ಸಾಹಿತಿಗಳಿಂದ ಸಾಮಾಜಿಕ ಹೊಣೆ ನಿರೀಕ್ಷೆ ಸಲ್ಲ
ಕ.ಪ್ರ.ವಾರ್ತೆ , ಮೈಸೂರು , ಆ. 25
ಸಾಹಿತಿಗಳಿಂದ ಸಾಮಾಜಿಕ ಜವಾಬ್ದಾರಿ ನಿರೀಕ್ಷಿಸುವುದು ಸಲ್ಲದು ಎಂದು ಪ್ರಸಿದ್ಧ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಹೇಳಿದರು.
ಬೆಂಗಳೂರಿನ ಸುಂದರ ಪ್ರಕಾಶನವು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಪ್ರಧಾನ ಗುರುದತ್ತ ಹಾಗೂ ಗೌರಿ ಸುಂದರ್ ಅವರು ಸಂಪಾದಿಸಿರುವ 'ಡಾ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು' ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಪ್ಪತ್ತನೇ ಶತಮಾನದಿಂದ ಸಾಹಿತಿಗಳ ಮೇಲೆ ಸಾಮಾಜಿಕ ಜವಾಬ್ದಾರಿ ಹೇರುವ ಪ್ರವೃತ್ತಿ ಆರಂಭವಾಗಿದೆ. ಇದು ಪಾಶ್ಚಾತ್ಯದಿಂದ ಅದರಲ್ಲೂ ಎಡಪಂಥೀಯರಿಂದ ಬಂದದ್ದು. ಒಬ್ಬ ಸಾಹಿತಿಗೆ ನಿನ್ನ ಸಾಮಾಜಿಕ ಜವಾಬ್ದಾರಿಯೇನು? ನೀನು ಬರೆದಿರುವುದರಿಂದ ದೇಶದ ಬಡತನ ಹೋಗಲಾಡಿದೆಯೇ ಎಂದು ಪ್ರಶ್ನಿಸುವುದು ಸರಿಯಲ್ಲ. ಸರ್ಕಾರದ ಯೋಜನೆಗಳು, ಭ್ರಷ್ಟಾಚಾರರಹಿತ ಆಡಳಿತ ಹಾಗೂ ತೆರಿಗೆ ಹಣವನ್ನು ಜವಾಬ್ದಾರಿಯಾಗಿ ಖರ್ಚು ಮಾಡುವುದರ ಮೇಲೆ ಸಮಾಜದ ಉದ್ಧಾರ ನಿರೀಕ್ಷಿಸಬಹುದಾಗಿದೆ ಎಂದರು.
ರಸಾನುಭವ ಮುಖ್ಯ: ಕಲೆಗಾರರಿಗೆ, ಸಂಗೀತಗಾರರಿಗೆ ಹಾಗೂ ಸಾಹಿತಿಗಳಿಗೆ ತಮ್ಮ ಕೃತಿಯಲ್ಲಿನ ರಸಾನುಭವ ಮುಖ್ಯವಾಗಿರುತ್ತದೆ. ಮನುಷ್ಯನ ಸ್ವಭಾವದ ಹಾಗೂ ಜೀವನದ ಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುವುದು ಶುದ್ಧ ಸಾಹಿತ್ಯದ ಕೆಲಸ. ಅದೇ ಅದರ ಸಾಮಾಜಿಕ ಜವಾಬ್ದಾರಿ ಹೊರತು ಅದಕ್ಕಿಂತಲ್ಲೂ ಬೇರೆಯೇನು ನಿರೀಕ್ಷಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಹೀಗೂ ನಡೆಯುತ್ತದೆ ಎಂಬ ಘಟನೆಗಳನ್ನು ಪಾತ್ರಗಳ ಹಾಗೂ ಭಾವನೆಗಳ ಮೂಲಕ ಕಾದಂಬರಿಗಳಲ್ಲಿ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಒಂದು ಕಾದಂಬರಿಯ ನಂತರ ಮತ್ತೊಂದು ಕಾದಂಬರಿಯ ವಸ್ತು ಮತ್ತು ಸಿದ್ಧಾಂತ ಹೀಗೆ ಇರಬೇಕೆಂದು ವಿಮರ್ಶಕರು ಬಯಸುವುದು ತಪ್ಪು. ಕವಲು ಕಾದಂಬರಿಯು ಸ್ತ್ರೀ ವಿರೋಧಿಯೆಂದು ಗಲಾಟೆ ಮಾಡಿದರು. ಆದರೆ, ಗೃಹಭಂಗ, ಸಾಕ್ಷಿ, ಪರ್ವ ಬರೆದಾಗ ಯಾರು ಗಲಾಟೆ ಮಾಡಲಿಲ್ಲ ಎಂಬುದನ್ನು ಮರೆಯಬಾರದು. ನಾನು ಯಾವುದೇ ಸಿದ್ಧಾಂತ ಇರಿಸಿಕೊಂಡು ಸಾಹಿತ್ಯ ರಚಿಸುತ್ತಿಲ್ಲ. ಬದುಕಿನ ಮೌಲ್ಯ ತಿಳಿಸುವುದು ನನ್ನ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಶಾರದಾ ವಿಲಾಸ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಎನ್‌ಐಇ ಪ್ರಾಂಶುಪಾಲ ಪ್ರೊ. ಜಿ.ಎಲ್.ಶೇಖರ್, ಉದ್ಯಮಿ ಎಸ್.ಎಲ್.ರಾಮಚಂದ್ರ, ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮೀನಾರಾಯಣ ಬಾಬು ಹಾಗೂ ಎನ್. ಆನಂದ ರಾಮರಾವ್ ಅವರನ್ನು ಸನ್ಮಾನಿಸಲಾಯಿತು.
ಡಾ. ಭೈರಪ್ಪ ಅವರ ಕಾದಂಬರಿಗಳ ಕುರಿತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಎನ್.ಎಸ್. ತಾರಾನಾಥ್, ಮೈಸೂರು ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ಆರ್. ಇಂದಿರಾ, ತತ್ವಜ್ಞಾನಿ ಡಾ. ಜಿ.ಬಿ. ಹರೀಶ್ ಹಾಗೂ ಲೇಖಕಿ ಭಾರತಿ ಕಾಸರಗೋಡು ಅವರು ಮಾತನಾಡಿದರು.