ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುಂಡು ಎಸೆತ ಆಟದ ವೇಳೆ ವಿದ್ಯಾರ್ಥಿ ಸಾವು

Vishwanath S
Updated On : 24 Aug 2013, 1:06 am

ಕ.ಪ್ರ.ವಾರ್ತೆ ,  ಹುಣಸೂರು ,  ಆ. 23
ಶಾಲೆಯ ಆವರಣದಲ್ಲಿ ಗುಂಡು ಎಸೆತ ಆಟದ ಅಭ್ಯಾಸದ ವೇಳೆ ವಿದ್ಯಾರ್ಥಿಯೋರ್ವನ ತಲೆಗೆ ಆಕಸ್ಮಿಕವಾಗಿ ತಗುಲಿ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ.
ಇಲ್ಲಿನ ಹಳೇ ತಾಲೂಕು ಕಚೇರಿ ಬಳಿಯ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶ್ರೀಧರ್ (12) ಮೃತ ವಿದ್ಯಾರ್ಥಿ. ಈತ ಹನಗೋಡು ಬಳಿಯ ಕಿರಂಗೂರಿನ ವೇದಾವತಿ ಮತ್ತು ಕುಮಾರ್ ಅವರ ಅವಳಿ ಮಕ್ಕಳಲ್ಲಿ ಒಬ್ಬ,
ತಾಲೂಕು ಮಟ್ಟದ ಕ್ರೀಡಾಕೂಟವಿದ್ದರಿಂದ ಶುಕ್ರವಾರ ಮಧ್ಯಾಹ್ನ ಊಟದ ಬಿಡುವಿನ ವೇಳೆ ವಿದ್ಯಾರ್ಥಿಗಳೆ ಆಟವಾಡುತ್ತಿದ್ದಾಗ ಗುಂಡು ಎಸೆತದ ವೇಳೆ ಅರಿವಿಲ್ಲದೆ ಬಂದ ಈತನ ತಲೆಯ ಮೇಲೆ ಬಿದ್ದಿದೆ. ತಕ್ಷಣ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟನು. ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ರೋದನ ಮುಗಿಲುಮಟ್ಟಿತು. ಬಿಇಒ ಕಚೇರಿ ಬಳಿ ಗ್ರಾಮಸ್ಥರು ಜಮಾಯಿಸಿ ಪ್ರತಿಭಟಿಸಿದರು.   ಶಾಸಕ ಎಚ್.ಪಿ. ಮಂಜುನಾಥ್ ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಸಂಬಂಧಿಸಿದ ಶಿಕ್ಷಕರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಕ.ಪ್ರ.ವಾರ್ತೆ ,  ಸಾಲಿಗ್ರಾಮ್ಣ ಆ. 23
ಕೌಟುಂಬಿಕ ಕಲಹದಿಂದ ಮನನೊಂದ ಒಂದೇ ಕುಟುಂಬದ ಇಬ್ಬರು ಮಹಿಳೆಯರು ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಮೀಪದ ಚಾಮರಾಜ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಜರುಗಿದೆ.
ಇಲ್ಲಿಗೆ ಸಮೀಪದ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ ನರಸಿಂಹೇಗೌಡ ಎಂಬವರ ಪತ್ನಿ ಸವಿತಾ (26) ಈಕೆಯ ಇಬ್ಬರು ಮಕ್ಕಳಾದ ದರ್ಶನ್ (3), ಒಂದೂವರೆ ವರ್ಷದ ಹೇಮಂತ್ ಹಾಗೂ ನರಸಿಂಹೇಗೌಡನ ಸೋದರ ಆನಂದ್ ಪತ್ನಿ ಯಶೋದಾ (24) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು.
ಘಟನೆ ವಿವರ: ಚಿಕ್ಕನಾಯಕನಹಳ್ಳಿ ಗ್ರಾಮದ ರಾಜೇಗೌಡರ ಮೊದಲನೆ ಪುತ್ರ ನರಸಿಂಹೇಗೌಡರಿಗೆ ಸವಿತಾ ಜೊತೆ, ಈಕೆಯ ದೊಡ್ಡಮ್ಮನ ಪುತ್ರಿ ಗುಳುವಿನ ಅತ್ತಿಗುಪ್ಪೆ ಗ್ರಾಮದ ಯಶೋದರನ್ನು ಎರಡು ವರ್ಷಗಳ ಹಿಂದೆ ನರಸಿಂಹೇಗೌಡರ ಎರಡನೇ ಪುತ್ರ ಆನಂದ ಎಂಬವವರಿಗೆ ವಿವಾಹ ಮಾಡಲಾಗಿತ್ತು. ಕೆಲವು ದಿನಗಳಿಂದ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರ ವಿಷಯವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನ ಮಾಡಲು ಪ್ರಯತ್ನಿಸಲಾಗಿತ್ತು.
ಆದರೂ ಗುರುವಾರ ಸಂಜೆ ಇವರ ಪತಿಯಂದಿರು ಹಾಗೂ ಅತ್ತೆ, ಮಾವಂದಿರು ಒಂದಾಗಿ ಇವರ ಮೇಲೆ ತೀವ್ರ ಗಲಾಟೆ ಮಾಡಿದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೊಳಪಟ್ಟು, ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು, ಶುಕ್ರವಾರ ಬೆಳಗ್ಗೆ ಎಂದಿನಂತೆ ಮನೆ ಕೆಲಸ ಮುಗಿಸಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಯಶೋದಾ ಹಾಗೂ ಸವಿತಾ ಇಬ್ಬರು ಮಕ್ಕಳನ್ನು ಕರೆದುಕೊಂಡು ಸಾಲಿಗ್ರಾಮದ ಭಾಸ್ಕರ ಸ್ವಾಮಿ ದೇವಸ್ಥಾನದ ಬಳಿ ಇರುವ ಚಾಮರಾಜ ಎಡದಂಡೆ ನಾಲೆಗೆ ಬಂದು ದರ್ಶನ್‌ನನ್ನು ಸೊಂಟಕ್ಕೆ ಕಟ್ಟಿಕೊಂಡು ಸವಿತಾ ಹಾಗೂ ಹೇಮಂತ್‌ನನ್ನು ತಬ್ಬಿಕೊಂಡು ಯಶೋದಾ ನಾಲೆಗೆ ಹಾರಿದ್ದಾರೆ.
ನಾಲೆಯು ಗ್ರಾಮದ ಮುಂಭಾಗವೆ ಹಾದು ಹೋಗಿದ್ದು, ಇದನ್ನು ನೋಡಿದ ಕೆಲವರು ಜೀವ ಉಳಿಸಲು ಪ್ರಯತ್ನಿಸಿದರು ಪ್ರಯತ್ನ ಫಲಕಾರಿಯಾಗದೆ, ಸುಮಾರು ಒಂದು ಕಿಮೀ ದೂರದಲ್ಲಿ ಸಾರ್ವಜನಿಕರೆ ಮೃತದೇಹಗಳನ್ನು ನಾಲೆಯಿಂದ ಹೊರ ತೆಗೆದರು.
ಮೃತ ಸವಿತಾಳ ತಂದೆ ಮೂಡಲಬೀಡು ನಿವಾಸಿ ಚಲುವೇಗೌಡರು ವರದಕ್ಷಿಣೆ ಕಿರುಕುಳವೆ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ. ವಿಷಯದ ತಿಳಿದ ಗಂಡನ ಮನೆಯವರು ಮನೆಗೆ ಬೀಗ ಹಾಕಿ, ತಲೆ ಮರೆಸಿಕೊಂಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಸಿದ್ದಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನ, ಎಸ್‌ಐ ಮಹೇಶ್ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತದೇಹಗಳನ್ನು ನೋಡಿದ ಸಾಲಿಗ್ರಾಮ ಹಾಗೂ ಸುತ್ತಮುತ್ತಲಿನ ಅನೇಕ ಜನರು ಕಂಬನಿ ಮಿಡಿದರು.
