ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಂಬಾಕಿಗೆ ಉತ್ತಮ ಬೆಲೆ ದೊರಕಿಸಿಕೊಡಿ: ಶಾಸಕ ವೆಂಕಟೇಶ್ ಆಗ್ರಹ

Vishwanath S
Updated On : 31 Aug 2013, 12:13 pm

ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಆ. 30
ತಂಬಾಕು ಬೆಳೆದ ರೈತರು ಈ ಬಾರಿ ಅತಿ ಮಳೆಯಿಂದಾಗಿ ಕಷ್ಟಕರ ಸನ್ನಿವೇಶದಲ್ಲಿಯೂ ತಂಬಾಕನ್ನು ಬೆಳೆದಿದ್ದು, ಅವರಿಗೆ ಉತ್ತಮ ಬೆಲೆ ದೊರಕಿಸಿಕೊಡುವತ್ತ ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ಖರೀದಿದಾರ ಕಂಪನಿಗಳು ಮುಂದಾಗಬೇಕೆಂದು ಶಾಸಕ ಕೆ. ವೆಂಕಟೇಶ್ ಆಗ್ರಹಿಸಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2013-14ನೇ ಸಾಲಿನ ತಂಬಾಕು ಹರಾಜಿನ ಇ-ಹರಾಜು ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ವರ್ಷ ಬರಗಾಲದ ನಡುವೆಯೂ ತಂಬಾಕು ಬೆಳೆಗೆ ಸರಾಸರಿ 110 ರಿಂದ 115 ದೊರಕಿದ್ದು, ಈ ಬಾರಿ ಪ್ರತಿ ಕೆಜಿ ತಂಬಾಕಿಗೆ ಕನಿಷ್ಠ 160 ರಿಂದ 170 ದೊರಕಬೇಕಿದೆ. ಪ್ರತಿ ವರ್ಷ ತಂಬಾಕು ಬೆಳೆ ಉತ್ಪಾದನಾ ವೆಚ್ಚ ಏರುತ್ತಿದೆ. ರಾಜ್ಯದ 40 ಸಾವಿರಕ್ಕೂ ಅಧಿಕ ರೈತರು ತಂಬಾಕು ಬೆಳೆಯನ್ನೇ ನೆಚ್ಚಿಕೊಂಡಿದ್ದು, ವರ್ಷ ಪೂರ್ತಿ ತಂಬಾಕು ಉತ್ಪಾದನೆಯಲ್ಲಿ ತೊಡಗುತ್ತಾರೆ. ತಂಬಾಕು ಬೆಳೆಗಾರರ ವೆಚ್ಚಕ್ಕೆ ಹಾಗೂ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವಂತಾಗಬೇಕು ಎಂದು ತಿಳಿಸಿದರು.
ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ವೈ. ವೇಣುಗೋಪಾಲ್ ಮಾತನಾಡಿದರು. ಶುಕ್ರವಾರದ ಹರಾಜು ಪ್ರಕ್ರಿಯೆಯಲ್ಲಿ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ 4, 5, 6ನೇ ಫ್ಲಾಟ್‌ಫಾರ್ಮ್‌ಗಳಿಗೆ ಕ್ರಮವಾಗಿ 18, 45, 45 ತಂಬಾಕು ಬೇಲುಗಳು ಬಂದು ಹರಾಜಾಗಿದ್ದು, ಪ್ರತಿ ಕೆಜೆ ತಂಬಾಕಿಗೆ ಗರಿಷ್ಠ 150.20 ಹಾಗೂ ಕನಿಷ್ಠ 130 ದೊರಕಿದೆ. ಎಪಿಎಂಸಿ ಅಧ್ಯಕ್ಷ ಕೆ.ಎಂ. ಹೊಲದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ಶಿವರುದ್ರಯ್ಯ, ಪಾಟೀಲ್, ತಾಜುದ್ದೀನ್ ಇದ್ದರು.
ಕಂಪಲಾಪುರ ಮಾರುಕಟ್ಟೆ: ತಾಲೂಕಿನ ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಇ- ಹರಾಜು ಪ್ರಕ್ರಿಯೆಗೆ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ನರಸಿಂಹಯ್ಯ ಚಾಲನೆ ನೀಡಿದರು.
ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆಯ ಫ್ಲಾಟ್‌ಫಾರ್ಮ್ 61 ಹಾಗೂ 62 ರಲ್ಲಿ ತಲಾ 18 ತಂಬಾಕು ಬೇಲುಗಳು ಬಂದು ಹರಾಜಾಗಿದ್ದು, ಕನಿಷ್ಠ 149 ಹಾಗೂ ಗರಿಷ್ಠ 150.20 ಕ್ಕೆ ಮಾರಾಟವಾದವು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ತಂಬಾಕು ಮಂಡಳಿಯ ಹರಾಜು ಅಧೀಕ್ಷಕ ವಿ.ಕೆ. ಪುರುಷೋತ್ತಮ ರಾಜೇಅರಸ್, ಬಿ. ಮಂಜುರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement