ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇದು ಮಲೆನಾಡು ಮಾದರಿ ಕೃಷಿ ಪದ್ಧತಿ!

Vishwanath S
Updated On : 26 Aug 2013, 12:26 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ಎಚ್.ಡಿ. ಕೋಟೆ ತಾಲೂಕು ಕೆ. ಕನ್ನೇನಹಳ್ಳಿ ಬಳಿ ಮಲೆನಾಡು ಮಾದರಿಯ ತೋಟ.
- ಎಲ್ಲಿಯ ಎಚ್.ಡಿ. ಕೋಟೆ ಎಲ್ಲಿಯ ಮಲೆನಾಡು. ಎತ್ತಣಿನಿಂದೆತ್ತ ಸಂಬಂಧವಯ್ಯ ಎಂದು ಹುಬ್ಬೇರಿಸಬೇಡಿ. ಮೂಲತಃ ಮಲೆನಾಡು ಸೀಮೆಯಿಂದ ಬಂದಿರುವ ಈ.ಆರ್. ಶ್ರೀರಾಮನ್ ಅವರ ಶ್ರಮದಿಂದ ಈ ನೋಟ ಸಾಧ್ಯವಾಗಿದೆ.
ಅವರ ಜಮೀನಿನಲ್ಲಿ 5000 ಅಡಕೆ, 500 ತೆಂಗು, ನೂರಾರು ಬಾಳೆ ಗಿಡಗಳು ನಳನಳಿಸುತ್ತಿವೆ. 150 ಮಾವಿನ ಮರಗಳಿವೆ. ಅಲ್ಲದೆ, 20 ಹಲಸು, 6 ನಿಂಬೆ, 6 ಹಿರಳಿಕಾಯಿ, 10 ನೇರಳೆ ಮರಗಳಿವೆ. ಇದಲ್ಲದೇ ಗ್ಲಿಸಿಡಿಯಾ, ಸುಬೋಲೆ, ಜಟ್ರೋಪದ ಸಾವಿರಾರು ಗಿಡಗಳಿವೆ. ಇವುಗಳಿಂದ ಕೃಷಿ ಭೂಮಿಗೆ ಬೇಕಾದ ಫೋಷಕಾಂಶಗಳು ದೊರಕುತ್ತವೆ.
ಸಾಮಾನ್ಯವಾಗಿ ಬಾಳೆ ಬೆಳೆಯನ್ನು ಒಂದೆರೆಡು ಕೂಳೆಗೆ ತೆಗೆದು ಬಿಡುತ್ತಾರೆ. ಆದರೆ, ಇವರ ಜಮೀನಿನಲ್ಲಿ 50ನೇ ಕೂಳೆ ಬಾಳೆಯೂ ಗೊನೆಗಳನ್ನು ಬಿಡುತ್ತಿವೆ. ನೀರಾವರಿ ಸೌಲಭ್ಯವಿರುವ ಕಡೆ 10- 12 ಕೆಜಿಯ ಗೊನೆ ಬಂದರೆ ಇಲ್ಲಿ 16 ರಿಂದ 18 ಕೆಜಿ ಬರುತ್ತಿವೆ. ಅಡಕೆ, ತೆಂಗು, ಬಾಳೆ ಮಾರಾಟದಿಂದ ಖರ್ಚೆಲ್ಲಾ ಕಳೆದು ವಾರ್ಷಿಕ 7 ರಿಂದ 8 ಲಕ್ಷ ಆದಾಯ ಬರುತ್ತಿದೆ.
