ಬಿಜೆಪಿಗೆ ನೇಮಕ
ಟಿ. ನರಸೀಪುರ: ಬಿಜೆಪಿ ಗ್ರಾಮಾಂತರ ಕಾರ್ಯದರ್ಶಿಯಾಗಿ ವರುಣ ವಿಧಾನಸಭಾ ಕ್ಷೇತ್ರದ ವರಕೋಡು ಗ್ರಾಮದ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ಗೌಡ ತಿಳಿಸಿದ್ದಾರೆ.
ಸರ್ವೆ ಸಿಬ್ಬಂದಿ ನಿರ್ಲಕ್ಷ್ಯ: ಆರೋಪ
ಕೆ.ಆರ್. ನಗರ: ತಾಲೂಕು ಸರ್ವೆ ಕಚೇರಿಯಲ್ಲಿ ಗ್ರಾಮಾಂತರ ಪ್ರದೇಶದ ರೈತರನ್ನು ಅನಗತ್ಯವಾಗಿ ಅಲೆಸುತ್ತಿದ್ದು, ಜಮೀನು ಅಳತೆ ಮಾಡಿಸಲು ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ತಿರುಗಿ ನೋಡುತ್ತಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಆರೋಪಿಸಿದ್ದಾರೆ. ಹಾಡ್ಯ ಗ್ರಾಮದ ಶಿವಣ್ಣ ಎಂಬವರು ಆರು ತಿಂಗಳ ಹಿಂದೆ ತಮ್ಮ ಜಮೀನು ಸರ್ವೆ ಮಾಡಿಸಲು ಕೆ.ಆರ್. ನಗರದ ಸರ್ವೆ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈವರೆಗೆ ತಿರುಗಿ ನೋಡಿಲ್ಲ. ಆದರೆ, ಹಣ ನೀಡಿದವರಿಗೆ 15 ದಿನಗಳಲ್ಲಿ ಸರ್ವೆ ಮಾಡುತ್ತಾರೆ. ಈ ಅವ್ಯವಸ್ಥೆ ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ. ಕಚೇರಿಗೆ ರೈತರು ಬಂದು ಪ್ರಶ್ನಿಸಿದರೆ, ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ತಹಸೀಲ್ದಾರ್ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಸಂಬಂಧ ತಾಲೂಕು ಸರ್ವೆ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ ಕಚೇರಿಗೆ ಅಲೆಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಸ್ತೆ ಕಾಮಗಾರಿ ಪೂರ್ಣಗೊಳಿಸಿ
ಕೆ.ಆರ್. ನಗರ: ತಾಲೂಕಿನ ಮಾಯಿಗೌಡನಹಳ್ಳಿಯಿಂದ ಹಾಡ್ಯ ಕ್ರಾಸ್ವರೆಗೆ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಿದ್ಯಾರ್ಥಿ ಜಿ. ಕುಮಾರ ಒತ್ತಾಯಿಸಿದ್ದಾರೆ. ಮಳೆ ಬಂದು ರಸ್ತೆ ಕೊಚ್ಚಿಹೋಗಿ ಗುಂಡಿಗಳಾಗಿರುವುದರಿಂದ ಸಂಚರಿಸಲು ತೀವ್ರ ಕಷ್ಟವಾಗಿದೆ. ಕೂಡಲೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ.
ನಗರದಲ್ಲೂ ನಮೋ ಬ್ರಿಗೇಡ್
ಮೈಸೂರು: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂದಿನ ಪ್ರಧಾನ ಮಂತ್ರಿಯಾಗಬೇಕೆಂಬ ಗುರಿಯೊಂದಿಗೆ ಕರ್ನಾಟಕದಾದ್ಯಂತ ವಿವಿಧ ಚಟುವಟಿಕೆ ಹಮ್ಮಿಕೊಂಡಿರುವ ನಮೋ ಬ್ರಿಗೇಡ್ ಸಂಸ್ಥೆಯ ಶಾಖೆಯನ್ನು ಮೈಸೂರಿನಲ್ಲಿಯೂ ಆರಂಭಿಸಲಾಗಿದೆ ಎಂದು ಶಾಖಾ ಸಂಚಾಲಕ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಆಸಕ್ತ ನಾಗರಿಕರು ಹಾಗೂ ಯುವಕರು ಕೈಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ. ಮಾಹಿತಿಗೆ ಮೊ. 9902720200 (ರಾಜೇಂದ್ರ ಪ್ರಸಾದ್) ಅಥವಾ ಮೊ. 8553584761 (ನಿಸ್ಚಿತ್) ಸಂಪರ್ಕಿಸಬಹುದು.
ಸಿಎಂ ಸಚಿವಾಲಯ ಛಾಯಾಗ್ರಾಹಕರಾಗಿ ನೇಮಕ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವಾಲಯದ ಛಾಯಾಗ್ರಾಹಕರಾಗಿ ಡಿ.ಸಿ. ರಘು ದಿಡ್ಡಹಳ್ಳಿ ನೇಮಕವಾಗಿದ್ದಾರೆ. ಮುಖ್ಯಮಂತ್ರಿಗಳ ಸಚಿವಾಲಯದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಅನ್ವಯ ಮುಂದಿನ ಆದೇಶದವರೆಗೆ ಛಾಯಾಗ್ರಾಹಕರಾಗಿ ನೇಮಿಸಲಾಗಿದೆ. ಅವರು ಎರಡು ಅವಧಿಯಿಂದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ದಶಕಗಳಿಂದ ಛಾಯಾಗ್ರಾಹಕರಾಗಿರುವ ಅವರು ಈ ಹಿಂದೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
ಕುರುಬರ ಸಂಘಕ್ಕೆ ಚುನಾವಣೆ
ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘವು 2013- 18ನೇ ಸಾಲಿಗೆ ನಿಗದಿಗೊಳಿಸಿದ ಆಯಾ ಜಿಲ್ಲೆಗಳ ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲು ಮುಖ್ಯ ಚುನಾವಣಾಧಿಕಾರಿಯಾಗಿ ವಕೀಲ ಕೆಂಪಣ್ಣ ಅವರನ್ನು ನೇಮಿಸಿದೆ. ಅಗತ್ಯವಿದ್ದಲ್ಲಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ಚುನಾವಣೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. 080- 22264293 ಸಂಪರ್ಕಿಸುವಂತೆ ಸಂಘದ ಹಿರಿಯ ಉಪಾಧ್ಯಕ್ಷ ಚೌಹಳ್ಳಿ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷ ಕೆ.ಸಿ. ಬಲರಾಮ್ ಹೇಳಿದ್ದಾರೆ.
ಯುವರಾಜ ಕಾಲೇಜು ಎದುರು ಪ್ರತಿಭಟನೆ
ಮೈಸೂರು: ಯುವರಾಜ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಹಾಜರಾತಿ ಕೊರತೆ ಕಾರಣ ನೀಡಿ ತಡೆಹಿಡಿದಿರುವ 72 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವಂತೆ ಒತ್ತಾಯಿಸಿ ಆ. 27ರ ಬೆಳಗ್ಗೆ 11ಕ್ಕೆ ಕಾಲೇಜಿನ ಎದುರು ಪ್ರತಿಭಟಿಸುವುದಾಗಿ ಕನ್ನಡ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿನಯ್ಕುಮಾರ್ ಹೇಳಿದರು. ಆಡಳಿತ ಮಂಡಳಿಯಿಂದ ಕೆಲವು ತಪ್ಪು ನಿರ್ಧಾರವಾಗಿದೆ. ಈ ಸಮಸ್ಯೆ ಸರಿಪಡಿಸಿ ಫಲಿತಾಂಶ ಪ್ರಕಟಿಸುವುದಾಗಿ ಪ್ರಾಂಶುಪಾಲ ಡಾ. ಎಚ್. ನಂಜೇಗೌಡರು ಹೇಳಿದ್ದರು. ಆದರೆ, ಇದುವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಯುವರಾಜ ಕಾಲೇಜು ವಿಶ್ವವಿದ್ಯಾನಿಲಯಕ್ಕೆ ಒಳಪಡುವುದಿಲ್ಲ. ಸ್ವಾಯತ್ತ ಸಂಸ್ಥೆಯಾಗಿ ತಮ್ಮ ಇಷ್ಟಬಂದಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹಾಜರಾತಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಫಲಿತಾಂಶ ಪ್ರಕಟಿಸದೆ ಮುಂದಿನ ವರ್ಷಕ್ಕೆ ಪ್ರವೇಶವನ್ನೂ ನೀಡಿದ್ದಾರೆ. ಆದರೆ, ಈಗ ಹಾಜರಾತಿ ಕೊರತೆ ಕಾರಣಕ್ಕೆ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸಂಘದ ಗೌರವ ಅಧ್ಯಕ್ಷ ವೀರಣ್ಣಗೌಡ, ಉಪಾಧ್ಯಕ್ಷ ದೇವರಾಜ್ ಟಿ. ಕಾಟೂರು, ವಿದ್ಯಾರ್ಥಿಗಳಾದ ಕಿರಣ್ಕುಮಾರ್, ರಕ್ಷಿತ್ ಇದ್ದರು.
ಚೆರಬಿನ್ಗೆ ಡಾಕ್ಟರೇಟ್
ಮೈಸೂರು: ಡಾ.ಕೆ.ಬಿ. ಪ್ರವೀಣ ಅವರ ಮಾರ್ಗದರ್ಶನಲ್ಲಿ ಸಂಶೋಧನೆ ನಡೆಸಿದ ಮೊಸ್ಲೆಮ್ ಚೆರಬಿನ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಶಿಕ್ಷಣ ವಿಷಯದಲ್ಲಿ ಪಿಎಚ್.ಡಿ. ಪದವಿ ನೀಡಿದೆ.
ಶೋಭಾ ನೇಮಕ
ಮೈಸೂರು: ಬಿಜೆಪಿಯ ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿ. ಶೋಭಾ ಅವರನ್ನು ನೇಮಕ ಮಾಡಲಾಗಿದೆ.
ತಾ. ಕ್ರೀಡಾಕೂಟ
ಚಾಮರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆ.26ರಂದು ತಾಲೂಕು ಮಟ್ಟದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಕ್ರೀಡಾಕೂಟ ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಎನ್.ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಮನೆ ಕದನ: 26ಕ್ಕೆ ಮತ ಎಣಿಕೆ
ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆಯು ಆ. 26 ರಂದು ನಡೆಯಲಿದೆ. ಮತ ಪೆಟ್ಟಿಗೆಗಳನ್ನು ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ. ಮೈಸೂರು ನಗರ, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಎಚ್.ಡಿ. ಕೋಟೆ, ನಂಜನಗೂಡು, ಟಿ. ನರಸೀಪುರ, ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ಕೇಂದ್ರ ಹಾಗೂ ವಿವಿಧ ಗ್ರಾಪಂ ಕಚೇರಿಗಳಲ್ಲಿ ಗುರುವಾರ ಮತದಾನ ನಡೆಯಿತು. ಎರಡು ಜಿಲ್ಲೆಗಳ ನಡೆದ ಮತದಾನ ಪೆಟ್ಟಿಗೆಗಳನ್ನು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಇರಿಸಲಾಗಿದ್ದು, ಆ. 26ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ, ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್ ಅವರ ಸ್ಪರ್ಧಿಸಿದ್ದಾರೆ.