'ಶಾಲೆಗಳಲ್ಲಿ ವಿಜ್ಞಾನ ಕಾರ್ಯಕ್ರಮ ಕ್ಷೀಣ'
ಕ.ಪ್ರ.ವಾರ್ತೆ , ಮೈಸೂರು , ಆ. 25
ಶಾಲೆಗಳಲ್ಲಿ ವಿಜ್ಞಾನ ಕಾರ್ಯಕ್ರಮಗಳು ಕ್ಷೀಣಿಸುತ್ತಿವೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕ ಅನಂತರಾಮು ವಿಷಾದಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಘಟಕವು ಸರ್. ಸಿ.ವಿ. ರಾಮನ್ ಅವರ ವಿಜ್ಞಾನ ಹಾಗೂ ಗಣಿತ ಸಂಘದ ಸಹಯೋಗದೊಂದಿಗೆ ಮೇದರ ಬ್ಲಾಕ್ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಮತ್ತು ಗಣಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳುವುದರ ಜತೆಗೆ ವಿಜ್ಞಾನ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮ ಯಶಸ್ವಿಯಾಗಿದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದರ ಜತೆಗೆ ಚಟುವಟಿಕೆಗಳಿಂದ ತಮ್ಮ ಜ್ಞಾನಾರ್ಜನೆ ಉತ್ತಮಗೊಳಿಸಿಕೊಂಡು ಉತ್ತಮ ಚಿಂತನೆ ಬೆಳೆಸಿಕೊಳ್ಳುವಂತೆ ಅವರು ತಿಳಿಸಿದರು.
ಮುಖ್ಯ ಅತಿಥಿ ಶಂಕರ್, ಶಾಲೆಯ ಮುಖ್ಯ ಶಿಕ್ಷಕಿ ವಿಜಯಮ್ಮಣ್ಣಿ ಇದ್ದರು. ಶೇಷಾದ್ರಿ ಸ್ವಾಗತಿಸಿದರು. ಮಂಜುಳಾ ವಂದಿಸಿದರು.