'ಭಾರತೀಯ ಪ್ರಾಚೀನ ಕಲೆ ಶ್ರೀಮಂತ'
ಕ.ಪ್ರ.ವಾರ್ತೆ , ಮೈಸೂರು , ಆ. 23
ಭಾರತೀಯ ಪ್ರಾಚೀನ ಕಲೆ ಶ್ರೀಮಂತವಾದುದು ಎಂದು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ನಿರ್ದೇಶಕ ಡಾ. ಆರ್. ಗೋಪಾಲ್ ಹೇಳಿದರು.
ವಿಜಯನಗರದ ಶ್ರೀಕಲಾನಿಕೇತನದಲ್ಲಿ ಆಯೋಜಿಸಿರುವ ಶಿವಕುಮಾರ್ ಎಚ್. ದೊಡ್ಡಅರಸಿನಕೆರೆ ಮತ್ತು ಮಂಜುನಾಥ್ ಕಲಾನಿಕೇತನ್ ಅವರ ಹೆರಿಟೇಜ್ ಮೈಸೂರ್‌ಸ್ಕೇಪ್ ಚಿತ್ರಕಲಾ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕಲೆ ಎಂಬುದು ಮನುಷ್ಯ ಹುಟ್ಟಿನಿಂದಾಗಿ ಬಂದಿರುವಂತದ್ದು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಕಲೆಗಳು ಪ್ರಾಚೀನ ಹಾಗೂ ಶ್ರೀಮಂತಿಕೆ ಹೊಂದಿದೆ. ಆದಿಮಾನವನ ಕಾಲದಿಂದಲೂ ಚಿತ್ರಕಲೆ ಅನಾವರಣಗೊಂಡಿದೆ. ಬೆಟ್ಟ- ಗುಡ್ಡಗಳು ಹಾಗೂ ಗುಹೆಗಳಲ್ಲಿ ಇಂತಹ ಕಲೆಗಳು ಕಂಡು ಬಂದಿವೆ ಎಂದರು.
ಮೊಗಲರು, ವಿಜಯನಗರ ಅರಸರು ಹಾಗೂ ಮೈಸೂರು ಒಡೆಯರು ಚಿತ್ರ ಕಲಾವಿದರಿಗೆ ಹೆಚ್ಚಿನ ಆಶ್ರಯ ನೀಡಿದ್ದರು. ಆಗಿನ ಕಲಾವಿದರು ಬಳಿಸಿರುವ ನಿಸರ್ಗದತ್ತ ಬಣ್ಣ ಹಾಗೂ ಪರಿಕಲ್ಪನೆಯನ್ನು ಇಂದಿನ ಯುವಕರು ಸಂಶೋಧನೆ ನಡೆಸಿ ಪಿಎಚ್.ಡಿ ಗಳಿಸಬಹುದಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಲಾ ಗ್ಯಾಲರಿಯ ಕೊರತೆಯಿದೆ ಎಂಬ ಮಾತುಗಳಿವೆ. ಪ್ರಾಚ್ಯವಸ್ತು ಇಲಾಖೆಯಲ್ಲಿ 4 ಗ್ಯಾಲರಿಯಿದ್ದು, ಅದನ್ನು ಬಳಸಿಕೊಳ್ಳುವಲ್ಲಿ ಕಲಾವಿದರು ಮುಂದಾಗಬೇಕು. ಆ ಇಬ್ಬರು ಯುವಕಲಾವಿದರು ರಚಿಸಿರುವ ಕಲಾಕೃತಿಗಳು ಅದ್ಭುತವಾಗಿದ್ದು, ದಸರಾ ವಸ್ತು ಪ್ರದರ್ಶದಲ್ಲಿ ಈ ಕಲಾಕೃತಿ ಪ್ರದರ್ಶನ ಮುಂದುವರಿಸುವುದಾದರೆ ಅದಕ್ಕೆ ಬೇಕಾದ ಅಗತ್ಯ ನೆರವು ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ಹನುಮಣ್ಣನಾಯಕ ದೊರೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಸಿಇ - ಸ್ಟೇಪ್ ಸಿಇಒ ಕೆ.ಜಿ. ರಾಜರಾಮ್ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಸಿ. ಮಹದೇವ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಸಿ. ಚಿಕ್ಕಣ್ಣ ನಿರೂಪಿಸಿದರು. ಕಲಾವಿದರಾದ ಶಿವಕುಮಾರ್ ಎಚ್. ದೊಡ್ಡಅರಸಿನಕೆರೆ ಹಾಗೂ ಮಂಜುನಾಥ್ ಕಲಾನಿಕೇತನ್ ಇದ್ದರು. ಪ್ರದರ್ಶನದಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳ ಕುರಿತಾದ ಸುಮಾರು 80 ಕೃತಿಗಳು ಅನಾವರಣಗೊಂಡಿವೆ. ಆ. 26 ರವರೆಗೆ ಪ್ರದರ್ಶನವಿದೆ.