ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚುನಾವಣೆ: ಕೆ.ಆರ್. ನಗರಕ್ಷೇತ್ರದಲ್ಲೂ ಕಾಂಗ್ರೆಸ್ ಪಾ(ರಮ್ಯ)

Vishwanath S
Updated On : 26 Aug 2013, 12:29 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಆ. 25
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಜಯಗಳಿಸಿರುವುದು ತಾಲೂಕು ಕಾಂಗ್ರೆಸ್ ಮುಖಂಡರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು, ವಿಧಾನಸಭಾ ಚುನಾವಣೆ ಸೋಲು ಮರೆಯುವಂತೆ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ 15 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದ ಜೆಡಿಎಸ್, ಲೋಕಸಭಾ ಉಪ ಚುನಾವಣೆಯಲ್ಲಿ ಮತ್ತೆ ಹಿನ್ನಡೆ ಸಾಧಿಸಿರುವುದು ಆ ಪಕ್ಷದ ಮುಖಂಡರಲ್ಲಿ ಮಂಕು ಕವಿಯುವಂತೆ ಮಾಡಿ ಆತ್ಮಾವಲೋಕನಕ್ಕೆ ದಾರಿಮಾಡಿದೆ. ಕಾಂಗ್ರೆಸ್ ತಾಲೂಕಿನಲ್ಲಿ ಜೆಡಿಎಸ್‌ಗಿಂತ 337 ಮತಗಳ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದರೂ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಪಕ್ಷ ಮತಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೆ ಅಧಿಕಾರದಲ್ಲಿ ಇರುವುದರಿಂದ ಪಕ್ಷ ಸಂಘಟನೆಗೆ ಅನುಕೂಲಕರ ವಾತಾವರಣ ಉಂಟಾಗಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೂ ಮತ ಗಳಿಕೆಯಲ್ಲಿ ಹಿಂದೆ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರದ ಕೊರತೆ, ಅತಿಯಾದ ಆತ್ಮವಿಶ್ವಾಸ ಮತ್ತು ಮತದಾರರನ್ನು ತಲುಪಲು ಪಕ್ಷ ವಿಫಲವಾಗಿದ್ದೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸಿ ಪ್ರಚಾರ ಮಾಡಿದ್ದು, ಮತ್ತು ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಮತ್ತು ಇತರ ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆದ್ದಿರುವುದು ಮತಗಳಿಕೆಯ ಪ್ರಮಾಣ ಹೆಚ್ಚಲು ಕಾರಣವಾಗಿದೆ.
ತಾಲೂಕಿನ ಜನತೆ ಬದಲಾವಣೆ ಬಯಸಿದ್ದು, ಲೋಕಸಭಾ ಉಪ ಚುನಾವಣೆ ಇದಕ್ಕೆ ಮುನ್ನುಡಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋಲಲು ಸಮಯಾಭಾವ ಮತ್ತು ಇತರ ಕಾರಣಗಳಿದ್ದು, ಮುಂದೆ ಯಾವುದೆ ತಪ್ಪು ಆಗದಂತೆ ಪಕ್ಷವನ್ನು ಕಾರ್ಯಕರ್ತರ ಸಹಕಾರದಿಂದ ಗೆಲವಿನ ದಡದತ್ತ ಕೊಂಡೊಯ್ಯುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಡೊಡ್ಡಸ್ವಾಮೇಗೌಡ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಂದಾಣಿಕೆ ಕೊರತೆ ಸೋಲಿಗೆ ಕಾರಣ
ಕೆ.ಆರ್. ನಗರ: ಲೋಕಸಭಾ ಉಪ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಮತದಾರರು ಬೆಂಬಲಿಸುತ್ತಾರೆ. ಹಾಗಾಗಿ ಕಾಂಗ್ರೆಸ್ ಜಯಗಳಿಸಿದೆ ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ನಡುವೆ ಮೈತ್ರಿ ಮೇಲ್ಮಟ್ಟದಲ್ಲಿ ಆಯಿತೆ ಹೊರತು ಕಾರ್ಯಕರ್ತರ ನಡುವೆ ಆಗದೆ ಹೋಗಿದ್ದು ನಮ್ಮ ಸೋಲಿಗೆ ಕಾರಣ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಉಪ- ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸೋಲು- ಗೆಲುವು ಸಹಜ ಅದಕ್ಕಾಗಿ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಪಕ್ಷ ಸ್ಥಾನಕ್ಕೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರು ಆ ಬಗ್ಗೆ ಯೋಚನೆಯನ್ನು ಮಾಡಬಾರದು ಎಂದರು.

-ಕುಪ್ಪೆ ಮಹದೇವಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement