ಎಂಬಿಎ ಪದವೀಧರ; ಕೃಷಿಯೇ ಜೀವನಾಧಾರ
ಕ.ಪ್ರ.ವಾರ್ತೆ , ಮೈಸೂರು , ಆ. 30
ಪ್ರಸ್ತುತ ಎಂಬಿಎ ಓದಿರುವವರಿಗೆ ಭಾರಿ ಡಿಮ್ಯಾಂಡ್. ಆದರೆ ಸುಮಾರು 20 ವರ್ಷಗಳ ಹಿಂದೆಯೇ ಎಂಬಿಎ ಪದವಿ ಪಡೆದು, ಮುಂಬೈನಲ್ಲಿ ತರಬೇತಿ ಪಡೆದು, ಉದ್ಯೋಗ ಗಿಟ್ಟಿಸಿದ್ದ ಯುವಕನೊಬ್ಬ ಅದನ್ನು ಬಿಟ್ಟು, ಜಮೀನು ಖರೀದಿಸಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿರುವ ಕಳಲವಾಡಿಯ ರೈತ ಆರ್. ರೋಹಿತ್ ಈ ಸಾಧಕ. ರೋಹಿತ್ ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರಾದರೂ ಹುಟ್ಟಿದ್ದು, ಬೆಳೆದಿದ್ದು, ಶಿಕ್ಷಣ ಪಡೆದಿದ್ದು, ಉದ್ಯೋಗ ಗಿಟ್ಟಿಸಿದ್ದು ಎಲ್ಲಾ ಮೈಸೂರಿನಲ್ಲೇ. ಎಂಬಿಎ ಮುಗಿದ ನಂತರ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಸಿಕ್ಕಿತು. ಮುಂಬೈನಲ್ಲಿ ತರಬೇತಿ ಪಡೆದ ನಂತರ ಮೈಸೂರಿಗೆ ನಿಯೋಜಿಸಲಾಯಿತು. ಆದರೆ ಆ ಕೆಲಸ ಬೋರ್ ಹೊಡೆಯಲು ಆರಂಭಿಸಿದ್ದರಿಂದ ರೋಹಿತ್ ಕೆಲಸಕ್ಕೆ ಗುಡ್ ಬೈ ಹೇಳಿದರು. ತಂದೆ ಎಸ್.ಸಿ. ರಾಮದೇವ್ ಹಾಗೂ ಅಣ್ಣ ರಘುನಂದನ್ ಅವರ ನೆರವಿನಿಂದ 1994ರಲ್ಲಿ ಕಳವಾಡಿಯ ಬಳಿ 20 ಎಕರೆ ಜಮೀನು ಖರೀದಿಸಿದರು.
ಆಗ ಆ ಜಮೀನಿನಲ್ಲಿ 500 ತೆಂಗಿನ ಮರಗಳಿದ್ದವು. ಅವುಗಳನ್ನು ನೋಡಿಯೇ ರೋಹಿತ್ ಖರೀದಿಸಿದ್ದರು. ಆದರೆ ನಂತರ ಆ ಭೂಮಿಯ ಬಂಡವಾಳ ಬಯಲಾಯಿತು. ತೋಟವನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಜತೆಗೆ ಚೌಳು ಮಣ್ಣು ಬೇರೆ. ಮಣ್ಣಿನ ರಸಸಾರವೂ ಕಡಿಮೆ ಇತ್ತು. ಆದರೆ ಸತತ ಪರಿಶ್ರಮದಿಂದ ಮಣ್ಣಿನ ಫಲವತ್ತತೆ ಹೆಚ್ಚುವಂತೆ ಮಾಡಿದರು. ಇದಕ್ಕೆ ಕುಟುಂಬದ ಎಲ್ಲಾ ಸದಸ್ಯರು ಬೆಂಬಲವಾಗಿ ನಿಂತರು. ಬಿ.ಕಾಂ ಓದಿರುವ ರೋಹಿತ್ ಅವರ ಪತ್ನಿ ರೇಖಾ ಅವರು ಕೂಡ ಜಮೀನಿನಲ್ಲಿ ಕೆಲಸಕ್ಕೆ ನಿಂತರು. ಪರಿಣಾಮ 19 ವರ್ಷಗಳಲ್ಲಿ ಜಮೀನು ಒಂದು ಹಂತಕ್ಕೆ ಬಂದು ನಿಂತಿದೆ.
