ದಾಂದಲೆ: ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರ ಬಂಧನ
ಕ.ಪ್ರ.ವಾರ್ತೆ , ಹುಣಸೂರು , ಆ. 30
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಯಶೋಧಪುರದ ಎಂ. ಕೃಷ್ಣಯ್ಯ ಮತ್ತು ಕುಟುಂಬದವರು ಬುಧವಾರ ಮಧ್ಯರಾತ್ರಿ ಕಲ್‌ಬೆಟ್ಟದ ಕಾಲೋನಿಯ ಮಹಿಳೆಯರಿಬ್ಬರಿಗೆ ಸೇರಿದ ಮನೆ ಮತ್ತು ಜಮೀನಿನಲ್ಲಿ ದಾಂದಲೆ ನಡೆಸಿದ್ದರಿಂದ ಪೊಲೀಸರ ಅತಿಥಿಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.
ತಾಲೂಕಿನ ಕಲ್‌ಬೆಟ್ಟ ಕಾಲೋನಿಯ ನಿವಾಸಿ ಗೌರಮ್ಮ ಮನೆ ಮತ್ತು ಜಮೀನಿನ ತಂತಿಬೇಲಿಯ ಕಲ್ಲುಕಂಬ ಹಾಗೂ ಪ.ಜಾತಿಗೆ ಸೇರಿದ ಸಣ್ಣನಂಜಮ್ಮ ಅವರಿಗೆ ಸೇರಿದ ಜಮೀನಿನಲ್ಲಿಯೇ ಈತ ದಾಂದಲೆ ನಡೆಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತಮ್ಮಡಹಳ್ಳಿ ಸ.ನಂ. 174/1ರ ಜಮೀನು ತಮಗೆ ಸೇರಿದೆ ಎಂದು ಕಳೆದ ಹತ್ತಾರು ವರ್ಷಗಳಿಂದ ಕಾಲು ಕೆರೆದು ಜಗಳ ಮಾಡುವುದು, ಜಾತಿ ನಿಂದನೆ ದೂರು ದಾಖಲಿಸುವುದು ಮತ್ತು ಜಮೀನಿನ ಫಸಲು ನಾಶಗೊಳಿಸುವುದು ಮತ್ತು ದಲಿತರು, ಇತರರ ಆಸ್ತಿಯನ್ನು ಆಕ್ರಮಿಸಲು ಯತ್ನಿಸಿ, ಆಗಾಗ್ಗೆ ಜಾತಿನಿಂದನೆ ಪ್ರಕರಣ ಹಾಕುವ ಮೂಲಕ ಬೆದರಿಕೆ ಒಡ್ಡುತ್ತಿದ್ದ ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು.
ದೂರು ನೀಡಿದ್ದರು: ಆ.28ರ ಬುಧವಾರ ಮಧ್ಯರಾತ್ರಿ ತಮ್ಮ ಮನೆ ಮೇಲೆ ದಾಂದಲೆ ನಡೆಸಿ, ಮನೆಯ ಚೀಲಕ ಹಾಕಿಕೊಂಡು ಹೊರಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿ, ಎರಡು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕಲ್ಲುಕಂಬಗಳನ್ನು ನಾಶಗೊಳಿಸಿದ್ದಾರೆ ಎಂದು ಗೌರಮ್ಮ ಮತ್ತು ಸಣ್ಣನಂಜಮ್ಮ, ಲೀಲಾ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಶುಕ್ರವಾರ ಬೆಳಗಿನಜಾವ ಡಿವೈಎಸ್ಪಿ ಮುದ್ದುಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ಯಶೋಧಪುರ ಗ್ರಾಮದ ನಿವಾಸಿ ಕರ್ನಾಟಕ ರಾಜ್ಯಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಯಶೋಧಪುರ ಎಂ. ಕೃಷ್ಣಯ್ಯ ಮತ್ತು ನಾಗಯ್ಯ ಅವರನ್ನು ಬಂಧಿಸಲಾಗಿದೆ. ಒಟ್ಟು ಏಳು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪೈಕಿ ಇಬ್ಬರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ 5 ಮಂದಿ ತಲೆ ಮರೆಸಿಕೊಂಡಿದ್ದು, ಇವರನ್ನು ಶೀಘ್ರವೆ ಬಂಧಿಸಲಾಗುವುದು ಎಂದು ಸಬ್ ಇನ್‌ಸ್ಪೆಕ್ಟರ್ ಆರುಣ್ ತಿಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಮುದ್ದುಮಹದೇವಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಗಜೇಂದ್ರಪ್ರಸಾದ್ ಮತ್ತು ಎಸ್‌ಐ ಅರುಣ್ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ್ದರು.