ವ್ಯಕ್ತಿ ಬಂಧನ, 1.75 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕ.ಪ್ರ.ವಾರ್ತೆ ,  ಮೈಸೂರು ,  ಆ. 23
ಲಷ್ಕರ್ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಕಳವು ಮಾಡಿದ್ದ 1.75 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾ ಮೊಹಮ್ಮದ್ ಸೇಠ್ ಬ್ಲಾಕ್ ನಿವಾಸಿ ನಯ್ಯಿಂ ಪಾಷ (23) ಬಂಧಿತ ಆರೋಪಿ. ರಾಜೀವ್‌ನಗರ ನಿವಾಸಿ ಸೈಯದ್ ರಫಿ ತನ್ನ ಪತ್ನಿಯ ಚಿನ್ನದ ಸರ ಮತ್ತು ನೆಕ್ಲೆಸ್ ಪಾಲಿಶ್ ಮಾಡಿಸಲು ಬೈಕಿನ ಟ್ಯಾಂಕ್ ಕವರ್‌ನಲ್ಲಿ ಇರಿಸಿದ್ದರು. ತಮ್ಮ ಪರಿಚಯಸ್ಥ ನವಾಬ್ ಜಾನ್ ಅವರ ಮನೆಯಲ್ಲಿ ಸಾವಿನ ವಿಚಾರ ತಿಳಿದು ಬುಧವಾರ ಮೊಹಮ್ಮದ್ ಸೇಠ್ ಬ್ಲಾಕ್‌ಗೆ ಹೋಗಲು ಫರೂಕಿಯ ಬಾಲಕಿಯರ ಶಾಲೆ ಮುಂದೆ ಬೈಕ್ ನಿಲ್ಲಿಸಿ ಹೋಗಿದ್ದರು. ವಾಪಸ್ ಬಂದಾಗ ಬೈಕಿನಲ್ಲಿದ್ದ ಚಿನ್ನಾಭರಣ ಕಳವಾಗಿತ್ತು. ಈ ಸಂಬಂಧ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರುಡಿಸಿಪಿ ಎಂ.ಎಂ. ಮಹದೇವಯ್ಯ, ಎಸಿಪಿ ಸಿ.ಡಿ. ಜಗದೀಶ್ ಮಾರ್ಗದರ್ಶನದಲ್ಲಿ ಲಷ್ಕರ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ್ ರಾವ್ ಸಿಂಧೆ, ಎಸ್‌ಐ ಯೋಗಾಂಜನಪ್ಪ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಮರಳುಗಾರಿಕೆ ಮೇಲೆ ದಾಳಿ
ಹುಣಸೂರು: ಲಕ್ಷ್ಮಣತೀರ್ಥ ನದಿಯಲ್ಲಿ ಅಕ್ರಮವಾಗಿ ಕೊಪ್ಪರಿಕೆಯಲ್ಲಿ ಮರಳು ಸಂಗ್ರಹಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ, ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ಸಮೀಪದ ಶಬ್ಬೀರ್‌ನಗರ ಬಳಿ ದಾಳಿ ನಡೆಸಿ ನಾಲ್ಕು ಕೊಪ್ಪರಿಕೆ, ಎರಡು ಟ್ರ್ಯಾಕ್ಟರ್ ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ.ಲಾರಿ ಮಾಲೀಕರ ಸಂಘದ ದೂರಿನ ಮೇರೆಗೆ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲೆ ದಾಳಿ ನಡೆಸಿದ ಅಧಿಕಾರಿಗಳು, ಮರಳು ಮತ್ತು ಕೊಪ್ಪರಿಕೆ ವಶಪಡಿಸಿಕೊಂಡರು. ಮರಳು ಸಂಗ್ರಹಣೆಗೆ ಜಮೀನು ನೀಡಿರುವ ಬಾಲಗೋಪಾಲ್ ಎಂಬವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದೆಂದು ಆರ್‌ಐ ಚೌಡನಾಯ್ಕ ತಿಳಿಸಿದರು. ದಾಳಿ ವೇಳೆ ಗ್ರಾಮ ಲೆಕ್ಕಿಗ ಜಯರಾಂ ಹಾಗೂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಹಾಗೂ ಪದಾಧಿಕಾರಿಗಳು ಇದ್ದರು.
ನಾಪತ್ತೆ ವ್ಯಕ್ತಿಯ ಶವ ಪತ್ತೆ
ಹುಣಸೂರು: ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇಲ್ಲಿನ ಲಕ್ಷ್ಮಣತೀರ್ಥ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ತಾಲೂಕಿನ ಕೊಯಮತ್ತೂರು ಕಾಲೋನಿಯ ಲೇ. ಜಡಿಯಪ್ಪನವರ ಪುತ್ರ ಕಪನೀಗೌಡ (65) ಮೃತಪಟ್ಟ ವ್ಯಕ್ತಿ. ಈ ಸಂಬಂಧ ಮೃತನ ಪತ್ನಿ ಸಾವಿತ್ರಮ್ಮ, ಪತಿಯ ಸಾವಿಗೆ ಗ್ರಾಮದ ಕಮಲಮ್ಮ, ಆತನ ಪುತ್ರ ಸಂತೋಷ ಅವರೆ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರಿಂದ, ಆರೋಪಿಗಳನ್ನು ಬಂಧಿಸಲಾಗಿದೆ.
ಆ. 17ರಂದು ಮೃತ ಕಪನೀಗೌಡರಿಗೂ ಹಾಗೂ ಕಮಲಮ್ಮ, ಸಂತೋಷ ಅವರ ನಡುವೆ ಜಮೀನು ವಿಚಾರದಲ್ಲಿ ಜಗಳವಾಡಿಕೊಂಡು ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನಿಂದಲೂ ಕಪನೀಗೌಡ ಪತ್ತೆಯಾಗಿರಲಿಲ್ಲ. ಶುಕ್ರವಾರ ಈತನ ಶವ ಪತ್ತೆಯಾಗಿದೆ. ಎಎಸ್‌ಐಗಳಾದ ಶ್ರೀನಿವಾಸಗೌಡ, ಸುರೇಂದ್ರಜಿತ್, ಅಗ್ನಿಶಾಮಕ ದಳದವರ ಸಹಾಯದಿಂದ ಶವವನ್ನು ಮೇಲೆತ್ತಲಾಯಿತು. ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.
ನೇಣು ಬಿಗಿದುಕೊಂಡು ಆತ್ಮಹತ್ಯೆ
ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ನೇಣಿಗೆ ಶರಣಾಗಿ ಮೃತಪಟ್ಟ ಘಟನೆ ಇಲ್ಲಿನ ಶಿವಜ್ಯೋತಿ ನಗರದಲ್ಲಿ ಶುಕ್ರವಾರ ರಾತ್ರಿ ಜರುಗಿದೆ. ಶಿವಜ್ಯೋತಿ ನಗರದ ನಿವಾಸಿ ಲೇ. ಆಟೋ ದೇವರಾಜು ಅವರ ದ್ವಿತಿಯ ಪುತ್ರ ಆನಂದ್ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಯಾವುದೊ ವಿಚಾರವಾಗಿ ಮನೆಯಲ್ಲಿ ಕಳೆದ ಆರು ತಿಂಗಳ ಹಿಂದೆಯು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು. ಶುಕ್ರವಾರ ಸಹ ಮನೆಯಲ್ಲಿ ಸಣ್ಣ ವಿಷಯಕ್ಕೆ ಜಗಳ ನಡೆದು, ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ದ್ವಿಚಕ್ರ ವಾಹನ- ಕಾರು ಡಿಕ್ಕಿ: ಶಿಕ್ಷಕ ಸಾವು
ಕ.ಪ್ರ.ವಾರ್ತೆ ,  ಭೇರ್ಯ ,  ಆ. 23
ಶಾಲಾ ಶಿಕ್ಷಕರೊಬ್ಬರು ತಮ್ಮ ಬೈಕ್‌ನಲ್ಲಿ ಶಾಲೆಗೆ ಹೋಗುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟ ಘಟನೆ ಹಾಸನ- ಮೈಸೂರು ಹೆದ್ದಾರಿಯ ಹೊಸಅಗ್ರಹಾರ ನಾಲೆ ಬಳಿ ನಡೆದಿದೆ.ಕೆ.ಆರ್. ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದ ಪುಟ್ಟಪ್ಪ ಎಂಬುವರ ಪುತ್ರ ಶಿಕ್ಷಕ ಶಿವಣ್ಣ (56) ಮೃತಪಟ್ಟವರು. ಇವರು ಭೇರ್ಯ ಬಳಿ ಇರುವ ಸಂಕನಹಳ್ಳಿ ಗ್ರಾಮದಲ್ಲಿ ಶಿಕ್ಷಕರಾಗಿ ಕಳೆದ ಎರಡು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಪತ್ನಿ ಸುನಂದಾ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಶಾಲೆಗೆ ಹೋಗಲು ಬೆಳಗ್ಗೆ ಎಂದಿನಂತೆ ಶಿವಣ್ಣ ತಮ್ಮ ಬೈಕ್‌ನಲ್ಲಿ 9ರ ವೇಳೆಗೆ ಮನೆಯಿಂದ ಹೊರಟು ಹಾಸನ- ಮೈಸೂರು ಹೆದ್ದಾರಿಯಲ್ಲಿ ಬರುವಾಗ ಹೊಸಅಗ್ರಹಾರ ನಾಲೆಯ ಬಳಿ ಎದುರುನಿಂದ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆ ಮತ್ತು ಕಿವಿ, ಮೂಗಿನಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟರು. ಡಿಕ್ಕಿ ಹೊಡೆದ ಕಾರು ಚಾಲಕನನ್ನು ಗ್ರಾಮಸ್ಥರು ಪೊಲೀಸರಿಗೆ ಹಿಡಿದು ಒಪ್ಪಿಸಿದರು. ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್, ಸಾಲಿಗ್ರಾಮ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಭೇಟಿ ನೀಡಿ ದೂರು ದಾಖಲಿಸಿಕೊಂಡರು. ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಕಲ್ಯಾಣಪುರ ರಾಜಶೇಖರ್ ಮೃತ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement