ಹತ್ತು ಲೋಡ್ ಮರಳು ವಶ, ಕೊಪ್ಪರಿಕೆ ನಾಶ
ಕ.ಪ್ರ.ವಾರ್ತೆ , ಟಿ.ನರಸೀಪುರ , ಆ. 23
ಭೈರಾಪುರ ಹಾಗೂ ಹುಣಸೂರು ಗ್ರಾಮದ ಕಪಿಲಾ ನದಿ ಪಾತ್ರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹತ್ತು ಲೋಡ್ ಮರಳು ವಶಪಡಿಸಿಕೊಂಡು, ಎರಡು ಕೊಪ್ಪರಿಕೆ ನಾಶಪಡಿಸಿದ್ದಾರೆ.
ಮರಳುಗಾರಿಕೆ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರೂ ತಾಲೂಕಿನ ಭೈರಾಪುರ ಹಾಗೂ ಹುಣಸೂರು ಗ್ರಾಮದ ಕಪಿಲಾ ನದಿ ಪಾತ್ರದಲ್ಲಿ ಕೊಪ್ಪರಿಕೆಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಹಾಗೂ ಪೊಲೀಸ್ ಎಸ್ಐ ಕೆ.ಆರ್. ಗೋಪಿಕೃಷ್ಣ ಅವರು ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹತ್ತು ಲೋಡ್ ಮರಳನ್ನು ವಶಪಡಿಸಿಕೊಂಡರು. ನದಿ ಪಾತ್ರದಲ್ಲಿದ್ದ ಎರಡು ಕೊಪ್ಪರಿಕೆ ನಾಶಪಡಿಸಿದರು.
ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ನಾಗೇಂದ್ರಪ್ಪ ಸೇರಿದಂತೆ ಕಂದಾಯ ಇಲಾಖೆ ನೌಕರರು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಕಡಿವಾಣ ಹಾಕಿ: ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಗುಂಜಾ ನರಸಿಂಹ ಸ್ವಾಮಿಯ ಸೇವಾ ಸಮಿತಿ ತಾಲೂಕು ಆಡಳಿತವನ್ನು ಆಗ್ರಹಿಸಿದೆ.
ಪುರಾತನ ಪ್ರಸಿದ್ಧ ಗುಂಜಾ ನರಸಿಂಹ ಸ್ವಾಮಿಯ ದೇವಾಲಯದ ಮುಂಭಾಗವಿರುವ ತ್ರಿವೇಣಿ ಸಂಗಮದ ನದಿ ಪಾತ್ರದಲ್ಲಿ ಇತ್ತೀಚೆಗೆ ಬಂದ ಪ್ರವಾಹದಿಂದ ಹರಡಿಕೊಂಡಿರುವ ಮರಳಿನ ರಾಶಿಯನ್ನು ಕೊಪ್ಪರಿಕೆ ಮೂಲಕ ಕದ್ದುಮುಚ್ಚಿ ತೆಗೆದು ಸಾಗಾಣಿಕೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ಕುಂಭಮೇಳ ನಡೆಯುವ ಪುಣ್ಯ ಕ್ಷೇತ್ರದಲ್ಲಿ ಮರಳು ರಾಶಿ ಕಣ್ಮರೆಯಾಗುವ ಮುನ್ನ ಅಕ್ರಮ ಮರಳು ದಂಧೆಕೋರರನ್ನು ಹತ್ತಿಕ್ಕಬೇಕು ಎಂದು ಗುಂಜಾ ನರಸಿಂಹ ಸ್ವಾಮಿಯ ಸೇವಾ ಸಮಿತಿ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.