ತುಂಬಾ ಸುಧಾರಣೆ: ಈಗ ಜಮೀನಿನಲ್ಲಿ 850 ತೆಂಗು, 3500 ಅಡಕೆ, 200 ಸಪೋಟ, 800 ಸಿಲ್ವರ್ ಮರಗಳಿವೆ. ಒಂದೂವರೆ ಎಕರೆಯಲ್ಲಿ ಹಿಪ್ಪುನೇರಳೆ, ಮುಕ್ಕಾಲು ಎಕರೆಯಲ್ಲಿ ವಿಳ್ಯೆದೆಲೆ, ನಾಲ್ಕೂವರೆ ಎಕರೆಯಲ್ಲಿ ಕಾಫಿ ಇದೆ. 150 ರಿಂದ 200 ಮರಗಳಿಗೆ ಕಾಳುಮೆಣಸು ಬಳ್ಳಿ ಹಬ್ಬಿಸಲಾಗಿದೆ. ಒಂದೂವರೆ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಈಗ ಅದನ್ನು ತೆಗೆದು, ಹಿಪ್ಪುನೇರಳೆ ಹಾಕುತ್ತಿದ್ದಾರೆ. ಇದಲ್ಲದೆ 1.15 ಎಕರೆ ಜಮೀನು ಗುತ್ತಿಗೆ ಪಡೆದು, ಅಲ್ಲಿಯೂ ಹಿಪ್ಪುನೇರಳೆ ಬೆಳೆದಿದ್ದಾರೆ. 1 ಜತೆ ಎತ್ತು, ಒಂದು ಹಸು ಇದೆ.
ಪಕ್ಕದಲ್ಲಿಯೇ ವರುಣಾ ನಾಲೆ ಇದೆ. ಆದರೆ ರೋಹಿತ್ ನೀರು ಹಾಯಿಸುವುದಿಲ್ಲ. ಬದಲಿಗೆ 6 ತಿಂಗಳು ನಾಲೆಯ ಸಿಪೇಜ್‌ನಿಂದಲೇ ನಿರ್ವಹಣೆ ಮಾಡುತ್ತಾರೆ. ಉಳಿದ 6 ತಿಂಗಳು ಜಮೀನಿನಲ್ಲಿರುವ 2 ತೆರೆದ ಬಾವಿಗಳಿಂದ ತುಂತುರು ನೀರಾವರಿ ಮೂಲಕ ನೀರುಣಿಸುತ್ತಾರೆ. 3 ಕೊಳವೆ ಬಾವಿಗಳಿದ್ದರೂ ಬಳಕೆ ಮಾಡುವುದು ಕಡಿಮೆ. ಏಕೆಂದರೆ ತೆರೆದ ಬಾವಿಯ ನೀರಿನಿಂದ ಬರುವ ಇಳುವರಿ ಕೊಳವೆ ಬಾವಿ ನೀರು ಕೊಟ್ಟಾಗ ಬರುವುದಿಲ್ಲ. ಜಮೀನಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡುತ್ತಾರೆ. ಅಲ್ಲದೇ ಬೆಳೆಗಳಿಗೆ ಅಗತ್ಯವಿರುವಷ್ಟು ರಾಸಾಯನಿಕ ಗೊಬ್ಬರ ಸಹ ನೀಡುತ್ತಾರೆ.
ಒಂದು ತೆಂಗಿನ ಮರ ವಾರ್ಷಿಕ 120 ಕಾಯಿಗಳನ್ನು ಬಿಡುತ್ತದೆ. ಮರಗಳಿಗೆ ಸರಿಯಾಗಿ ಗೊಬ್ಬರ, ನೀರು ನಿರ್ವಹಣೆ ಮಾಡಬೇಕಾಗುತ್ತದೆ. 1.50 ರಿಂದ 2 ಲಕ್ಷ ಖರ್ಚು ಬರುತ್ತದೆ. 6 ರಿಂದ 8 ಲಕ್ಷದವರೆಗೆ ಆದಾಯ ಬರುತ್ತದೆ. ತೆಂಗಿನಪುಡಿ ತಯಾರಿಸುವ ಕಾರ್ಖಾನೆಗಳವರು ನೇರ ಜಮೀನಿಗೆ ಬಂದು ಕಾಯಿಗಳನ್ನು ಖರೀದಿಸುತ್ತಾರೆ. ಇವರ ಜಮೀನಿನಲ್ಲಿ ಗುಣಮಟ್ಟ ಚೆನ್ನಾಗಿರುವುದರಿಂದ ಉತ್ತಮ ಬೆಲೆಯೂ ಸಿಗುತ್ತಿದೆ.
ಅಡಕೆಕಾಯಿಯನ್ನು ಇಷ್ಟು ವರ್ಷ ಜಮೀನಿನ ಬಳಿಯೇ 1.50 ರಿಂದ 2 ಲಕ್ಷಗಳಿಗೆ ಗುತ್ತಿಗೆ ನೀಡುತ್ತಿದ್ದರು. ಆದರೆ ಗುಟ್ಕಾ ನಿಷೇಧದ ನಡುವೆಯೂ ಈ ಬಾರಿ ಉತ್ತಮ ಬೆಲೆ ಸಿಗುವ ಸಾಧ್ಯತೆ ಕಂಡುಬಂದಿದೆ. ಶಿವಮೊಗ್ಗ ಮತ್ತಿತರ ಕಡೆ ಅಡಕೆಗೆ ರೋಗ ತಗಲಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಬಾರಿ ಇನ್ನೂ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದಾರೆ. ರೇಷ್ಮೆ ಸಾಕಾಣಿಕೆಯಂತೂ ರೋಹಿತ್ ಅವರಿಗೆ ಸರ್ಕಾರಿ ನೌಕರರಂತೆ ಮಾಸಿಕ ಸಂಬಳ ಪಡೆಯುವ ಬೆಳೆಯಾಗಿದೆ. ವರ್ಷಕ್ಕೆ 10 ಬೆಳೆ ಖಚಿತ. ಪ್ರತಿ ಬೆಳೆಗೆ 150 ರಿಂದ 170 ಕೆಜಿ ಇಳುವರಿ ಬರುತ್ತಿದೆ. 20,000 ವೆಚ್ಚ ತಗಲುತ್ತದೆ. ಖರ್ಚು ಕಳೆದು ಪ್ರತಿ ಬೆಳೆಗೆ 40,000 ಆದಾಯ ಸಿಗುತ್ತಿದೆ.ಅಂತರ ಬೆಳೆಯಾಗಿರುವುದರಿಂದ ಸಪೋಟ ಇಳುವರಿ ಕಡಿಮೆ. ಆದರೂ ವಾರ್ಷಿಕ 25,000 ಸಿಗುತ್ತಿದೆ. ವಿಳ್ಯೆದೆಲೆಯಿಂದ 30 ರಿಂದ 40,000 ಗಳಿಗೆ ಮೋಸ ಇಲ್ಲ. ಕಾಫಿಯಿಂದ 1.50 ರಿಂದ 2 ಲಕ್ಷ ಆದಾಯ ಬಂದರೂ ಖರ್ಚು 60 ರಿಂದ 70,000 ಹೋಗುತ್ತದೆ. ಕಾಳಮೆಣಸಿನಿಂದ 24,000 ಸಿಗುತ್ತಿದೆ.
ಹೀಗೆ ಸುಮಾರು 20 ವರ್ಷಗಳ ಶ್ರಮಕ್ಕೆ ರೋಹಿತ್ ಅವರಿಗೆ ಎಲ್ಲಾ ಬೆಳೆಗಳು ಕೈಹಿಡಿದಿದ್ದರೂ ಪ್ರತಿವರ್ಷ ಒಂದಲ್ಲ ಒಂದು ಹೊಸ ಯೋಜನೆ ಮಾಡುತ್ತಲೇ ಇರುತ್ತಾರೆ. ಈಗ ಕುರಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಬಂದ ಆದಾಯದಲ್ಲಿ ಹೊಸ ಹೊಸ ಯೋಜನೆಗಳು ಕಾರ್ಯಗತವಾಗುತ್ತಿದ್ದರೂ ವಾರ್ಷಿಕ 3 ರಿಂದ 4 ಲಕ್ಷ ನಿವ್ವಳ ಲಾಭಕ್ಕಂತೂ ಮೋಸ ಇಲ್ಲ ಎನ್ನುತ್ತಾರ ರೋಹಿತ್. ನನಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಂಪರ್ಕ ಕಡಿಮೆ. ಅವರು ಬರುವುದು ಕಡಿಮೆ, ನಾನು ಹೋಗುವುದು ಕಡಿಮೆ. ಆದರೆ ರೇಷ್ಮೆ ಇಲಾಖೆಯವರು ರೇಷ್ಮೆ ಹುಳು ಸಾಕಾಣಿಕೆಯ ಮನೆ ನಿರ್ಮಾಣಕ್ಕೆ ಸಹಾಯಧನ, ಬೆಂಬಲ ಬೆಲೆ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ ಎಂದು ಅವರು ಸ್ಮರಿಸುತ್ತಾರೆ.
ಜಮೀನಿನಿಂದ ಸಿಟಿಗೆ ಬರುವುದು ಕೃಷಿ ಎನಿಸಿಕೊಳ್ಳುವುದಿಲ್ಲ. ರೈತ ಜಮೀನಿನಲ್ಲಿಯೇ ಉಳಿಯಬೇಕು. ಇದರಿಂದ ನೀರು, ಕೂಲಿಯಾಳುಗಳು, ಕೃಷಿ ಪರಿಕರಗಳು ಮತ್ತು ಬೆಳೆಯ ನಿರ್ವಹಣೆ ಸುಲಭ. ಇತರರ ಮಾತು ಕೇಳುವುದಕ್ಕಿಂತ ತನ್ನ ಅನುಭವದ ಆಧಾರದ ಮೇಲೆಯೇ ತೀರ್ಮಾನ ಕೈಗೊಳ್ಳಬೇಕು. ಈ ರೀತಿ ಮಾಡಿದಲ್ಲಿ ಕೃಷಿಯಿಂದ ನಷ್ಟವಾಗುವುದಿಲ್ಲ. ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡಲ್ಲಿ ಆದಾಯ ಬರುವುದು ಶೇ.100 ರಷ್ಟು ಖಚಿತ.
ರೋಹಿತ್, ಕಳಲವಾಡಿ
-ಅಂಶಿ ಪ್ರಸನ್ನಕುಮಾರ್