ದುರ್ಬಲರಿಗೆ ಉಚಿತ ಕಾನೂನು ನೆರವು
ಕ.ಪ್ರ.ವಾರ್ತೆ , ರಾವಂದೂರು , ಆ. 30
ಸಮಾಜದಲ್ಲಿ ದುರ್ಬಲರಿಗೆ, ದೌರ್ಜನ್ಯಕ್ಕೆ ಒಳಗಾದ ದಲಿತರು, ಹಿಂದುಳಿದ ವರ್ಗಗಳ ಉಚಿತ ಕಾನೂನು ನೆರವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದು ಸರ್ಕಾರಿ ಅಭಿಯೋಜಕ ಯೋಗೇಶ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ರಾವಂದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾನೂನು ತಿಳಿಯದೆ ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕ ಎಂದು ತಿಳಿಸಿದರು.
ತಪ್ಪು ಮಾಡಿರುವವರನ್ನು ಕಾನೂನಿಗೆ ಒಪ್ಪಿಸಿ, ತಕ್ಕ ಶಿಕ್ಷೆ ಕೊಡಲಾಗುವುದು. ವಿಶೇಷವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾದುದು ಎಲ್ಲರ ಕರ್ತವ್ಯ. ಹಳ್ಳಿಗಳಲ್ಲಿ ಯಾವುದೆ ಸಮಸ್ಯೆಗಳಿದ್ದರೂ ಕಾನೂನು ಸೇವಾ ನೆರವು ಪಡೆಯಬಹುದು ಎಂದು ಹೇಳಿದರು.
ವಕೀಲ ಜೆ.ಎಸ್. ನಾಗರಾಜು ಮಾತನಾಡಿ, ಕುಟುಂಬದಲ್ಲಿ ಮಹಿಳೆಯರೊಂದಿಗೆ ಪ್ರಾಣಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.
ಅಂತಹವರು ಕಷ್ಟ ಅನುಭವಿಸುವುದು ಬೇಡ. ನೀವು ತಕ್ಷಣ ನಮಗೆ ದೂರು ನೀಡಿದರೆ ಕೇವಲ 60 ದಿನಗಳೊಳಗಾಗಿ ಮಹಿಳೆಯರಿಗೆ ಪರಿಹಾರವಾಗಿ ಮಾಸಿಕ ಜೀವನ ಭತ್ಯೆ, ಗಂಡನ ಆಸ್ತಿಯಲ್ಲಿ ಪಾಲು, ಕೊಡಿಸಲಾಗುವುದು. ಕೇವಲ ಶೇ.15 ಮೊಕದ್ದಮೆಗಳು ಮಾತ್ರ ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ದೂರು ನೀಡಿ ಎಂದು ತಿಳಿಸಿದರು.
ಸಿಡಿಪಿಒ ದೇವಕುಮಾರ್, ವಕೀಲರಾದ ಚಿಕ್ಕಣ್ಣ, ಬಿ.ಎಂ. ಕುಮಾರ್, ಹೆಮ್ಮಿಗೆ ಶ್ರೀನಿವಾಸ್ ಮಾತನಾಡಿದರು. ಡಾ.ಪುನಿತ್, ಮಂಜುನಾಥ್, ರಾಜಶೇಖರ್ ಸೇರಿದಂತೆ ನೂರಾರು ಮಹಿಳೆಯರು ಹಾಜರಿದ್ದು, ತಮಗೆ ಇರುವ ಕಾನೂನು ಸಮಸ್ಯೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.