ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉದ್ಯೋಗ ಸೃಷ್ಟಿ ಸರ್ಕಾರದ ಕರ್ತವ್ಯ

Vishwanath S
Updated On : 31 Aug 2013, 12:10 pm

ಕ.ಪ್ರ.ವಾರ್ತೆ , ಮೈಸೂರು , ಆ. 30
ನಿರುದ್ಯೋಗಿ ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ವಿಶ್ವಮಾನವ ವಿದ್ಯಾರ್ಥಿ ಯುವವೇದಿಕೆಯು ಕಲಾಮಂದಿರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮೂರು ದಿನಗಳ ಅಂತರಕಾಲೇಜು ಸಾಂಸ್ಕೃತಿಕ ಹಬ್ಬವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕದ ಅಧ್ಯಕ್ಷ ಒಬಾಮ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಸುವ ಘೋಷಣೆ ಮಾಡಿದ್ದರು. ಅದನ್ನು ಈಡೇರಿಸಲು ಕ್ರಮ ಕೈಗೊಂಡರು. ಆದರೆ ಇಲ್ಲಿನ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿ ಘೋಷಿಸುವ ಕೆಲಸ ಮಾಡುತ್ತಿಲ್ಲ ಹಾಗೂ ಸರ್ಕಾರ ಅದನ್ನು ತನ್ನ ಕರ್ತವ್ಯ ಎಂದು ಭಾವಿಸಿಲ್ಲ ಎಂದು ಅವರು ವಿಷಾದಿಸಿದರು.
ಮಕ್ಕಳಿಗೆ ಉದ್ಯೋಗ ಬೇಕು ಎಂದು ನಮ್ಮ ನಾಯಕರು ಆಲೋಚನೆ ಮಾಡದಿರುವುದು ವಿಷಾದದ ಸಂಗತಿ. ಉದ್ಯೋಗ ಸೃಷ್ಟಿಸುವುದು ಸರ್ಕಾರ ಆದ್ಯ ಕರ್ತವ್ಯ ಆಗಿರುವಂತೆ ಅದನ್ನು ಪಡೆದುಕೊಳ್ಳುವಲ್ಲಿ ಹೋರಾಟ ಮಾಡುವ ಮನೋಭಾವ ಯುವಜನತೆಯಲ್ಲಿ ಕಾಣಿಸದಿರುವುದು ದುರಂತ. ವಿದೇಶದಲ್ಲಿನ ಉದ್ಯೋಗವನ್ನೇ ಅಪೇಕ್ಷಿಸದೆ ಈ ನೆಲಕ್ಕೆ ಸೇವೆ ಸಲ್ಲಿಸುವತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಬ್ರಿಟಿಷರ ಪದ್ಧತಿ ಜೀವಂತ: ಜೀವನಕ್ಕೆ ಇಂದಿನ ಶಿಕ್ಷಣ ಎಷ್ಟರ ಮಟ್ಟಿಗ ಅನುಕೂಲವಾಗಿದೆ ಎಂಬುದನ್ನು ಚಿಂತಿಸಬೇಕು. ಅಂದು ಬ್ರಿಟಿಷರು ಬಿಟ್ಟು ಹೋದ ಪದ್ಧತಿಯಲ್ಲಿಯೇ ಶಿಕ್ಷಣ ಕಲಿಸುವ ಕೆಲಸ ನಡೆದಿದೆ. ಇಂಗ್ಲಿಷ್‌ನಲ್ಲಿ ಕಲಿತರೆ ಮಾತ್ರ ವಿದ್ಯೆ, ಕನ್ನಡದಲ್ಲಿ ಕಲಿತರೆ ಶಿಕ್ಷಣವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಶಿಕ್ಷಣ, ಕೃಷಿ ಮತ್ತಿತರ ರಂಗದಲ್ಲಿ ಬ್ರಿಟಿಷರ ಪದ್ಧತಿಯನ್ನೇ ಇಂದಿಗೂ ಮುಂದುವರಿಸಿದ್ದೇವೆ. ದೇಶೀಯ ಕಲ್ಪನೆಯಲ್ಲಿ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಶಿಕ್ಷಣವನ್ನು ನೀಡುವ ವಿವಿಗಳನ್ನು ನಿರ್ಮಾಣ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅವರನ್ನು ಸನ್ಮಾನಿಸಲಾಯಿತು. ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಕಾರ್ಮಿಕ ಅಧಿಕಾರಿ ನಾಗರಾಜ್, ಪತ್ರಕರ್ತ ಸದಾಶಿವ ಡಿ. ಹುಲ್ಗೂರ್, ಚಲನಚಿತ್ರ ಸಂಗೀತ ನಿದೇರ್ಶಕ ಡಿ. ರಾಮಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜೆ. ಸುರೇಶ್‌ಗೌಡ ಪ್ರಾಸ್ತಾವಿಕ ಮಾತುಗಳಾಡಿದರು. ರಾಜ್ಯಾಧ್ಯಕ್ಷ ಎಚ್.ಎ. ಶರತ್‌ಗೌಡ ಸ್ವಾಗತಿಸಿದರು. ಈ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ತಂಡಗಳು ಭಾಗವಹಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement