ಅತ್ಯಾಚಾರ ಘಟನೆಗೆ ಖಂಡನೆ
ಕ.ಪ್ರ.ವಾರ್ತೆ , ಮೈಸೂರು , ಆ. 25
ಮುಂಬೈನಲ್ಲಿ ನಿಯತಕಾಲಿಕೆಯೊಂದರ ಛಾಯಾಗ್ರಾಹಕಿ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಇಂತಹ ಘಟನೆ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾತ್ರವಲ್ಲದೆ, ಮಹಿಳಾ ದೌರ್ಜನ್ಯದ ದುಷ್ಕೃತ್ಯವಾಗಿದೆ. ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣ ಹೆಚ್ಚುತ್ತಲಿದೆ. ನಿರ್ಭೀತಿ ಪತ್ರಿಕೋದ್ಯಮಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಮುಂಬೈನಲ್ಲಿ ನಡೆದ ಈ ಅತ್ಯಾಚಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಸಂಘ ಬಣ್ಣಿಸಿದೆ.
ಘಟನೆಯಿಂದ ಮುಂದಿನ ದಿನಗಳಲ್ಲಿ ಪತ್ರಕರ್ತರು ಸ್ವತಂತ್ರವಾಗಿ, ನಿರ್ಭೀತಿಯಿಂದ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆದರೂ ಇಂತಹ ಕೃತ್ಯದಿಂದ ಪ್ರಜಾತಂತ್ರ ವ್ಯವಸ್ಥೆಯನ್ನೆ ಅಲುಗಾಡಿಸುವಂತಾಗಿದೆ. ಆದ್ದರಿಂದ ಕೂಡಲೆ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಂಡು, ಪತ್ರಕರ್ತರ ರಕ್ಷಣೆಗೆ ನೂತನ ಕಾನೂನು ಜಾರಿಗೆ ತರಬೇತು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಆಗ್ರಹಿಸಿದ್ದಾರೆ.
ಕ್ರೆಡಿಟ್ ಐ: ನಗರದ ಕ್ರೆಡಿಟ್ ಐ ಸಂಸ್ಥೆಯು ಪತ್ರಿಕಾ ಛಾಯಾಗ್ರಾಹಕಿ ಮತ್ತು ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಖಂಡಿಸಿದೆ.
ಮುಂಬೈನ ಶಕ್ತಿ ಮಿಲ್ ಆವರಣದಲ್ಲಿ 22 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ತಲೆ ತಗ್ಗಿಸುವಂತ್ತದ್ದು, ಅಲ್ಲದೆ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ್ದ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಖಂಡನಿಯ. ಈ ಬಗ್ಗೆ ಕೂಡಲೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ಡಾ.ಎಂ.ವಿ. ವರ್ಷ, ಸಿಕ್ರಂ ಸಂಘಟನೆಯ ಪ್ರಸನ್ನ, ಸಂಚಾಲಕ ಎಂ. ಪ್ರಭುಸ್ವಾಮಿ ಆಗ್ರಹಿಸಿದ್ದಾರೆ.