ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜು ಆರಂಭ
ಕ.ಪ್ರ.ವಾರ್ತೆ , ಹುಣಸೂರು , ಆ. 30
ತಾಲೂಕಿನ ಕಟ್ಟೆಮಳಲವಾಡಿ ಡಿ.ದೇವರಾಜು ಅರಸು ತಂಬಾಕು ಹರಾಜು ಮಾರುಕಟ್ಟೆಯ ಪ್ಲಾಟ್ ಫಾಮ್ 2 ಮತ್ತು 6, 4ರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗೈರುಹಾಜರಿಯಾದ ಕಾರಣ ಆಕ್ರೋಶಗೊಂಡ ರೈತರು, ಕೆಲವು ಗಂಟೆಗಳ ಕಾಲ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸಿದರೆ, 3ನೇ ಫ್ಲಾಟ್ಫಾಮ್ನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಶುಕ್ರವಾರ ಪ್ರಾರಂಭವಾಯಿತು.
ಕಟ್ಟೆಮಳಲವಾಡಿಯ ದೇವರಾಜು ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮೂರು ಪ್ಲಾಟ್ಫಾಮ್ಗಳಿದ್ದು, ಈ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಐಟಿಸಿ, ಅಲಿಯಾನ್ಸ್, ಬೊಮ್ಮೆದಾಲಾ, ಜಿಪಿಎಫ್ ಮತ್ತು ಪಿಎಸ್ಎಸ್ ಕಂಪನಿಗಳೂ ಇ-ಎಲೆಕ್ಟ್ರಾನಿಕ್ಸ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಹರಾಜು ಅಧೀಕ್ಷಕರು ತಂಬಾಕಿನ ಬೆಲೆಯನ್ನು 140 ರಿಂದ ಗರಿಷ್ಠ ಬೆಲೆ 150ರ ತನಕ ನಿಗದಿಯಾಗಿತು. ಆದರೆ ಹರಾಜಿನಲ್ಲಿ 150 ಬೆಲೆ ನೀಡಿದರೂ ರೈತನ ಮುಖದಲ್ಲಿ ನಗೆ ಕಾಣಲಿಲ್ಲ. ಏಕೆಂದರೆ ಆಂಧ್ರಪ್ರದೇಶದಲ್ಲಿ ಕೆಜಿಯ ಬೆಲೆ 203 ಗಳಿದ್ದರೆ, ಕರ್ನಾಟಕದಲ್ಲಿ ಕನಿಷ್ಠ ಬೆಲೆಯೂ ಇಲ್ಲ ಎಂಬ ನೋವು ಕಾಣಿಸಿತು. ಈ ತಾರತಮ್ಯದ ಬಗ್ಗೆ ರೈತರಲ್ಲಿ ಚರ್ಚೆ ಆರಂಭವಾಯಿತು.
ತಂಬಾಕು ಖರೀದಿಯನ್ನು ಪ್ರಾರಂಭ ಮಾಡಿದ್ದು, ಕಟ್ಟೆಮಳಲವಾಡಿ ತಂಬಾಕು ಹರಾಜು ಕೇಂದ್ರದಲ್ಲಿ ಮೂರು ಫ್ಲಾಟ್ಫಾಮ್ಗಳ ಪೈಕಿ 5 ಸಾವಿರ ರೈತರಿದ್ದು, ಸಮಸ್ಯೆಗಳನ್ನು ಮನಬಿಚ್ಚಿ ಹೇಳಿಕೊಳ್ಳಲು ಸಂಬಂಧಿಸಿದ ಶಾಸಕರು, ಸಂಸದರು ಸೇರಿದಂತೆ ಯಾವುದೆ ಜನಪ್ರತಿನಿಧಿಗಳು ಬಂದಿಲ್ಲ. ತಂಬಾಕು ಅಧಿಕಾರಿಗಳು ಕಾಣಿಸಿಕೊಳ್ಳದಿರುವುದನ್ನು ಗಮನಿಸಿದರೆ, ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಹಾಗೂ ನಿಗದಿತ ಬೆಲೆ ಮತ್ತು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.