ಕನ್ನಡ ದಿನಪತ್ರಿಕೆ ಕೊಂಡು ಓದಿ: ರಾಮಲಿಂಗು
ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಆ. 23
ಕನ್ನಡ ದಿನಪತ್ರಿಕೆಗಳನ್ನು ಹಣಕೊಟ್ಟು ಕೊಂಡು ಓದುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗು ಕರೆ ನೀಡಿದರು.
ಇಲ್ಲಿನ ಬಿಆರ್‌ಸಿ ಕಚೇರಿ ಆವರಣದಲ್ಲಿ ಕಸಾಪ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅರ್ಜಿ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾತೃಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಗೌರವವಿರಬೇಕು. ಕನಿಷ್ಠ ಪಕ್ಷ ರಾಜ್ಯದ ಪ್ರಾದೇಶಿಕ ಭಾಷೆಯಾದ ಕನ್ನಡದ ಪತ್ರಿಕೆಗಳನ್ನು ಹಣಕೊಟ್ಟು ಕೊಂಡುಕೊಂಡು ಓದುವಂತಾಗಬೇಕು. ಪ್ರತಿಯೊಬ್ಬರೂ ಕನ್ನಡದ ವಾಹಿನಿಗಳನ್ನು ವೀಕ್ಷಿಸುವ ಮೂಲಕ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು.
ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯ ಬಗ್ಗೆ ರಾಜ್ಯದ ಜನತೆಯಲ್ಲಿ ಹೆಚ್ಚು ಅಭಿಮಾನ ಕಂಡುಬರುತ್ತಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶೇ. 30 ರಷ್ಟು ಮಾತ್ರ ಕನ್ನಡ ಮಾತನಾಡುವ ಜನರನ್ನು ಮಾತ್ರ ಕಾಣಬಹುದಾಗಿದ್ದು, ಇದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಕಸಾಪ ತಾ. ಅಧ್ಯಕ್ಷ ಗೋರಳ್ಳಿ ಜಗದೀಶ್ ಮಾತನಾಡಿ, ಸೆ. 10 ರೊಳಗೆ ಕಸಾಪಗೆ ತಾಲೂಕಿನಿಂದ ಒಂದು ಸಾವಿರ ಸದಸ್ಯರನ್ನು ನೋಂದಣಿ ಮಾಡುವ ಗುರಿ ಹೊಂದಿದೆ. ಹೆಚ್ಚಿನ ಜನರು ಪರಿಷತ್ತಿನ ಸದಸ್ಯತ್ವ ಹೊಂದುವ ಮೂಲಕ ಕನ್ನಡದ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಬಿಆರ್‌ಸಿ ಬಿ.ಸಿ. ರೇವಣ್ಣ ಮಾತನಾಡಿದರು. ಸರ್ಕಾರಿ ನೌಕರರ ಬಳಕೆದಾರರ ಸಂಘದ ತಾ. ಅಧ್ಯಕ್ಷ ಮುದ್ದಣ್ಣಾಚಾರ್, ಉಪ ಪ್ರಾಂಶುಪಾಲ ನಾಗಶೆಟ್ಟಿ, ಸರ್ಕಾರಿ ನೌಕರರ ತಾ. ಸಂಘದ ನಿರ್ದೇಶಕ ಪರಶಿವಯ್ಯ, ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಕರು ಇದ್ದರು.