ಮೇಲ್ಮನೆ ಉಪ ಚುನಾವಣೆಯಲ್ಲಿ 'ಧರ್ಮಸೇನಾಧಿಪತಿ'
ಕ.ಪ್ರ.ವಾರ್ತೆ , ಮೈಸೂರು , ಆ. 26
ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ ಜಯಭೇರಿ ಬಾರಿಸಿದ್ದಾರೆ.
ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಕಾಂಗ್ರೆಸ್ ಕಳೆದ ಬಾರಿ ಬಿಜೆಪಿಗೆ ಬಿಟ್ಟುಕೊಟ್ಟಿದ್ದ ಕ್ಷೇತ್ರವನ್ನು ಈ ಬಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಧರ್ಮಸೇನ ಆಯ್ಕೆಯಾಗಿದ್ದಾರೆ. ಇವರು ತಮ್ಮ ಸಮೀಪದ ಅಭ್ಯರ್ಥಿ ಕೆಜೆಪಿಯ ಯು.ಎಸ್. ಶೇಖರ್ ಅವರನ್ನು 1,168 ಮತಗಳಿಂದ ಪರಾಭವಗೊಳಿಸಿದರು. ಧರ್ಮಸೇನ 3,779 ಮತಗಳನ್ನು ಗಳಿಸಿದರೆ, ಶೇಖರ್ 2,611 ಮತಗಳಿಗೆ ತೃಪ್ತಿಪಡಬೇಕಾಯಿತು. ಕಾಂಗ್ರೆಸ್ ಸೋಲಿಸಲು ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ ನಡೆಸಿದ ಪ್ರಯತ್ನ ಫಲ ನೀಡಿಲ್ಲ.
ನಗರದ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಮತ ಎಣಿಕಾ ಕೇಂದ್ರದ 14 ಟೇಬಲ್ನಲ್ಲಿ ಒಂದೇ ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳಿಸಲಾಯಿತು. ಒಂದು ಟೇಬಲ್ ಹೊರತುಪಡಿಸಿ ಉಳಿದೆಲ್ಲ ಟೇಬಲ್ನಲ್ಲಿಯೂ ಧರ್ಮಸೇನ 250ಕ್ಕೂ ಹೆಚ್ಚು ಮತಗಳನ್ನು ಪಡೆದರು. ಒಟ್ಟು 6,953 ಮತಗಳ ಪೈಕಿ 487 ಮತಗಳನ್ನು ಕುಲಗೆಟ್ಟ ಮತ ಎಂದು ತೀರ್ಮಾನಿಸಲಾಯಿತು. ಉಳಿದ 6,466 ಮತಗಳಲ್ಲಿ ಆರ್. ಧರ್ಮಸೇನ 3,779, ಯು.ಎಸ್. ಶೇಖರ್ 2,611 ಮತ್ತು ಪಕ್ಷೇತರ ಅಭ್ಯರ್ಥಿ ಅಯೂಬ್ಖಾನ್ 76 ಮತ ಪಡೆದರು.
ಬೆಳಗ್ಗೆ 8 ಗಂಟೆ ಸುಮಾರಿಗೆ ಮತಪೆಟ್ಟಿಗೆ ತೆರೆದು ಮತಪತ್ರಗಳನ್ನು ವಿಭಾಗಿಸಲಾಯಿತು. 11 ಗಂಟೆ ಸುಮಾರಿಗೆ ಮತ ಎಣಿಕೆ ಆರಂಭವಾಯಿತು. ಮಧ್ಯಾಹ್ನ 12.30ರ ಸುಮಾರಿಗೆ ಧರ್ಮಸೇನ ಅವರ ಆಯ್ಕೆ ಬಹುತೇಕ ಖಚಿತವಾಯಿತು. ಕೂಡಲೇ ಮತ ಎಣಿಕಾ ಕೇಂದ್ರದ ಬಳಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಕಾಂಗ್ರೆಸ್ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು.
ಹಾವು ಏಣಿ ಆಟ: ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ಅಭ್ಯರ್ಥಿ ನಡುವೆ ಹಾವು ಏಣಿ ಆಟ ನಡೆಯಿತು.
ಎಲ್ಲ 14 ಟೇಬಲ್ಗಳ ಪೈಕಿ 4ನೆ ಟೇಬಲ್ ಹೊರತುಪಡಿಸಿ ಉಳಿದೆಲ್ಲ ಟೇಬಲ್ನಲ್ಲಿಯೂ ಧರ್ಮಸೇನ 250ಕ್ಕೂ ಹೆಚ್ಚು ಮತ ಪಡೆದರು. ಆದರೆ ಯು.ಎಸ್. ಶೇಖರ್ 4 ಮತ್ತು 12ನೇ ಟೇಬಲ್ನಲ್ಲಿ ಮಾತ್ರ 200 ಮತ ದಾಟಿದರು.
ಮೊದಲ ಟೇಬಲ್ನಲ್ಲಿ ಆರ್. ಧರ್ಮಸೇನ- 284, ಯು.ಎಸ್. ಶೇಖರ್ 178, 2ನೇ ಟೇಬಲ್ 275- 179, 3ರಲ್ಲಿ 264- 185, 4ರಲ್ಲಿ 241- 226, 5ರಲ್ಲಿ 283- 188, 6ರಲ್ಲಿ 273- 177, 7ರಲ್ಲಿ 280- 179, 8ರಲ್ಲಿ 255- 198, 9ರಲ್ಲಿ 283- 183, 10ರಲ್ಲಿ 263- 199, 11ರಲ್ಲಿ 271- 177, 12ರಲ್ಲಿ 269- 201, 13ರಲ್ಲಿ 277- 179 ಮತ್ತು 261- 162.
ಮತ ಎಣಿಕೆ ಕೇಂದ್ರದ ಸುತ್ತು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸಿ. ಶಿಖಾ, ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪ ವಿಭಾಗಾಧಿಕಾರಿಗಳಾದ ಬಸವರಾಜು, ವಿನೂತ ಪ್ರಿಯ, ತಹಸೀಲ್ದಾರ್ ನವೀನ್ ಜೋಸೆಫ್, ಡಿಸಿಪಿ ಮಹದೇವಯ್ಯ, ರಾಜಣ್ಣ, ಎಸಿಪಿ ಪ್ರಕಾಶ್ಗೌಡ ಇದ್ದರು.
'ನನ್ನ ಗೆಲವು ಪಕ್ಷದ ಜಯ'
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಉಪ ಚುನಾವಣೆಯ ಗೆಲವು ಪಕ್ಷದ ಗೆಲವು, ನಾನು ನಿಮಿತ್ತ ಮಾತ್ರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಆರ್. ಧರ್ಮಸೇನ ಹೇಳಿದರು. ವಿಜೇತರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸ್ಥಳೀಯ ಶಾಸಕರು ಮತ್ತು ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ಜಯ ಗಳಿಸಿದ್ದೇನೆ ಎಂದರು.
ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿಯ ಮತಗಳು ಹಂಚಿಕೆಯಾಯಿತು. ಆ ಮೂರು ಪಕ್ಷಗಳು ನಾಯಕರು ಹೊಂದಾಣಿಕೆ ಮಾಡಿಕೊಂಡರೂ, ಸ್ಥಳೀಯ ಕಾರ್ಯಕರ್ತರನ್ನು ನಿರ್ಲಕ್ಷಿಸಿದರು. ಇದು ನನಗೆ ಅನುಕೂಲವಾಗಿದೆ. ಅವರ ಮೈತ್ರಿ ನನಗೆ ಪರೋಕ್ಷವಾಗಿ ಸಹಕಾರಿಯಾಯಿತು ಎಂದು ಹೇಳಿದರು. ಉಭಯ ಜಿಲ್ಲೆಗಳ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡುತ್ತೇನೆ. ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದವರು ಗ್ರಾಪಂಗೆ ಭೇಟಿ ನೀಡುತ್ತಿಲ್ಲ ಎಂಬ ಆರೋಪ ಇದೆ. ಆದರೆ, ನಾನು ಟಿ. ನರಸೀಪುರದಲ್ಲಿಯೆ ಎಲ್ಲರಿಗೂ ಲಭ್ಯವಾಗುತ್ತೇನೆ. ಅಭಿವೃದ್ಧಿ ಹೊಂದಿದ ಗ್ರಾಪಂ ಮತ್ತು ಸೊರಗಿದ ಗ್ರಾಪಂ ಎಂದು ಎರಡು ವಿಭಾಗ ಮಾಡಿಕೊಂಡು ನನಗೆ ದೊರಕುವ ಎಲ್ಲಾ ಅನುದಾನವನ್ನು ಗ್ರಾಪಂಗಳ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ ಎಂದರು. ಬಡ ಜನರ ಸಂಕಷ್ಟದ ಅರಿವು ನನಗಿದೆ. ಆದ್ದರಿಂದ ಉಳಿಕೆ 2 ವರ್ಷಗಳ ಕಾಲ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧನಾಗಿ, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಅಂದು ಅಪ್ಪ, ಇಂದು ಮಗ...
ಮೈಸೂರು: ಅಂದು ಅಪ್ಪ, ಇಂದು ಮಗ...- ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಆರ್. ಧರ್ಮಸೇನ ಅವರ ತಂದೆ ಎನ್. ರಾಚಯ್ಯ ಕೂಡ ಮೇಲ್ಮನೆ ಸದಸ್ಯರಾಗಿದ್ದರು. ಸಂಸದರು ಹಾಗೂ ಸಚಿವರೂ ಆಗಿದ್ದರು. ಎನ್. ರಾಚಯ್ಯ ಅವರು 1952ರಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. 1957 ರಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರದಿಂದ ಡಿ. ದೇವರಾಜ ಅರಸು ಅವರೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿ, ಬಿ.ಡಿ. ಜತ್ತಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 1962ರಲ್ಲಿ ಎಚ್.ಡಿ. ಕೋಟೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. 1970 ರಿಂದ 1976 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ, ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಒಂದೇ ಕುಟುಂಬ: ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಒಂದೇ ಕುಟುಂಬಕ್ಕೆ ಹಾಗೂ ದಲಿತರಲ್ಲಿ ಎಡಗೈ ಪಂಗಡಕ್ಕೆ ಟಿಕೆಟ್ ನೀಡುತ್ತಾ ಬಂದಿರುವುದು ವಿಶೇಷ. ಟಿ. ನರಸೀಪುರದ ಎನ್. ರಾಚಯ್ಯ, ನರಸಿಂಹಯ್ಯ, ಚಿಕ್ಕಸಿದ್ದಯ್ಯ ಹಾಗೂ ಟಿ.ಎನ್. ನರಸಿಹಮೂರ್ತಿ- ನಾಲ್ವರು ಸಹೋದರರು. ನರಸಿಂಹಯ್ಯ ಟಿ. ನರಸೀಪುರ ಪುರಸಭಾ ಅಧ್ಯಕ್ಷರಾಗಿದ್ದರು. ಚಿಕ್ಕಸಿದ್ದಯ್ಯ ಅವರ ಪುತ್ರರಾದ ಸಿ. ರಮೇಶ್ ರಾಜ್ಯ ಆಹಾರ ನಿಗಮದ ಅಧ್ಯಕ್ಷರಾಗಿದ್ದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆ ಸದಸ್ಯರಾಗಿದ್ದರು. ಕಾಡಾ ಅಧ್ಯಕ್ಷರಾಗಿದ್ದರು. ಕಳೆದ ಬಾರಿ ಟಿ. ನರಸೀಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡರು. ಟಿ.ಎನ್. ನರಸಿಂಹಮೂರ್ತಿ ಅವರು ಸತತ ಮೂರು ದಶಕಗಳ ಕಾಲ ಮೇಲ್ಮನೆ ಸದಸ್ಯರಾಗಿದ್ದರು. ಪ್ರತಿಪಕ್ಷ ನಾಯಕ, ಸಭಾಪತಿ, ಸಚಿವರಾಗಿದ್ದರು. 1999ರ ಚುನಾವಣೆಯಲ್ಲಿ ಟಿ. ನರಸೀಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಇವರ ಪುತ್ರ ಎನ್. ಮಂಜುನಾಥ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. ಕಳೆದ ಬಾರಿ ಸೋತಿದ್ದರು. ಹಾಲಿ ಕೆಪಿಸಿಸಿ ಪ.ಜಾತಿ ವಿಭಾಗದ ಅಧ್ಯಕ್ಷರು.
487 ಕುಲಗೆಟ್ಟ ಮತಗಳು
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಉಪ ಚುನಾವಣೆಯಲ್ಲಿ 487 ಮತಗಳು ಕುಲಗೆಟ್ಟಿವೆ. ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ನಗರಪಾಲಿಕೆ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಲೋಕಸಭಾ ಸದಸ್ಯರು ಈ ಚುನಾವಣೆಯ ಮತದಾರರಾಗಿದ್ದರು ಎಂಬುದು ಗಮನಾರ್ಹ. ಚಲಾವಣೆಯಾದ 6,953 ಮತಗಳಲ್ಲಿ 487 ಮತ ಕುಲಗೆಟ್ಟಿವೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ಬಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಅಭ್ಯರ್ಥಿಯ ಹೆಸರಿನ ಮುಂದೆ ಆದ್ಯತೆ ಮೇರೆಗೆ 1, 2 ಮತ್ತು 3 ಎಂದು ಚುನಾವಣಾ ಅಧಿಕಾರಿಗಳು ನೀಡಿದ ಸ್ಕೆಚ್ ಪೆನ್ನಿನಿಂದ ಬರೆಯಬೇಕು ಎಂದು ಹೇಳಿದ್ದರೂ ಹಲವರು ತಮ್ಮ ಪೆನ್ನಿನಿಂದಲೆ ಬರೆದಿದ್ದರು. ಮತ್ತೆ ಕೆಲವರು ಹೆಸರಿನ ಮುಂದೆ ಪ್ಲಸ್ ಆಕಾರದ ಚಿಹ್ನೆ ಬರೆದರೆ ಮತ್ತೆ ಕೆಲವರು ರೈಟ್ ಚಿಹ್ನೆ ಬರೆದಿದ್ದರು. ಅನೇಕರು ಧರ್ಮಸೇನ ಮತ್ತು ಯು.ಎಸ್. ಶೇಖರ್ ಅವರಿಬ್ಬರಿಗೂ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದರು. ಓರ್ವ ಸದಸ್ಯರು ಅಭ್ಯರ್ಥಿಯ ಹೆಸರಿನ ಮುಂದೆ ಶಾಂತಮ್ಮ ಎಂದು ತಮ್ಮ ಹೆಸರನ್ನೆ ಬರೆದಿದ್ದರು. ಒಬ್ಬರು ಅಡ್ಡ ಗೆರೆ ಎಳೆದಿದ್ದರೆ, ಮತ್ತೊಬ್ಬರು ಅಭ್ಯರ್ಥಿಯ ಹೆಸರಿನ ಮುಂದೆ 12 ಎಂದು ನಮೂದಿಸಿದ್ದರು.