ನಾಳೆ ಆಂಗ್ಲ ಭಾಷಾ ಚರ್ಚಾ ಸ್ಪರ್ಧೆ
ಮೈಸೂರು: ಬೃಂದಾವನ ಬಡಾವಣೆಯಲ್ಲಿರುವ ಡಾ.ಎಂ. ದೇಜಮ್ಮ ಮಹಾವೀರ ಸಂಯುಕ್ತ ಪಿಯು ಕಾಲೇಜಿನಲ್ಲಿ ಆ. 27 ರಂದು ಅಂತರ ಪಿಯು ಕಾಲೇಜು ಆಂಗ್ಲ ಭಾಷಾ ಚರ್ಚಾ ಸ್ಪರ್ಧೆ ಏರ್ಪಡಿಸಿದ್ದು, ಇಂಪ್ಯಾಕ್ಟ್ ಆಫ್ ಗ್ಲೋಬಲೇಸೇಷನ್ ಆನ್ ಎಜುಕೇಷನ್ ಎಂಬ ವಿಷಯ ಸೂಚಿಸಲಾಗಿದೆ. ದೂ. 0821- 2512923 ಸಂಪರ್ಕಿಸಬಹುದು.
ಶಾಲಾ- ಕಾಲೇಜು ಹಾಕಿ ಪಂದ್ಯಾವಳಿ
ಮೈಸೂರು: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿಯಿಂದ ಆ. 29ರ ಸಂಜೆ 4ಕ್ಕೆ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಮೇಜರ್ ಧ್ಯಾನ್ಚಂದ್ ಹಾಕಿ ಪಂದ್ಯಾವಳಿ ಏರ್ಪಡಿಸಿದ್ದು, ಶಾಸಕ ವಾಸು ಚಾಲನೆ ನೀಡುವರು.
ವೇಣುವಾದನ
ಮೈಸೂರು: ತ್ಯಾಗರಾಜ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಆ. 31ರ ಸಂಜೆ 6.30ಕ್ಕೆ ವಂಶೀಧರ್ ಅವರಿಂದ ವೇಣುವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈಜಲು ಹೋದ ಇಬ್ಬರು ನೀರುಪಾಲು
ಮೈಸೂರು: ವರುಣಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರಿನ ಕೆ. ಗೊಟ್ಟಿಹಳ್ಳಿಯ ನಿವಾಸಿಗಳಾದ ಪ್ರಸನ್ನ(28), ಹೇಮಂತ್ಕುಮಾರ್(10) ಎಂದು ಗುರುತಿಸಲಾಗಿದೆ. ಇವರು ಮಹದೇವಪುರದ ಸೋಮಶೇಖರ್ ಎಂಬವರ ಗೃಹಪ್ರವೇಶಕ್ಕೆ ಬಂದಿದ್ದರು. ವರುಣ ನಾಲೆಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ಈ ಕುರಿತು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೃಹಿಣಿ ಆತ್ಮಹತ್ಯೆ: ಮೂವರು ವಶಕ್ಕೆ
ಮೈಸೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಗೃಹಿಣಿ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಮೂವರನ್ನು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಜೆ.ಪಿ. ನಗರ ಬಳಿಯ ಮಹದೇವ ಪುರ ನಿವಾಸಿ ಸಂತೋಷ್ಕುಮಾರ್ ಎಂಬವರ ಪತ್ನಿ ಚೈತ್ರಾ (25) ಆತ್ಮಹತ್ಯೆ ಮಾಡಿಕೊಂಡವರು. ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ನೀಡಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದರು. ಇದರಿಂದ ಮನನೊಂದ ಚೈತ್ರಾ ಶನಿವಾರ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಪತಿ ಮತ್ತು ಆತನ ಪೋಷಕರೆ ಕಾರಣ ಎಂದು ಚೈತ್ರಾ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚೈತ್ರಾ ಪತಿ ಸಂತೋಷ್ಕುಮಾರ್, ಅತ್ತೆ ಸಾವಿತ್ರಮ್ಮ ಮತ್ತು ಮಾವ ತಿಪ್ಪಯ್ಯ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವ್ಯಕ್ತಿ ನಾಪತ್ತೆ
ಮೈಸೂರು: ಕೆ.ಆರ್. ನಗರ ತಾಲೂಕು ಸಾಲಿಗ್ರಾಮ ಹೋಬಳಿ ಚಿಕ್ಕನಾಯಕನಹಳ್ಳಿ ನಿವಾಸಿ ತಮ್ಮಯ್ಯ ಎಂಬವರ ಪುತ್ರ ಸಿ.ಟಿ. ರಾಮಕಾಂತ್ (40) ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದಾರೆ. ರಾಮಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿದಾಗ ವೈದ್ಯರು ಬ್ರೈನ್ ಟ್ಯೂಮರ್ ಇದೆ ಎಂದು ತಿಳಿಸಿ, ಶನಿವಾರ ಶಸ್ತ್ರಚಿಕಿತ್ಸೆ ಮಾಡಲು ದಿನಾಂಕ ನಿಗದಿಪಡಿಸಿದ್ದರು. ಆದರೆ, ಅವರು ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ ಎಂದು ರಾಮಕಾಂತ ಅವರ ಪತ್ನಿ ಕಲ್ಪನಾ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಗುಂಡು ಮುಖ, ದೃಢಕಾಯ ಶರೀರ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಲು ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮ್ಯಾನ್ಹೋಲ್
ಮೈಸೂರು: ನಗರದ 2ನೇ ವಾರ್ಡಿನ ನಾಲಾಬೀದಿ 8ನೇ ತಿರುವಿನಲ್ಲಿ ತೆರೆದ ಮ್ಯಾನ್ಹೋಲ್ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ಮ್ಯಾನ್ಹೋಲ್ನಿಂದ ಡೆಂಘೀ ರೋಗ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಪಾಲಿಕೆ ಎಂಜಿನಿಯರ್ ರವಿಕುಮಾರ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಪರಿಹಾರ ಒದಗಿಸುವಂತೆ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ನಾಲಾಬೀದಿ ರವಿ, ಸುರೇಶ್ಬಾಬು, ಗೋಪಿ, ಮಲ್ಲಿಕಾರ್ಜುನ, ಮಹೇಶ್, ನಾರಾಯಣಸ್ವಾಮಿ, ಪೂರ್ಣಿಮಾ, ಮಂಜುಳಾ, ರಾಮಕೃಷ್ಣ ಮನವಿ ಮಾಡಿದ್ದಾರೆ.
ಇಬ್ಬರಿಗೆ ಡಾಕ್ಟರೇಟ್
ಮೈಸೂರು: ಡಾ.ಎಸ್. ಶ್ರೀಕಂಠಸ್ವಾಮಿ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಶಕುಂತಲಾಬಾಯಿ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಪರಿಸರ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಡಾ. ಪುಟ್ಟಯ್ಯ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಪಿ. ಮಂಜುನಾಥ್ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಇತಿಹಾಸ ವಿಷಯದಲ್ಲಿ ಪಿಎಚ್.ಡಿ ನೀಡಿದೆ.
ಪ್ರಬಂಧ ಸ್ಪರ್ಧೆ ವಿಜೇತರು
ಮೈಸೂರು: ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಬಳಗವು ಇತ್ತೀಚೆಗೆ ಏರ್ಪಡಿಸಿದ್ದ ನನ್ನ ವೃತ್ತಿ ನನಗೆ ಶ್ರೇಷ್ಠ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಿಸಿದೆ. ಇಂದಿರಾ ಗೋವಿಂದ್ ಪ್ರಥಮ, ಎ.ಪಿ. ಚಂದ್ರಶೇಖರ್ ದ್ವಿತೀಯ, ಡಾ. ಕೋಡಿರ್ ಎ. ಕುಶಾಲಪ್ಪ ತೃತೀಯ ಹಾಗೂ ಡಾ.ಎಸ್. ದೀಪಾ ಪ್ರೋತ್ಸಾಹಕರ ಬಹುಮಾನ ಪಡೆದುಕೊಂಡಿದ್ದಾರೆ. ಮುಂದಿನ ಸೆಪ್ಟೆಂಬರ್ನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ರಂಗನಾಥ್ ಮೈಸೂರು ತಿಳಿಸಿದ್ದಾರೆ.
ಗೋವಿಂದಪೈ ಕಾವ್ಯ ನಮನ
ಮೈಸೂರು: ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ಪಿಯು ಕಾಲೇಜಿನ ಕನ್ನಡ ವಿಭಾಗದಿಂದ ಆ. 27ರ ಬೆಳಗ್ಗೆ 9ಕ್ಕೆ ರಾಷ್ಟ್ರಕವಿ ಎಂ. ಗೋವಿಂದ ಪೈ ಕಾವ್ಯ ನಮನ ಕಾರ್ಯಕ್ರಮ ಏರ್ಪಡಿಸಿದ್ದು, ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್. ಶಿವಾಜಿ ಜೋಯಿಸ್ ಉದ್ಘಾಟಿಸುವರು.
ಬಿಜೆಪಿಗೆ ನೇಮಕ
ಮೈಸೂರು: ನಗರ ಬಿಜೆಪಿ ಎನ್.ಆರ್. ಕ್ಷೇತ್ರದ 62ನೇ ವಾರ್ಡಿನ ಅಧ್ಯಕ್ಷರಾಗಿ ಚರಣ್ಸಿಂಗ್ ಹಾಗೂ ಬಿಜೆಪಿ ಯುವ ಮೋರ್ಚಾ ವರುಣಾ ಕ್ಷೇತ್ರದ ಅಧ್ಯಕ್ಷರಾಗಿ ಚೋರನಹಳ್ಳಿ ಪಿ. ಮೂರ್ತಿ ನೇಮಕವಾಗಿದ್ದಾರೆ.
ಅಪಘಾತ: ಪಾದಚಾರಿ ಸಾವು
ಮೈಸೂರು: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಮೃತಪಟ್ಟಿರುವ ಘಟನೆ ಬನ್ನಿಮಂಟಪದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೈಸೂರು ತಾಲೂಕು ಬೆಲವತ್ತ ನಿವಾಸಿ ಅನಿಲ್ ಆಂಡ್ರೂಸ್ ಎಂಬವರ ಪುತ್ರ ವಿಜಯಕುಮಾರ್ (63) ಮೃತಪಟ್ಟವರು. ಇವರು ಬನ್ನಿಮಂಟಪ ನೆಲ್ಸನ್ ಮಂಡೇಲಾ ರಸ್ತೆ ಬಾಲಭವನ ಗೇಟ್ ನಂ. 5ರ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವಿಜಯಕುಮಾರ್ ಅವರನ್ನು ಚಾಲಕ ಡಾ. ಸತೀಶ್ ಎಂಬವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಎನ್.ಆರ್. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರು ಚಾಲಕ ಡಾ. ಸತೀಶ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.