ಗುರುರಾಯರ ಆರಾಧನಾ ಮಹೋತ್ಸವ ಸಂಪನ್ನ
ಕ.ಪ್ರ.ವಾರ್ತೆ , ಮೈಸೂರು , ಆ. 23
ಗುರುಸಾರ್ವಭೌಮ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳವರ 342ನೇ ಆರಾಧನಾ ಮಹೋತ್ಸವವು ನಗರದ ವಿವಿಧೆಡೆ ಶುಕ್ರವಾರ ಸಂಪನ್ನಗೊಂಡಿತು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮೀಗಳವರ ಬೃಂದಾನವ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ಸಡಗರ ಸಂಭ್ರಮದಲ್ಲಿ ನಡೆಯಿತು. ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಹಾಗೂ ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ನಡೆಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸಂಜೆ ವಿದ್ವಾನ್ ಎನ್. ಶ್ರೀನಾಥ್ ವೃಂದದವರಿಂದ ಕರ್ನಾಟಕ ಸಂಗೀತ ಹಾಡುಗಾರಿಕೆ ನಡೆಯಿತು. ಕೃಷ್ಣಮೂರ್ತಿಪುರಂನ ಅಭಿನವ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ವಿಶೇಷ ಪೂಜೆ ಹಾಗೂ ಉತ್ಸವ ನಡೆಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಬಂೃದಾವನ ಬಡಾವಣೆಯಲ್ಲಿ ಗುರುರಾಘವೇಂದ್ರ ಸ್ವಾಮಿಗಳವರ 342ನೇ ವರ್ಷದ ಆರಾಧನಾ ಮಹೋತ್ಸವ ಸಮಿತಿ ವತಿಯಿಂದ ಸೌರಸೂಕ್ತ ಹೋಮ ಹಾಗೂ ಸತ್ಯನಾರಾಯಣ ಪೂಜೆ ನಡೆಯಿತು. ಸಂಜೆ ಪಂಡಿತ್ ಸೋಮನಾಥ್ ಮರಡೂರ್ ಅವರಿಂದ ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ ನಡೆಯಿತು. ಜಯಲಕ್ಷ್ಮೀಪುರಂ ರಾಘವೇಂದ್ರಸಾಮಿಗಳ ಮಠದಲ್ಲಿ ಗುರುರಾಯರ ರಥೋತ್ಸವವು ಇಲ್ಲಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ ವಿದುಷಿ ಐಶ್ವರ್ಯ ವಿದ್ಯಾ ರಘುನಾಥ್ ವೃಂದ ಕರ್ನಾಟಕ ಸಂಗೀತ ನಡೆಸಿತು.
ಕುವೆಂಪುನಗರದ ನವಿಲು ರಸ್ತೆಯಲ್ಲಿರುವ ರಾಘವೇಂದ್ರ ಮಠದಲ್ಲಿ ಸುಪ್ರಭಾತ, ಪಂಚಾಮೃತಾಭಿಷೇಕ, ಕನಕಾಭಿಷೇಕ, ಅರ್ಚನೆ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗವಿತ್ತು. ಅಲ್ಲದೆ, ಇಲ್ಲಿನ ಪ್ರಮುಖ ಬೀದಿಗಳಲ್ಲಿ ಗುರುರಾಯರ ಗಜವಾಹನೋತ್ಸವವು ವಿಜೃಂಭಣೆಯಿಂದ ನಡೆಯಿತು. ಜೆ.ಪಿ. ನಗರದ ಇ ಬ್ಲಾಕ್ನಲ್ಲಿರುವ ವಿಠ್ಠಲ ಮುಖ್ಯಪ್ರಾಣ ರಾಘವೇಂದ್ರ ಸೇವಾ ಸಮಿತಿಯಲ್ಲಿ ವಿಶೇಷ ಪೂಜೆ, ಉತ್ಸವ ಹಾಗೂ ಭಜನೆ ನಡೆಯಿತು. ವಿದ್ವಾನ್ ಬೆ.ನಾ. ವಿಜಯಿಂದ್ರಾಚಾರ್ಯ ಹಾಗೂ ಮುರಳಿ ಆಚಾರ್ಯ ಉಪನ್ಯಾಸ ನೀಡಿದರು. ನಂತರ ವಿದುಷಿ ವಾಣಿ ಆರ್. ಭಟ್ ತಂಡದವರು ಗಾಯನ ನಡೆಸಿಕೊಟ್ಟರು. ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿರುವ ಮೂಲಮಠದ ರಾಘವೇಂದ್ರ ಸ್ವಾಮಿಗಳವರ ಪ್ರತೀಕ ಸನ್ನಿಧಾನದಲ್ಲಿ ವಿಶೇಷ ಪೂಜೆ, ಉತ್ಸವ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ವಿದ್ವಾನ್ ವಿ. ಬಾಲಕೃಷ್ಣನ್ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಆರ್. ಸೋಮರಾಜ ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆಯ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದರೂ ಕೆಲವು ಮಠಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿವೆ.