ಚಾಮುಂಡಿ ಬೆಟ್ಟ ಭೂ ಒತ್ತುವರಿ: ತನಿಖೆ
ಕ.ಪ್ರ.ವಾರ್ತೆ , ಮೈಸೂರು , ಆ. 26
ಚಾಮುಂಡಿ ಬೆಟ್ಟದ ಸುತ್ತಲಿನ ಭೂ ಒತ್ತುವರಿಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ ನೂರು ದಿನ ನೂರಾರು ನಿರ್ಣಯ ಸಂಚಿಕೆ ಬಿಡುಗಡೆಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರು ಚಾಮುಂಡಿ ಬೆಟ್ಟದ ತಪ್ಪಲಿನ ಕುರುಬಾರಹಳ್ಳಿ ಸುತ್ತಲಿನ ಜಮೀನು ಒತ್ತುವರಿ ಸಂಬಂಧ ಏಕಾಂಗಿ ಹೋರಾಟ ನಡೆಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ನಿವೃತ್ತ ಐಎಎಸ್ ಅಧಿಕಾರಿ ಒಬ್ಬರನ್ನು ನೇಮಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಿದ್ದುಪಡಿ: ರಾಜ್ಯದಲ್ಲಿ ಸರ್ಕಾರಿ ಮತ್ತು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾದ 12 ಲಕ್ಷ ಎಕರೆ ಜಮೀನನ್ನು ವಶಪಡಿಸಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ಪ.ಜಾತಿಗೆ ಸರ್ಕಾರದಿಂದ ನೀಡಲಾದ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಪ.ಜಾತಿಯವರಿಗೆ ಜಮೀನು ನೀಡಿದ 10 ರಿಂದ 15 ವರ್ಷಗಳ ಬಳಿಕ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಎಸಿ, ಡಿಸಿ ಮತ್ತು ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಅಲ್ಲದೆ, ಮಾರಾಟ ಮಾಡಿದ್ದಕ್ಕೆ ಪರ್ಯಾಯವಾಗಿ ಅವರು ಬೇರೆಡೆ ಭೂಮಿ ಖರೀದಿಸಿದರೆ ಮಾತ್ರ ಮಾರಾಟ ಮಾಡಲು ಅನುಮತಿ ನೀಡುವುದಾಗಿ ವಿವರಿಸಿದರು.
ರಾಜ್ಯದಲ್ಲಿ ಏಕರೂಪದ ಮರಳು ನೀತಿ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಈ ನೀತಿ ಜಾರಿಗೆ ತರಲಾಗುತ್ತಿದೆ. ಸದ್ಯ ಗ್ರಾಹಕರಿಗೆ ಮರಳಿನ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೈಬಿಡಲ್ಲ: ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಸಮಿತಿಗಳ ಶಿಫಾರಸ್ಸಿನಂತೆ ಘೋಷಣೆ ಮಾಡಲಾಗಿದ್ದ 43 ಹೊಸ ತಾಲೂಕು ರಚನೆಯನ್ನು ಯಾವುದೆ ಕಾರಣಕ್ಕೂ ಕೈಬಿಡುವುದಿಲ್ಲ. ಒಂದು ತಾಲೂಕು ರಚನೆಗೆ 18 ರಿಂದ 20 ಕೋಟಿ ವೆಚ್ಚವಾಗುತ್ತದೆ. 43 ತಾಲೂಕುಗಳ ರಚನೆಗೆ 1 ಸಾವಿರ ಕೋಟಿ ಬೇಕಾಗುತ್ತದೆ. ಈಗ ಅಷ್ಟೊಂದು ಸಂಪನ್ಮೂಲ ಕ್ರೂಢೀಕರಣ ಕಷ್ಟವಾದ್ದರಿಂದ ಹಂತ- ಹಂತವಾಗಿ ತಾಲೂಕುಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ ಕಂದಾಯ ಸಂಬಂಧಿತ ಪ್ರಕರಣಗಳನ್ನು ಕೂಡಲೆ ಇತ್ಯರ್ಥ ಪಡಿಸುವಂತೆ ಎಲ್ಲಾ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.
ರಾಜ್ಯ ಸರ್ಕಾರವು ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಎಲ್ಲಾ ಘೋಷಣೆಯನ್ನು ಜಾರಿಗೆ ತಂದಿದೆ. ಕ್ಷೀರಭಾಗ್ಯ, ಅನ್ನಭಾಗ್ಯ, ಹಾಲಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ ಯೋಜನೆ, 50ಕ್ಕೂ ಹೆಚ್ಚು ಮನೆ ಇದ್ದರೆ ಕಂದಾಯ ಗ್ರಾಮವಾಗಿ ಘೋಷಣೆ ಸೇರಿದಂತೆ ಹಲವು ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ದಸರಾಗೆ 10 ಕೋಟಿ ಬಿಡುಗಡೆ
ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತಾಧಿಕಾರಿ ಸಮಿತಿ ಸಭೆಯಲ್ಲಿ ಹಲವು ತೀರ್ಮಾನ ಕೈಗೊಳ್ಳಲಾಗಿದೆ. ದಸರಾಗೆ 10 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ನಗರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರದ ಹಣ ದುರುಪಯೋಗ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆ. 28ಕ್ಕೆ ವೀರನಹೊಸಳ್ಳಿಯಿಂದ ಗಜಪಯಣ ಆರಂಭವಾಗುವ ಹಿನ್ನೆಲೆಯಲ್ಲಿ ಆ. 27ರಂದು ದಸರಾ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಎಸ್ಪಿ ಅಭಿನವ್ ಖರೆ, ಜಿಪಂ ಸಿಇಒ ಗೋಪಾಲ್, ಉಪ ವಿಭಾಗಾಧಿಕಾರಿ ಬಸವರಾಜು, ಡಿಡಿಪಿಐ ಬಿ.ಕೆ. ಬಸವರಾಜು, ವಾರ್ತಾ ಇಲಾಖೆ ಉಪ ನಿದೇಂಶಕ ಎ.ಆರ್. ಪ್ರಕಾಶ್ ಇದ್ದರು.
ಗಮನಕ್ಕೆ ತಾರದೇ ದಸರಾ ಉಪ ಸಮಿತಿ ನೇಮಕ: ಅಧಿಕಾರಿಗಳಿಗೆ ತರಾಟೆ
ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಉಪ ಸಮಿತಿ ರಚಿಸುವ ವೇಳೆ ಸೌಜನ್ಯಕ್ಕಾದರೂ ತಮ್ಮ ಗಮನಕ್ಕೆ ತರಬೇಡವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಸೋಮವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ಕಿರು ಹೊತ್ತಿಗೆ ಬಿಡುಗಡೆ ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಧಾನ ಪರಿಷತ್ ಉಪ ಚುನಾವಣೆಯ ನೀತಿ ಸಂಹಿತೆಯ ನೆಪ ಹೇಳಿಕೊಂಡು ಅಧಿಕಾರಿಗಳೆ ಸೇರಿ ಉಪ ಸಮಿತಿ ರಚಿಸಿಕೊಂಡಿರುವುದು ಸರಿಯಲ್ಲ. ನೀವೆ ಎಲ್ಲವನ್ನೂ ಮಾಡುವುದಾದರೆ ನಮ್ಮ ಅಗತ್ಯ ಏನಿದೆ. ಉಪ ಸಮಿತಿ ರಚನೆ ವೇಳೆ ಸೌಜನ್ಯಕ್ಕಾದರೂ ನಮಗೂ ವಿಷಯ ತಿಳಿಸಬೇಕಿತ್ತು ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಸಿ. ಶಿಖಾ ಇರಲಿಲ್ಲ. ಬದಲಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಎಸ್ಪಿ ಅಭಿನವ್ ಖರೆ, ಎಸಿ ಬಸವರಾಜು, ಡಿಡಿಪಿಐ ಬಸವರಾಜು, ವಾರ್ತಾ ಇಲಾಖೆ ಉಪ ನಿದೇರ್ಶಕ ಎ.ಆರ್. ಪ್ರಕಾಶ್ ಇದ್ದರು.