ಮಳೆಯಾಶ್ರಿತ ಕೃಷಿ: ಇವರ ಬಳಿ ತಲಾ 1 ಅಮೃತಮಹಲ್, ಹಳ್ಳಿಕಾರ್, 5 ನಾಡಹಸುಗಳಿವೆ. ಪ್ರತಿದಿನ 10 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಕೊಳವೆ ಬಾವಿ ಇದ್ದರೂ ಕಳೆದ 13 ವರ್ಷಗಳಲ್ಲಿ ಕೃಷಿಗೆ ಬಳಕೆ ಮಾಡಿರುವುದು ಒಮ್ಮೆ ಮಾತ್ರ. ಉಳಿದಂತೆ ಮಳೆಯಾಶ್ರಿತ ಕೃಷಿ ಮಾಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಈಶ್ವರಹಳ್ಳಿ ಶ್ಯಾನುಬೋಗ್ ರಂಗನಾಥ ಅಯ್ಯಂಗಾರ್ ಅವರ ಪುತ್ರರಾದ ಶ್ರೀರಾಮನ್ ಅವರು ಎಚ್.ಡಿ. ಕೋಟೆ ತಾಲೂಕಿನಲ್ಲಿ ರಾಮಣ್ಣ ಎಂದೇ ಪರಿಚಿತರು. ಊರಿನಲ್ಲಿದ್ದಾಗ ಆರ್‌ಎಸ್‌ಎಸ್, ವಿಎಚ್‌ಪಿ, ಶ್ರೀರಾಮಸೇನೆ, ದತ್ತಪೀಠ ಹೋರಾಟ, ಗ್ರಾಪಂ ಅಧ್ಯಕ್ಷ- ಹೀಗೆ ನಾನಾ ಸೇವೆಯಲ್ಲಿ ತೊಡಗಿಸಿಕೊಂಡವರು. ಕ್ರಿಕೆಟ್, ಕಬಡ್ಡಿ, ಉದ್ದಜಿಗಿತ ಕ್ರೀಡೆಯಲ್ಲಿ ಹೆಸರು ಮಾಡಿದ್ದವರು.
ಜಮೀನು ಖರೀದಿ: 1995ರಲ್ಲಿ ಮೈಸೂರಿಗೆ ಬಂದು 10 ಟ್ಯಾಕ್ಸಿಗಳನ್ನು ಇಟ್ಟುಕೊಂಡು ಟ್ರಾವೆಲ್ಸ್ ನಡೆಸುತ್ತಿದ್ದರು. ಹಳೆಯ ಸೈಕಲ್‌ಗಳ ಮಾರಾಟ ಶುರು ಮಾಡಿದರು. ಷೇರು ವಿನಿಮಯದಲ್ಲಿ ತೊಡಗಿಸಿಕೊಂಡರು. ಎಲ್ಲದರಲ್ಲೂ ನಷ್ಟವಾಗಿ, ಬೀದಿಗೆ ಬಂದರು. ಆದರೂ ಧೈರ್ಯಗುಂದದೆ ಸಾಲ ಮಾಡಿ, ಸರಸ್ವತಿಪುರಂನಲ್ಲಿ ದಿನಸಿ ಅಂಗಡಿ ತೆರೆದರು. ಅದರಿಂದ ಬಂದ ಲಾಭದಿಂದ ಹಣಕಾಸು ವ್ಯವಹಾರ ಶುರು ಮಾಡಿದರು. ಅದೃಷ್ಟಲಕ್ಷ್ಮಿ ಕೈಹಿಡಿದಾಗ ಊರಿನ ಕಡೆಯವರಾದ ಬಸವಣ್ಣಗೌಡರ ಸಲಹೆ ಮೇರೆಗೆ ಯಡಹಳ್ಳಿಯ ಶ್ಯಾನುಭೋಗರ ಸಹಕಾರದಿಂದ 13 ವರ್ಷಗಳ ಹಿಂದೆ 5 ಲಕ್ಷ ಸಾಲ ಮಾಡಿ, ಕೆ. ಕನ್ನೇನಹಳ್ಳಿಯ ಬಳಿ ಎಂಟೂವರೆ ಎಕರೆ ಜಮೀನು ಖರೀದಿಸಿದರು.
ಅಚ್ಚರಿ: ಆ ಜಮೀನು ಖರೀದಿಸಿದಾಗ ಊರ ಗೌಡರು ಮತ್ತಿತರು ಗೇಲಿ ಮಾಡಿದ್ದು ಉಂಟು. ನಮ್ಮ ಕೈಯಲ್ಲೇ ಆಗಲಿಲ್ಲ. ಇವ ಏನು ಮಾಡಿಯಾನು ಎಂದುಕೊಂಡಿದ್ದರು. ಐದು ವರ್ಷ ಬಿಟ್ಟು ಬಂದು ನೋಡಿ ಎಂದು ಶ್ರೀರಾಮನ್ ಹೇಳಿದ್ದರು. ಅಂತೆಯೇ ಐದು ವರ್ಷ ಬಿಟ್ಟು ನೋಡಿದವರು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಕಡೆಯಿಂದ ಬಂದ ಸ್ನೇಹಿತರು, ಶಿವಮೊಗ್ಗ ಕಡೆಯ ಹವ್ಯಕ ಬ್ರಾಹ್ಮಣರ ತೋಟದಂತಿದೆ ಎಂದು ಮೆಚ್ಚುಗೆಯಿಂದ ಬೆನ್ನು ತಟ್ಟಿದರು.
ನಾನು ಚಿಕ್ಕಂದಿನಲ್ಲಿ ಹಾಸನದಲ್ಲಿ ವಾರಾನ್ನ ಮಾಡಿಕೊಂಡು, ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದಿದವನು. ಆಹಾರದ ಅಂದರೆ ಅನ್ನದ ಕಷ್ಟ ಏನೆಂಬುದು ಗೊತ್ತಿತ್ತು. ಜೊತೆಗೆ ಕ್ರಾಂತಿಕಾರಿಗಳಾದ ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಸುಭಾಷ್ ಚಂದ್ರಬೋಸ್, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ ಅವರನ್ನು ಆದರ್ಶವಾಗಿಟ್ಟುಕೊಂಡು ಬೆಳೆದವನು. ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರಂತೆ ಅಂದುಕೊಂಡಿದ್ದನ್ನು ಮಾಡುವ ಹಟದ ಸ್ವಭಾವದವನು. ಅಂತೆಯೇ ಗೇಲಿ ಮಾಡಿದವರ ಮುಂದೆ ಹಟದಿಂದ ದುಡಿದು, ಅವರಿಂದಲೇ ಸೈ ಎನಿಸಿಕೊಂಡೆ ಎಂದು ಶ್ರೀರಾಮನ್ ಹೇಳುತ್ತಾರೆ.
ಸುಭಾಷ್ ಪಾಳೇಕರ್ ಮೆಚ್ಚುಗೆ: ಊರಿನಲ್ಲಿ ಕೃಷಿ ಮಾಡುವಾಗ ರಾಸಾಯನಿಕ, ಸಾವಯವ ಎಂಬ ಗೊಂದಲದಲ್ಲಿದ್ದೆ. 1985 ರಿಂದ ಊರಿನಲ್ಲಿಯೂ ಸಾವಯವ ಪದ್ಧತಿ ಅಳವಡಿಸಿಕೊಂಡೆ. ಕನ್ನೇನಹಳ್ಳಿಯ ಜಮೀನಿನಲ್ಲೂ ಅದನ್ನು ಮುಂದುವರಿಸಿದೆ. ಈಗ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದಿದ್ದರೂ ನನ್ನ ಜಮೀನಿನಲ್ಲಿ ಐದು ವರ್ಷ ಬೆಳೆ ಬೆಳೆಯುವ ವ್ಯವಸ್ಥೆ ಮಾಡಿದ್ದೇನೆ. ಆರಂಭದಲ್ಲಿ ವೆನಿಲಾ ಬೆಳೆದು ನಷ್ಟ ಮಾಡಿಕೊಂಡೆ. ಮಂಗಳೂರು ಸೌತೆ ಬೆಳೆದು, 10 ಲಾರಿಯಷ್ಟು ಇಳುವರಿ ಬಂತು. ಆದರೆ ಬೆಲೆ 1 ಕೆಜಿಗೆ 1.50 ಮಾತ್ರ ಸಿಕ್ಕಿ, ನಷ್ಟವಾಯಿತು. ವೆಂಕಟರಾಮ್, ಬಿ. ಕರುಣಾಕರ್, ಆರ್. ಸ್ವಾಮಿಆನಂದ್ ಅವರ ಪರಿಚಯವಾಯಿತು. ನೈಸರ್ಗಿಕ ಕೃಷಿಕರಾದ ಕೈಲಾಶಮೂರ್ತಿ, ಬನ್ನೂರು ಕೃಷ್ಣಪ್ಪ ಅವರು ಜಮೀನಿಗೆ ಭೇಟಿ ನೀಡಿದ್ದರು. ನಂತರ ಹಂತ ಹಂತವಾಗಿ ಜಮೀನು ಅಭಿವೃದ್ಧಿಪಡಿಸಿದೆ. ಸುಭಾಷ್ ಪಾಳೇಕರ್ ಅವರು ಜಮೀನಿಗೆ ಬಂದು, ಮೆಚ್ಚುಗೆ ಸೂಚಿಸಿದರು.
