ಪೊಲೀಸ್ ದೂರು ಪ್ರಾಧಿಕಾರಕ್ಕಾಗಿ ಏಕಾಂಗಿ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಆ. 23
ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿಯ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಜಿ. ನಾಗೇಂದ್ರ ಶರ್ಮ ಅವರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಏಕಾಂಗಿಯಾಗಿ ಪ್ರತಿಭಟಿಸಿದರು.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ರಕ್ಷಕರೆ ಭಕ್ಷಕರಾಗಿದ್ದಾರೆ. ಪೊಲೀಸ್ ಠಾಣೆಗಳು ನೊಂದವರ ರಕ್ಷಣೆ ತಾಣವಾಗದೇ ರಾಜಿ ಮಾಡುವ ಪಂಚಾಯಿತಿಕಟ್ಟೆ ಆಗಿದೆ. ರಿಯಲ್ ಎಸ್ಟೇಟ್ ಕಚೇರಿಗಳಾಗಿ ಮಾರ್ಪಟ್ಟಿದೆ. ಲಂಚ ನೀಡದವರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು.
ಠಾಣೆಗಳಿಗೆ ದೂರು ನೀಡಲು ಹೋಗುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪೊಲೀಸ್ ದೂರು ಪ್ರಾಧಿಕಾರ ಸ್ಥಾಪಿಸಬೇಕು. ಈ ಪ್ರಾಧಿಕಾರದ ಮೂಲಕ ಪ್ರಕರಣ ದಾಖಲಿಸಿಕೊಳ್ಳದ, ಅನ್ಯಾಯ ಎಸಗುತ್ತಿರುವ, ಭ್ರಷ್ಟ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.