ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಂಡಾನೆ ಸಾವು

Vishwanath S
Updated On : 24 Aug 2013, 1:07 am

ಕ.ಪ್ರ.ವಾರ್ತೆ ,  ಹುಣಸೂರು ,  ಆ. 23
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಿತಿಮತಿ ವಲಯದ ಕಿರುಹೊಳೆ ನದಿಯ ಬಳಿ ದೇವಮಾಚಿ ಸೆಕ್ಷನ್‌ನಲ್ಲಿ ಸುಮಾರು 40 ವರ್ಷದ ಗಂಡಾನೆಯೊಂದು ಹೃದಯಾಘಾತದಿಂದ ಮೃತಪಟ್ಟಿದೆ.
ಕೊಡಗಿನ ವಿರಾಜಪೇಟೆ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಗೆ ಬರುವ ತಿತಿಮತಿ ವಲಯದ ನದಿಯಲ್ಲಿ ನೀರು ಕುಡಿದು ಕಂದಕದಿಂದ ಮೇಲೆ ಹತ್ತುವ ವೇಳೆ, ಮೇಲೆರಲಾಗದೆ ಜಾರಿದಾಗ, ಎದೆಗೆ ತೀವ್ರ ಪೆಟ್ಟುಬಿದ್ದು, ಹೃದಯಾಘಾತದಿಂದ ಮೃತಪಟ್ಟಿದೆ. ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ, ವಲಯ ಅರಣ್ಯಾಧಿಕಾರಿ ಗೋಪಾಲ್ ಹಾಗೂ ವನ್ಯಜೀವಿ ವಿಭಾಗದ ಆನೆ ಚೌಕೂರು ವಲಯದ ವಲಯ ಅರಣ್ಯಾಧಿಕಾರಿ ಭೇಟಿ ನೀಡಿದ್ದರು.
ಗುಂಡು ಪರಿಶೋಧಕ ಯಂತ್ರದಿಂದ ಆನೆಯನ್ನು ತಪಾಸಣೆಗೊಳಪಡಿಸಲಾಯಿತು. ವನ್ಯಜೀವಿ ವಿಭಾಗದ ಪಶುವೈದ್ಯ ಡಾ. ಉಮಾಶಂಕರ್ ಶವ ಪರೀಕ್ಷೆ ನಡೆಸಿದರು.
ನಿವೇಶನ ಒತ್ತಾಯಿಸಿ ಪ್ರತಿಭಟನೆ
ಮೈಸೂರು: ನಗರದ ಹೊರವಲಯದ ಬೆಲವತ್ತದಲ್ಲಿ ಬೋವಿ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆ. 28ರಂದು ಪ್ರತಿಭಟಿಸುವುದಾಗಿ ದಲಿತ ಹಿಂದುಳಿದ ಅಸ್ಪಸಂಖ್ಯಾತರ ಸಮನ್ವಯ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಹೇಳಿದರು. ಬೆಲವತ್ತ ಗ್ರಾಮದ ಸರ್ವೇ ನಂ. 12 ಮತ್ತು 13ರಲ್ಲಿ ನಿವೇಶನ ಹಂಚಲು ಅಧಿಕಾರಿಗಳು ಮುಂದಾಗಿಲ್ಲ. ತಹಸೀಲ್ದಾರ್ ನವೀನ್ ಜೋಸೆಫ್ ಸ್ವಾಧೀನ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದರು. ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಸೋಮಯ್ಯ ಮಲೆಯೂರು, ಕೆ.ವಿ. ದೇವೇಂದ್ರ, ಕೆ. ಹನುಮಂತು ಬೆಲವತ್ತ ಇದ್ದರು.
ದಸರಾ ಭದ್ರತೆಗೆ ಪೊಲೀಸರ ಸಂಖ್ಯೆ ಕಡಿತ: ಡಾ. ಸಲೀಂ
ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಭದ್ರತೆಗೆ ಪೊಲೀಸರ ಸಂಖ್ಯೆಯನ್ನು ಕಡಿತಗೊಳಿಸಲು ಚಿಂತಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು. ಭದ್ರತೆಗೆ ಪೊಲೀಸರ ಸಂಖ್ಯೆ ಹೆಚ್ಚಳ ಫಲ ನೀಡುವುದಿಲ್ಲ. ಪರಿಣಾಮಕಾರಿ ಹಾಗೂ ಸಮರ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ. ಇದರಿಂದ ಹಲವು ರೀತಿಯ ತೊಂದರೆ ತಪ್ಪಿಸಬಹುದು. ಹೀಗಾಗಿ ನಮಗೆ ಪರಿಣಿತ ಪೊಲೀಸರು ಅಗತ್ಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಸರಾ ಜಂಬೂ ಸವಾರಿ ಮಾರ್ಗದಲ್ಲಿ 40 ಸಿಸಿಟಿವಿ ಕ್ಯಾಮರಾ ಅಳವಡಿಸುವ ಸಂಬಂಧ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಕೆಲಸಗಾರನ ಮೇಲೆ ಎರಗಿದ ಅರಮನೆ ಸಾಕಾನೆ
ಕ.ಪ್ರ.ವಾರ್ತೆ ,  ಮೈಸೂರು ,  ಆ. 23
ಮೈಸೂರು ಅರಮನೆಯಲ್ಲಿ ಸಾಕಾನೆಯೊಂದು ಕೆಲಸಗಾರನ್ನು ಸೊಂಡಲಿನಿಂದ ಎತ್ತಿ ಎಸೆದ ಘಟನೆ ಶುಕ್ರವಾರ ನಡೆದಿದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಅರಮನೆ ಆವರಣದಲ್ಲಿ ಕೆಲವು ಆನೆಗಳನ್ನು ಸಾಕಿದ್ದಾರೆ. ಅವುಗಳಲ್ಲಿ 20 ವರ್ಷದ ರಾಜಿ ಎಂಬ ಹೆಣ್ಣಾನೆಯೂ ಒಂದು. ಈ ಆನೆಯನ್ನು ನೋಡಿಕೊಳ್ಳುತ್ತಿದ್ದ ಪಾಷ ಎಂಬವರು ರಜೆ ಇದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸಗಾರ ಪುಟ್ಟ ಎಂಬವರು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಲಗಿದ್ದ ಆನೆ ಏಕಾಏಕಿ ಎದ್ದು ನಿಂತಿತು. ಆನೆಯನ್ನು ತೊಳೆಯುವ ಸಲುವಾಗಿ ಮತ್ತೆ ಮಲಗಿಸಲು ಪುಟ್ಟ ಪ್ರಯತ್ನಿಸಿದಾಗ ಸೊಂಡಿಲಿನಿಂದ ಹೊಡೆದಿದೆ. ಇದರಿಂದ ಪುಟ್ಟ ದೂರ ಹೋಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಗಾಯವೂ ಆಗಿಲ್ಲ. ಅಲ್ಲೇ ಇದ್ದ ಇತರೆ ಆನೆಗಳ ಮಾವುತರು ಕೂಡಲೇ ಧಾವಿಸಿ ರಾಜಿ ಆನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕೆಲಹೊತ್ತು ರೊಚ್ಚಿಗೆದ್ದಿದ್ದ ರಾಜಿ ಈಗ ಸಮಚಿತ್ತದಲ್ಲಿದೆ. ಈ ಘಟನೆಯಿಂದ ಆನೆ ಮಾವುತರು ಮತ್ತು ಸಿಬ್ಬಂದಿಯಲ್ಲಿ ಕೆಲವು ಕಾಲ ಆತಂಕ ನಿರ್ಮಾಣವಾಗಿತ್ತು. ಈ ವಿಚಾರ ತಿಳಿದು ದೇವರಾಜ ಠಾಣೆ ಇನ್ಸ್‌ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಔಷಧಿ ಮಾರಾಟಗಾರರ ಪ್ರತಿಭಟನೆ
ಕ.ಪ್ರ.ವಾರ್ತೆ ,  ಮೈಸೂರು ,  ಆ. 23
ದೇಶದ ಔಷಧೀಯ ಕಂಪನಿಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ ರಾಜ್ಯ ಔಷಧಿ ಮಾರಾಟಗಾರರ ಸಂಘದವರು ನಗರದ ಕೆ.ಆರ್. ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರವು ಮುಕ್ತ ಅವಕಾಶ ನೀಡಿದೆ. ಇದರಿಂದ ವಿದೇಶಿ ಕಂಪನಿಗಳು ದೇಶದ ಔಷಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಮುಂದಾಗಿವೆ. ಇದು ದೇಶದ ಔಷಧೀಯ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಹೆಚ್ಚಾಗುತ್ತಿರುವ ಔಷಧೀಯ ಬೆಲೆ ನಿಯಂತ್ರಿಸಲು ಹಾಗೂ ಜೀವರಕ್ಷಕ ಔಷಧಿಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಸಾರ್ವಜನಿಕರಿಗೆ ಕರಪತ್ರ ಹಂಚಿದರು. ಸಂಘದ ಪದಾಧಿಕಾರಿಗಳಾದ ಮುರಳೀಧರ್ ಪೇಶ್ವಾ, ಕೇಶವ, ಲಕ್ಷ್ಮಣ್ ನೇತೃತ್ವ ವಹಿಸಿದ್ದರು.
27ರಂದು ಕಾಲೇಜು ಎದುರು ಪ್ರತಿಭಟನೆ
ಮೈಸೂರು: ಯುವರಾಜ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಹಾಜರಾತಿ ಕೊರತೆ ಕಾರಣ ನೀಡಿ ತಡೆಹಿಡಿದಿರುವ 72 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವಂತೆ ಒತ್ತಾಯಿಸಿ ಆ. 27ರ ಬೆಳಗ್ಗೆ 11ಕ್ಕೆ ಕಾಲೇಜಿನ ಎದುರು ಪ್ರತಿಭಟಿಸುವುದಾಗಿ ಕನ್ನಡ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿನಯ್‌ಕುಮಾರ್ ಹೇಳಿದರು. ಆಡಳಿತ ಮಂಡಳಿಯಿಂದ ಕೆಲವು ತಪ್ಪು ನಿರ್ಧಾರವಾಗಿದೆ. ಈ ಸಮಸ್ಯೆ ಸರಿಪಡಿಸಿ ಫಲಿತಾಂಶ ಪ್ರಕಟಿಸುವುದಾಗಿ ಪ್ರಾಂಶುಪಾಲ ಡಾ. ಎಚ್. ನಂಜೇಗೌಡರು ಹೇಳಿದ್ದರು. ಆದರೆ, ಇದುವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಯುವರಾಜ ಕಾಲೇಜು ವಿಶ್ವವಿದ್ಯಾನಿಲಯಕ್ಕೆ ಒಳಪಡುವುದಿಲ್ಲ. ಸ್ವಾಯತ್ತ ಸಂಸ್ಥೆಯಾಗಿ ತಮ್ಮ ಇಷ್ಟಬಂದಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹಾಜರಾತಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಫಲಿತಾಂಶ ಪ್ರಕಟಿಸದೆ ಮುಂದಿನ ವರ್ಷಕ್ಕೆ ಪ್ರವೇಶವನ್ನೂ ನೀಡಿದ್ದಾರೆ. ಆದರೆ, ಈಗ ಹಾಜರಾತಿ ಕೊರತೆ ಕಾರಣಕ್ಕೆ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸಂಘದ ಗೌರವ ಅಧ್ಯಕ್ಷ ವೀರಣ್ಣಗೌಡ, ಉಪಾಧ್ಯಕ್ಷ ದೇವರಾಜ್ ಟಿ. ಕಾಟೂರು, ವಿದ್ಯಾರ್ಥಿಗಳಾದ ಕಿರಣ್‌ಕುಮಾರ್, ರಕ್ಷಿತ್ ಇದ್ದರು.
ಚೆರಬಿನ್‌ಗೆ ಡಾಕ್ಟರೇಟ್
ಮೈಸೂರು: ಡಾ.ಕೆ.ಬಿ. ಪ್ರವೀಣ ಅವರ ಮಾರ್ಗದರ್ಶನಲ್ಲಿ ಸಂಶೋಧನೆ ನಡೆಸಿದ ಮೊಸ್ಲೆಮ್ ಚೆರಬಿನ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಶಿಕ್ಷಣ ವಿಷಯದಲ್ಲಿ ಪಿಎಚ್.ಡಿ. ಪದವಿ ನೀಡಿದೆ.
ಶೋಭಾ ನೇಮಕ
ಮೈಸೂರು: ಬಿಜೆಪಿಯ ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿ. ಶೋಭಾ ಅವರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments