾಗುವುದು. ಹಿಂದೂಜಾ ಗ್ಲೋಬಲ್ ಸೆಲ್ಯೂಷನ್, ಕಸ್ಟಮರ್ ರಿಲೇಷನ್ ಆಫೀಸರ್ 150 ಹುದ್ದೆಗಳಿಗೆ ಮತ್ತು ಐಎಫ್‌ಬಿಐ ಅವರಿಂದ ಐಸಿಐಸಿಐ ಬ್ಯಾಂಕ್‌ನಲ್ಲಿ ಜ್ಯೂನಿಯರ್ ಅಧಿಕಾರಿಯ 100 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಬಯೋಡೆಟಾದೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಸಿ. ವಿಶ್ವನಾಥ ಭರಣಿ, ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮೈಸೂರು ಇವರ ದೂ. 0821- 2489972 ಸಂಪರ್ಕಿಸಬಹುದು.

25ರಂದು ಕವನ ಸಂಕಲನ ಬಿಡುಗಡೆ
ಮೈಸೂರು: ನೆಲದನಿ ಸಾಂಸ್ಕೃತಿಕ ಸಂಸ್ಥೆಯು ಆ. 25ರ ಬೆಳಗ್ಗೆ 10.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಲೇಖಕ ಟಿ. ಸತೀಶ್ ಜವರೇಗೌಡ ಅವರ ಹೊಳೆ ಜಂಗಮನ ಜೋಳಿಗೆ ಕವನ ಸಂಕಲನ ಬಿಡುಗಡೆ ಸಮಾರಂಭ ಆಯೋಜಿಸಿದೆ. ಸಾಹಿತಿ ಡಾ. ಸಿಪಿಕೆ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಪುಸ್ತಕ ಬಿಡುಗಡೆ ಮಾಡುವರು.

ನಾಳೆ ಜಿಪಂನಲ್ಲಿ ಕಾರ್ಯಾಗಾರ
ಮೈಸೂರು: ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿ, ಬೆಂಗಳೂರಿನ ಎನ್‌ಆರ್‌ಡಿಎಂಎಸ್ ವಿಭಾಗ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಂಯುಕ್ತವಾಗಿ ಅಭಿವೃದ್ಧಿಯಲ್ಲಿ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಪಾತ್ರ ಒಂದು ದಿನದ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಜಿಪಂ ಸಭಾಂಗಣದಲ್ಲಿ ಆ. 23ರಂದು ಆಯೋಜಿಸಿದೆ.  ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ. ಪೃಥ್ವಿರಾಜ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿಯ ಹಿರಿಯ ವಿಜ್ಞಾನಿಗಳು ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಬಗ್ಗೆ ತರಬೇತಿ ನೀಡುವರು. ಕಾರ್ಯಾಗಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳುವ ದೃಷ್ಟಿಯಿಂದ ಮೈಸೂರು ವಿಭಾಗದ ಎಲ್ಲಾ ಅಧಿಕಾರಿಗಳು ಈ ಕಾರ್ಯಾಗಾರದ ಸಂಪೂರ್ಣ ಮಾಹಿತಿ ಪಡೆದುಕೊಂಡು ತಮ್ಮ ಇಲಾಖೆಗಳಲ್ಲಿ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ಯೋಜನಾಧಿಕಾರಿ ಬಿ.ಎಂ. ಪ್ರದೀಪ್ ಕುಮಾರ್, ಎಂ. ವಿನೋದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9341151618  ಸಂಪರ್ಕಿಸಬಹುದು.

ಬ್ಲೇಡ್ ತೋರಿಸಿ ದೋಚಿದ್ದವರ ಸೆರೆ
ಮೈಸೂರು: ಬ್ಲೇಡ್ ತೋರಿಸಿ ಮೊಬೈಲ್ ಮತ್ತು ಪರ್ಸ್ ದೋಚಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಸೋಮೇಶ್ (19) ಮತ್ತು ಮಂಜುನಾಥ್ (18) ಬಂಧಿತ ಆರೋಪಿಗಳು. ಅಭಿಷೇಕ್ ಮತ್ತು ಪ್ರತಾಪ್ ಎಂಬವರು ಪರಾರಿಯಾಗಿದ್ದಾರೆ. ಈ ನಾಲ್ವರು ಸೇರಿಕೊಂಡು ಕರ್ಜನ್ ಪಾರ್ಕ್ ಬಳಿ ಸ್ನೇಹಿತನೊಂದಿಗೆ ಹೋಗುತ್ತಿದ್ದ ರಕ್ಷಿತ್‌ಗೆ ಬ್ಲೇಡ್ ತೋರಿಸಿ, 500, ಪರ್ಸ್ ಮತ್ತು ಮೊಬೈಲ್ ದೋಚಿದ್ದರು. ಸಾರ್ವಜನಿಕರ ಸಹಾಯದಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದೇವರಾಜ ಠಾಣೆ ಇನ್ಸ್‌ಪೆಕ್ಟರ್ ಕಾಂತರಾಜು, ಎಸ್‌ಐಗಳಾದ ಬಾಲಕೃಷ್ಣ, ಲೇಪಾಕ್ಷ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement