ಅರಮನೆಗೆ ಅಮೆರಿಕದ ಗವರ್ನರ್ ಭೇಟಿ
ಕ.ಪ್ರ.ವಾರ್ತೆ , ಮೈಸೂರು , ಆ. 23
ವಿಶ್ವವಿಖ್ಯಾತ ಮೈಸೂರು ಅರಮನೆಗೆ ಶುಕ್ರವಾರ ಅಮೆರಿಕದ ಅರಿಜೋನಿಯಾ ಗವರ್ನರ್ ನ್ಯಾಯಮೂರ್ತಿ ಕೆ. ಬ್ರೇವರ್ ಮತ್ತು ಕುಟುಂಬದವರು ಭೇಟಿ ನೀಡಿದ್ದರು.ಬೆಳಗ್ಗೆ ಅರಮನೆಗೆ ಭೇಟಿ ನೀಡಿದ ಬ್ರೇವರ್ ಮತ್ತು ಕುಟುಂಬದವರು ಅರಮನೆಯನ್ನು ವೀಕ್ಷಿಸಿದರು. ಬಳಿಕ ಕೆಆರ್‌ಎಸ್‌ಗೆ ತೆರಳಿದರು.
ಅರಮನೆಗೆ ಭೇಟಿ ನೀಡಿದ ಬ್ರೇವರ್ ಅವರನ್ನು ಅರಮನೆ ಮಂಡಳಿ ಉಪ ನಿದೇರ್ಶಕ ಟಿ.ಎಸ್. ಸುಬ್ರಹ್ಮಣ್ಯ ಆತ್ಮೀಯವಾಗಿ ಸ್ವಾಗತಿಸಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಿದರು. ಬಳಿಕ ಅವರು ಅಂಧರಿಗಾಗಿ ತಯಾರಿಸಿರುವ ಉಬ್ಬು ಅರಮನೆಯನ್ನು ಸ್ಪರ್ಶಿಸಿ ಅರಮನೆ ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕೆ. ಬ್ರೀವರ್ ಅವರ ಕುಟುಂಬದವರಾದ ಮೈಕೆಲ್, ಸಾಂಡ್ರ, ಡೇವಡ್ ರಾಸ್, ಜಾನ್‌ಕೇಟರ್, ಡಾ. ರಾಮಕೃಷ್ಣ ಇದ್ದರು.
ಇಂದು ವಿದ್ಯುತ್ ವ್ಯತ್ಯಯ
ಮೈಸೂರು: ಸೆಸ್ಕ್ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಆ. 24 ರಂದು ನಗರದ ಕೆಲ ಬಡಾವಣೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ. ಅಶೋಕಪುರಂ, ಕೃಷ್ಣಮೂರ್ತಿಪುರಂ, ಬಿಗ್‌ಬಜಾರ್, ಜೈನ್ ಭವನ, ರಾಮಸ್ವಾಮಿ ವೃತ್ತ, ಗೀತಾ ರಸ್ತೆ ಹಾಗೂ ಚಾಮರಾಜಪುರಂ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಆಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಕೋರಿದ್ದಾರೆ.
ನಾವಿಕ ಸಮ್ಮೇಳನಕ್ಕೆ ಆಹ್ವಾನ
ಮೈಸೂರು: ಅಮೆರಿಕಾದ ಬೋಸ್ಟನ್‌ನಲ್ಲಿ ಆ. 30 ರಿಂದ ನಾವಿಕ ಸಮಿತಿಯಿಂದ ನಡೆಯುವ 2ನೇ ವಿಶ್ವ ಕನ್ನಡ ಸಮಾವೇಶದಲ್ಲಿ ಭಾಗವಹಿಸಲು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬೆಳ್ಳಶೆಟ್ಟಿ ಸಿದ್ದಯ್ಯ ಅವರನ್ನು ಆಹ್ವಾನಿಸಲಾಗಿದೆ.
ದಂಪತಿಗೆ ಆಹ್ವಾನ
ಮೈಸೂರು: ನಾವಿಕ ಸಮಾವೇಶದಲ್ಲಿ ಮೈಸೂರಿನ ಪ್ರೊ. ಎಸ್. ಮಲ್ಲಣ್ಣ ಮತ್ತು ಪ್ರೊ. ಕೆ.ಆರ್. ಪ್ರೇಮಲೀಲಾ ಅವರನ್ನು ಆಹ್ವಾನಿಸಲಾಗಿದೆ. ಪ್ರೊ. ಪ್ರೇಮಲಿಲಾ ಅವರು ರಚಿಸಿರುವ ನಾವಿಕ ಸ್ವಾಗತ ಗೀತೆಯನ್ನು ಪ್ರೊ. ಮಲ್ಲಣ್ಣ ಅವರು ಅಲ್ಲಿರುವ ಕಲಾವಿದರೊಂದಿಗೆ ಹಾಡುವರು. ಈ ಗೀತೆಯ ಸಂಗೀತ ಸಂಯೋಜನೆಯನ್ನು ಮಲ್ಲಣ್ಣ ಅವರೇ ಮಾಡಿದ್ದಾರೆ. ಈ ವೇಳೆ ಮಲ್ಲಣ್ಣನವರು ಸುಗಮ ಸಂಗೀತ ಕಾರ್ಯಕ್ರಮ ನೀಡುವರು.
ಮೇಲ್ಮನೆ ಕದನ: 26ಕ್ಕೆ ಮತ ಎಣಿಕೆ
ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆಯು ಆ. 26 ರಂದು ನಡೆಯಲಿದೆ. ಮತ ಪೆಟ್ಟಿಗೆಗಳನ್ನು ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ. ಮೈಸೂರು ನಗರ, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಎಚ್.ಡಿ. ಕೋಟೆ, ನಂಜನಗೂಡು, ಟಿ. ನರಸೀಪುರ, ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ಕೇಂದ್ರ ಹಾಗೂ ವಿವಿಧ ಗ್ರಾಪಂ ಕಚೇರಿಗಳಲ್ಲಿ ಗುರುವಾರ ಮತದಾನ ನಡೆಯಿತು. ಎರಡು ಜಿಲ್ಲೆಗಳ ನಡೆದ ಮತದಾನ ಪೆಟ್ಟಿಗೆಗಳನ್ನು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಇರಿಸಲಾಗಿದ್ದು, ಆ. 26ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ, ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್ ಅವರ ಸ್ಪರ್ಧಿಸಿದ್ದಾರೆ.
ವಿಶ್ವ ಶಾಂತಿಗಾಗಿ ಅಹಿಂಸಾ ರ್ಯಾಲಿ
ಮೈಸೂರು: ಸುಮತಿನಾಥ ಜೈನ್ ಶ್ವೆತಾಂಬರ ಮೂರ್ತಿಪೂಜಕ ಸಂಘ ಹಾಗೂ ಸುಮತಿನಾಥ ಜೈನ್ ನವಯುವಕ ಮಂಡಳಿ ಸಂಯುಕ್ತವಾಗಿ ವಿಶ್ವ ಶಾಂತಿಗಾಗಿ ಅಹಿಂಸಾ ರ್ಯಾಲಿಯನ್ನು ಆ. 25ರ ಬೆಳಗ್ಗೆ 9ಕ್ಕೆ ಸಂಗಮ್ ಚಿತ್ರಮಂದಿರ ಎದುರಿನ ತೀರ್ಥಂಕರ ರಸ್ತೆಯಲ್ಲಿರುವ ಸುಮತಿನಾಥ ಜೈನ್ ದೇವಸ್ಥಾನದಿಂದ ಆಯೋಜಿಸಿವೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿರುವ ರ್ಯಾಲಿಯ ಸಾನ್ನಿಧ್ಯವನ್ನು ಜೈನಾಚಾರ್ಯಗಳಾದ ವಿಜಯ ಅಭಯಸೇನ ಸೂರೀಜಿ ಮಹಾರಾಜ್, ಮುನಿಶ್ರೀ ಸುಧರ್ಮಸೇನ್‌ಜೀ ಮಹಾರಾಜ್ ಮತ್ತು ಮುನಿಶ್ರೀ ದೀಪ್‌ಸೇನ್ ಮಹಾರಾಜ್ ವಹಿಸುವರು. ಸಂಘದ ಅಧ್ಯಕ್ಷ ಜೀವಂತ್ ರಾಜ್ ಅವರು ರ್ಯಾಲಿ ಉದ್ಘಾಟಿಸುವರು ಎಂದು ಸಂಘದ ಕಾರ್ಯದರ್ಶಿ ಅಶೋಕ್‌ಕುಮಾರ್ ಜೈನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.