ಮರಳುಗಾರಿಕೆ ತಡೆಗೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಆ. 26
ಟಿ. ನರಸೀಪುರ ತಾಲೂಕು ಕಾಳಿಹುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಮರಳುಗಾರಿಕೆ ತಡೆಯುವಂತೆ ಒತ್ತಾಯಿಸಿ ಅಲ್ಲಿನ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಗ್ರಾಮದಲ್ಲಿ ಮರಳುಗಾರಿಕೆ ನಡೆಯುತ್ತಿರುವುದರಿಂದ ಜಮೀನಿಗೆ ಹೋಗಲು ಕಷ್ಟವಾಗುತ್ತಿದೆ. ಅಲ್ಲದೆ, ಜಮೀನಿಗೆ ಸಂಪರ್ಕಿಸುವ ರಸ್ತೆಯೂ ಬಿರುಕು ಬಿಟ್ಟಿದೆ. ಆದ್ದರಿಂದ ನಮ್ಮ ಗ್ರಾಮದಲ್ಲಿ ಮರಳುಗಾರಿಕೆ ನಡೆಸಬಾರದು ಎಂದು ಆಗ್ರಹಿಸಿದರು.
ಎಸ್ಪಿ ಅಭಿನವ್ ಖರೆ ಮಾತನಾಡಿ, ಯಾವುದೆ ಕಾರಣಕ್ಕೂ ಗ್ರಾಮಸ್ಥರು ಸಂಘರ್ಷಕ್ಕೆ ಇಳಿಯಬಾರದು. ನಿಮ್ಮ ಸಮಸ್ಯೆಯನ್ನು ಮಾತಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.
ಮರಳು ಲಾರಿ ಮಾಲೀಕರ ಪ್ರತಿಭಟನೆ ಹಿಂದಕ್ಕೆ
ಮೈಸೂರು: ಮರಳು ಲಾರಿ ಮಾಲೀಕರೊಡನೆ ಜಿಲ್ಲಾಡಳಿತ ನಡೆಸಿದ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಮರಳು ಸಾಗಿಸುವ ಲಾರಿ ಮಾಲೀಕರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಮರಳು ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಮರಳು ಸಾಗಾಣಿಕೆ ಪರವಾನಗಿ ವಿತರಣೆಯನ್ನು ಅರ್ಹ ಸಾರ್ವಜನಿಕರಿಗೆ ಮರಳು ಸಂಘಗಳ ಸದಸ್ಯ ಲಾರಿ ಮಾಲೀಕರ ಆರ್‌ಟಿಒ ನೋಂದಾಯಿತ ಹಾಗೂ ಜಿಪಿಎಸ್ ಅಳವಡಿಸಿಕೊಂಡ ಲಾರಿ ಸಂಖ್ಯೆ ನಮೂದಿಸಿ ಸರದಿಯ ಪ್ರಕಾರ ಸಾಗಣಿಕೆ ದರ 4,700 ನಂತೆ ವಿತರಿಸಲು ಒಪ್ಪಿಗೆ ಸೂಚಿಸಲಾಗಿದೆ. ಪ್ರತಿದಿನ ಸುಮಾರು 250 ಪರವಾನಗಿ ವಿತರಿಸಲು ಸೂಚಿಸಲಾಗಿದೆ. ಆ. 27 ರಿಂದ ಮರಳು ಸಾಗಾಣಿಕೆ ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದೆ. ಪ್ರತಿ ಲಾರಿಗೆ ಯಾವುದೆ ಕಾರಣಕ್ಕೂ ಒಮ್ಮೆ ಸರದಿ ಪೂರ್ಣಗೊಳ್ಳದೆ ಮತ್ತೊಂದು ಪರವಾನಗಿ ನೀಡಬಾರದು ಎಂಬ ಅಭಿಪ್ರಾಯ ಒಪ್ಪಲಾಗಿದೆ. ಸಾಗಾಣಿಕೆ ಕೈಗೊಳ್ಳಲಾಗದ ಲಾರಿಗಳು ಮುಂದಿನ ಸರದಿಯವರೆಗೂ ಕಾಯಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಸೂಚಿಸಲಾಗಿದೆ.