ತಹಸೀಲ್ದಾರ್ ಹೇಳಿಕೆ ಖಂಡಿಸಿ ವಕೀಲರ ಪ್ರತಿಭಟನೆ
ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಆ. 26
ಸತ್ಯ ಹಾಗೂ ವಸ್ತುನಿಷ್ಠ ನ್ಯಾಯ ಪ್ರತಿಪಾದಿಸುವ ವಕೀಲರ ಬಗ್ಗೆ ಅಗೌರವವಾಗಿ ಮಾತನಾಡಿರುವ ಹಾಗೂ ಸದಸ್ಯತ್ವ ರದ್ದುಗೊಳಿಸಲು ರಾಜ್ಯ ಬಾರ್ ಕೌನ್ಸಿಲ್ಗೆ ಪತ್ರ ಬರೆಯುವುದಾಗಿ ಹಾಗೂ ವಕೀಲ ವೃತ್ತಿಗೆ ಅವಮಾನ ಮಾಡುವ ರೀತಿಯಲ್ಲಿ ತಹಸೀಲ್ದಾರ್ ಎಂ.ಕೆ. ಸವಿತಾ ಅವರು ನೀಡಿರುವ ಹೇಳಿಕೆಯನ್ನು ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ವಿ.ಜವರೇಗೌಡ ಖಂಡಿಸಿದ್ದಾರೆ.
ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪಗಳನ್ನು ಸೋಮವಾರ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ವಕೀಲರಾದ ಭಾಸ್ಕರ್ ಹಾಗೂ ಸಹೋದ್ಯೋಗಿ ಲೋಕೇಶ್, ತಾಲೂಕು ಕಚೇರಿಗೆ ತೆರಳಿ ಬೈಲಕುಪ್ಪೆ ಗ್ರಾಮದ ತುಪ್ಟೆನ್ ವೋಯಿಸ್ ಅವರ ಜನನ ಪ್ರಮಾಣ ಪತ್ರ ಕೇಳಲು ಹೋದಾಗ ಕಚೇರಿಯ ನೌಕರ ಕೃಷ್ಣ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಷಯವಾಗಿ ಇಬ್ಬರ ಮೇಲೂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎಂದರು.ಹೀಗಿರುವಾಗ ತಹಸೀಲ್ದಾರ್ ವಕೀಲರ ಮೇಲೆ ಅಗೌರವವಾಗಿ ಮಾತನಾಡಿ, ಅವಮಾನ ಮಾಡಿರುತ್ತಾರೆ. ಆದರೆ, ಒಬ್ಬ ವಕೀಲನ ಸದಸ್ಯತ್ವವನ್ನು ರದ್ದುಗೊಳಿಸಲು ಪತ್ರ ಬರೆಯುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಸಿ.ಟಿ. ನಾಗರಾಜು, ಖಜಾಂಚಿ ಡಿ.ಎನ್. ಪ್ರಕಾಶ್, ವಕೀಲರಾದ ಭಾಸ್ಕರ್, ಎಲ್. ಆನಂದ್, ಟಿ.ಪಿ. ಗಣಪತಿ, ಗೋವಿಂದೇಗೌಡ, ಕೆ.ಡಿ. ಸಂದೀಪ್, ಹೆಮ್ಮಿಗೆ ಶ್ರೀನಿವಾಸ್, ಎಸ್.ಟಿ. ಕೃಷ್ಣಪ್ರಸಾದ್, ಮಹದೇವಪ್ಪ, ಕೆ.ಆರ್. ವಿಜಯ್, ಧನಪಾಲ, ನಟರಾಜ್, ನಾಗರಾಜ್, ಬಿ.ಎಂ. ಕುಮಾರ್, ಲೋಕೇಶ್, ಸಿ.ಪಿ. ಮಹೇಶ್ ಇದ್ದರು.