ಕೃಷಿ ಪಂಡಿತ: ಈಗ ಶ್ರೀರಾಮನ್ ಅವರ ಕೃಷಿ ಪಯಣ ಸಾವಯವದಿಂದ ನೈಸರ್ಗಿಕದತ್ತ ಬಂದು ತಲುಪಿದೆ. ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಕೂಡ ಸಿಕ್ಕಿದೆ. ಮೊದಲೆಲ್ಲಾ ತಮ್ಮ ಜಮೀನಿನ ಉತ್ಪನ್ನಗಳನ್ನು ಮೈಸೂರಿನ ಸಾವಯವ ಕೃಷಿ ಮಳಿಗೆಗಳಿಗೆ ಪೂರೈಸುತ್ತಿದ್ದರು. ಈಗ ಜಮೀನಿನ ಬಳಿಯೇ ಮಾರಾಟ ಮಾಡುತ್ತಾರೆ.
ಮಹಾರಾಷ್ಟ್ರದ ಕೃಷಿ ತಜ್ಞ ಸುಭಾಷ್ ಪಾಳೇಕರ್, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕೃತಿಯ ಲೇಖಕ ಆರ್. ಸ್ವಾಮಿಆನಂದ್, ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ವಿಷಕಂಠ, ಮೈಸೂರು ಆಕಾಶವಾಣಿ ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ, ಮೈಸೂರಿನ ಜಯಶ್ರೀ ವಾಸನ್ ಅವರು ತಮಗೆ ನೀಡುತ್ತಿರುವ ಸಲಹೆ- ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂಬುದು ಶ್ರೀರಾಮನ್ ಅವರ ಮನದಾಳದ ಮಾತು. ಶ್ರೀರಾಮನ್ ಅವರ ಎಲ್ಲಾ ಕಾರ್ಯಗಳಿಗೆ, ಕೃಷಿ ಚಟುವಟಿಕೆಗಳಿಗೆ ಪತ್ನಿ ಕಮಲಾ ಅವರು ಸಾಥ್ ನೀಡುತ್ತಿದ್ದಾರೆ.  ಇಬ್ಬರು ಜೊತೆಯಾಗಿಯೇ ಬೆಳಗ್ಗೆಯಿಂದ ಸಂಜೆವರೆಗೆ ಜಮೀನಿನಲ್ಲಿ ದುಡಿಯುತ್ತಾರೆ.
ರೈತರು ಜಮೀನು ಬಳಿ ಮನೆ ಕಟ್ಟಿಕೊಂಡು ವಾಸ ಮಾಡಬೇಕು. ಕೆಟ್ಟ ಹವ್ಯಾಸ ಕಡಿಮೆ ಮಾಡಿಕೊಳ್ಳಬೇಕು. ಕೃಷಿಗೆ ತಕ್ಕಂತೆ ಜಾನುವಾರು ಸಾಕಿ, ಹೈನುಗಾರಿಕೆ ಕೈಗೊಳ್ಳಬೇಕು. ಶ್ರದ್ಧೆಯಿಂದ 8 ರಿಂದ 10 ಗಂಟೆ ಕೆಲಸ ಮಾಡಬೇಕು. ಆಗ ಮಾತ್ರ ಕೃಷಿಯಿಂದ ಯಾವುದೇ ನಷ್ಟವಾಗುವುದಿಲ್ಲ.
   ಈ.ಆರ್. ಶ್ರೀರಾಮನ್, ಕೆ. ಕನ್ನೇನಹಳ್ಳಿ

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement