ಪಂಚಕೋಶಿ ಪರಿಕ್ರಮ ತಡೆ ವಿರೋಧಿಸಿ ಧರಣಿ
ಕ.ಪ್ರ.ವಾರ್ತೆ , ಮೈಸೂರು , ಆ. 26
ಅಯೋಧ್ಯೆಯ ಶ್ರೀರಾಮಮಂದಿರದ ಪಂಚಕೋಶಿ ಪರಿಕ್ರಮ ತಡೆದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.
ಉತ್ತರಪ್ರದೇಶ ಸರ್ಕಾರವು ಶ್ರೀರಾಮಮಂದಿರದ ನ್ಯಾಸದಲ್ಲಿ ದೇಶದ ಸಾಧು- ಸಂತರು ಪಂಚಕೋಶಿ ಪರಿಕ್ರಮ ಹಾಗೂ ಇತರ ಧಾರ್ಮಿಕ ಕಾರ್ಯ ಮಾಡದಂತೆ ತಡೆಗಟ್ಟಿ, ನಮ್ಮ ಹಿಂದೂ ನಾಯಕರನ್ನು ಮತ್ತು ಹಲವು ಸಾಧು ಸಂತರನ್ನು ಕಾನೂನು ಬಾಹಿರವಾಗಿ ಬಂಧಿಸಿ ನಮ್ಮ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದೆ. ಪಂಚಕೋಶಿ ಪರಿಕ್ರಮ ಸಾವಿರಾರು ವರ್ಷದಿಂದ ನಡೆದುಕೊಂಡು ಬರುತ್ತಿರುವುದು ಐತಿಹಾಸಿಕ ಸತ್ಯ. ಅದರಲ್ಲಿ ಭಾಗವಹಿಸುವ ಸಾಧು- ಸಂತರು ಹಿಂದೂ ಸಮಾಜವನ್ನು ಪ್ರತಿನಿಧಿಸುತ್ತಾರೆ. ಆದರೆ, ಉತ್ತರ ಪ್ರದೇಶ ಸರ್ಕಾರವು ಕುಂಟುನೆಪ ಹೇಳಿ ಧಾರ್ಮಿಕ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.
ಅಲಹಾಬಾದ್ ನ್ಯಾಯಾಲಯವು ಶ್ರೀರಾಮಜನ್ಮಭೂಮಿ ಜಾಗ ವಿವಾದರಹಿತ ಸ್ಥಳ ಎಂದು ತೀರ್ಪು ನೀಡಿದೆ. ಅಲ್ಲಿ ಯಾವುದೆ ರೀತಿಯ ಪೂಜಾ ಕಾರ್ಯಗಳಿಗೆ ಅಡ್ಡಿಪಡಿಸದಂತೆ ಸೂಚಿಸಿದೆ. ಆದರೂ ಅಲ್ಲಿನ ಸರ್ಕಾರ ಧಾರ್ಮಿಕ ಭಾವನೆಗೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ಕೂಡಲೆ ಕೇಂದ್ರ ಸರ್ಕಾರ ಮಧ್ಯೆಪ್ರವೇಶಿಸಿ ಶ್ರೀರಾಮ ಜನ್ಮಭೂಮಿಯಲ್ಲಿ ನಡೆಸಿಕೊಂಡು ಬರುತ್ತಿರುವ ಪೂಜಾ ಪದ್ಧತಿಗೆ ಅಡ್ಡಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯ ಶಿವಕುಮಾರ್, ಮಾಜಿ ಸದಸ್ಯ ಬೊ. ಉಮೇಶ್, ಮುಖಂಡರಾದ ಪ್ರಕಾಶ್, ಶೆಣೈ, ಶಿವರಾಂ ಮತ್ತು ವಿಎಚ್‌ಪಿ ಕಾರ್ಯಕರ್ತರು ಇದ್ದರು.