ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿರ್ಮಾಣ ಹಂತದ ಕಟ್ಟಡ ಕುಸಿದು ಹಲವರಿಗೆ ಗಾಯ

Vishwanath S
Updated On : 31 Aug 2013, 12:10 pm

ಕ.ಪ್ರ.ವಾರ್ತೆ , ಮೈಸೂರು , ಆ. 30
ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಒಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕುವೆಂಪುನಗರದಲ್ಲಿ ಶುಕ್ರವಾರ ಸಂಭವಿಸಿದೆ.
ಮಂಡ್ಯದ ಅಶ್ವಥ ನಗರ ನಿವಾಸಿ ಎನ್.ಮಂಜುನಾಥ್ ಎಂಬವರಿಗೆ ಸೇರಿದ ಮೈಸೂರಿನ ಕುವೆಂಪುನಗರ ಎಂ ಬ್ಲಾಕ್‌ನ 3ನೇ ತಿರುವಿನಲ್ಲಿರುವ ನಂ.506/ಎ ಮನೆಯ 2ನೇ ಮಹಡಿಯ ನಿರ್ಮಾಣದ ವೇಳೆ ಶುಕ್ರವಾರ ಮಧ್ಯಾಹ್ನ 1.05ರ ಸುಮಾರಿಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಕಟ್ಟಡದ ಸಮೀಪ ಮತ್ತು ಮೊದಲ ಮಹಡಿಯಲ್ಲಿ ಯಾರೂ ಇರಲಿಲ್ಲ. ನೆರ ಮನೆಗಳಿಗೂ ಯಾವುದೇ ತೊಂದರೆಯಾಗದೆ ರಸ್ತೆ ಕಡೆಗೆ ಕಟ್ಟಡದ ಅವಶೇಷಗಳು ಬಿದ್ದಿವೆ. ಕಟ್ಟಡದ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದವರು ಜಾರಿ ಕೆಳಗೆ ಬಿದ್ದಿದ್ದಾರೆ.
ಮೈಸೂರು ಮತ್ತು ಎಚ್.ಡಿ. ಕೋಟೆ ಸುತ್ತಮುತ್ತಲ ಹಾರೋಹಳ್ಳಿ, ಜಯಪುರ ಮುಂತಾದ ಗ್ರಾಮಗಳಿಂದ ಕೂಲಿ ಕೆಲಸಕ್ಕೆ ಬಂದಿದ್ದವರು ಗಾಯಗೊಂಡು ನಗರದ ಬಾನವಿ ಮತ್ತು ಅರವಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನ್.ಮಹೇಶ್, ಎಂ. ಮಹೇಶ್ ರಾಜೇಶ್, ರಾಜಣ್ಣ, ಶಿವರಾಜು, ಬಸಪ್ಪ ಎಂಬವರು ಬಾನವಿ ಆಸ್ಪತ್ರೆಯಲ್ಲೂ, ಮಹೇಶ್, ಕುಮಾರ್ ಮತ್ತು ಶಿವಕುಮಾರ್ ಅರವಿಂದ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ 20 ರಿಂದ 35 ವರ್ಷ ವಯಸ್ಸಿನವರು.
ಕಟ್ಟಡ ಮಾಲೀಕನ ವಿಚಾರಣೆ: ಗಾಯಗೊಂಡವರ ಪೈಕಿ ಶಿವರಾಜ್‌ಗೆ ಬಲಗೈ ಮುರಿದಿದೆ. ಕಟ್ಟಡದ ತುದಿಯಲ್ಲಿದ್ದ ಇವರನ್ನು ಎದುರು ಮನೆಯ ರೂಪಾ ಎಂಬವರು ಕುಸಿದ ಕಟ್ಟಡದ ಪಕ್ಕದ ಮನೆಯ ಮೆಟ್ಟಿಲ ಮೂಲಕ ಹೋಗಿ ರಕ್ಷಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಟ್ಟಡದ ಮಾಲೀಕ ಎನ್. ಮಂಜುನಾಥ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವಣ್ಣ ನೇತೃತ್ವದಲ್ಲಿ ಸ್ಥಳೀಯರ ನೆರವಿನೊಂದಿಗೆ ಕುಸಿದ ಕಟ್ಟಡ ತೆರವುಗೊಳಿಸಿದರು. ಮಧ್ಯಾಹ್ನ 2.30ರ ವೇಳೆವರೆಗೂ ಕಟ್ಟಡದ ಒಳಗೆ ಯಾರಾದರೂ ಸಿಲುಕಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಎಲ್ಲರೂ ಕಟ್ಟಡದಿಂದ ಹೊರಗಿದ್ದರು ಎಂದು ಗಾಯಾಳುಗಳು ಖಚಿತಪಡಿಸಿದ್ದಾರೆ. ಕಟ್ಟಡ ಕುಸಿದು ಬೀಳುವ ಮುನ್ನ ಅಡುಗೆ ಕಂಟ್ರ್ಯಾಕ್ಟರ್ ರಾಘವ ಅವರು ಅಡುಗೆ ಸಹಾಯಕರನ್ನು ಕರೆತಂದು ಕೆಲಸಗಾರರಿಗೆ ಊಟವನ್ನಿಟ್ಟು ಹೋಗಿದ್ದರು. ಉಳಿದಂತೆ ಎಂಜಿನಿಯರ್ ಮಂಜುನಾಥ್ ಈ ಸಂದರ್ಭದಲ್ಲಿ ಇದ್ದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕುಸಿತಕ್ಕೆ ಕಾರಣವೇನು?: ಎಂಡಿಎಯಿಂದ ಹರಾಜಿನಲ್ಲಿ 15್ಢ30 ಅಡಿ ಅಳತೆಯ ಈ ನಿವೇಶನವನ್ನು ಎನ್. ಮಂಜುನಾಥ್ ಖರೀದಿಸಿದ್ದರು. ಕಟ್ಟಡದ ನೆಲ ಅಂತಸ್ತು ಮತ್ತು ಮೊದಲ ಮಹಡಿ ನಿರ್ಮಿಸಲು ಮಾತ್ರ ಅವರು ಅನುಮತಿ ಪಡೆದಿದ್ದರು. ಅದರ ಮೇಲೆ ನೀರಿನ ಟ್ಯಾಂಕ್ ನಿರ್ಮಿಸುತ್ತಿದ್ದಾಗಿ ಪಾಲಿಕೆ ಅಭಿವೃದ್ಧಿ ಅಧಿಕಾರಿ ಗೋವಿಂದಪ್ಪ ಹೇಳಿದ್ದಾರೆ.
ಆದರೆ ಸಾರ್ವಜನಿಕರು ಎರಡನೆ ಮಹಡಿಯ ತಾರಸಿ ಕೆಲಸ ನಡೆಯುವ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿತ್ತು. ಗೋಡೆಗಳಿಗೆ ಸರಿಯಾಗಿ ನೀರನ್ನೂ ಹಾಕುತ್ತಿರಲಿಲ್ಲ. ಅಲ್ಲದೆ ಕಟ್ಟಡಕ್ಕೆ ಎಲ್ಲಿಯೂ ಕಂಬ ಅಳವಡಿಸಿರಲಿಲ್ಲ. ಛಾವಣಿಗೆ ಕೆಳ ಮಹಡಿಯ ಗೋಡೆಗಳು ಆಸರೆಯಾಗಿ ಇರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಟ್ಟಡ ಕುಸಿದಾಗ ಕೂಲಿ ಕಾರ್ಮಿಕರ ರಕ್ಷಣೆ ಮಾಡುವುದನ್ನು ಬಿಟ್ಟು ಎಂಜಿನಿಯರ್ ಮಂಜುನಾಥ್ ಕಟ್ಟಡ ಕುಸಿದ ಬಗ್ಗೆಯೇ ಹೇಳಿಕೊಂಡು ಚೀರಾಡುತ್ತಿದ್ದರು ಎಂದು ಸಾರ್ವಜನಿಕರು ದೂರಿದ್ದಾರೆ.
ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯರಾದ ಸ್ನೇಕ್‌ಶ್ಯಾಂ, ಮಂಜುಳಾ ಮಾನಸ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಎಸಿ ಬಸವರಾಜು, ತಹಸೀಲ್ದಾರ್ ನವೀನ್‌ಜೋಸೆಫ್, ಪಾಲಿಕೆ ಎಸಿ ಶೈಲಜಾ ಇದ್ದರು. ಈ ಸಂಬಂಧ ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಊಟಕ್ಕೆ ಇಳಿವ ವೇಳೆಗೆ ಕಟ್ಟಡವೇ ಕುಸಿಯಿತು...
ಮೈಸೂರು: ಎರಡನೆ ಮಹಡಿಯ ಕಾಂಕ್ರೀಟ್ ಕೆಲಸ ಮಾಡುವಾಗ ಕಟ್ಟಡ ಕುಸಿದಿದೆ ಎಂದು ಕೂಲಿ ಕಾರ್ಮಿಕ ಬಸಪ್ಪ ತಿಳಿಸಿದ್ದಾರೆ. ಹಂಪಾಪುರ, ಜಯಪುರ ಮುಂತಾದ ಗ್ರಾಮಗಳಿಂದ ಸುಮಾರು 20ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಇಂದು ತಾರಸಿ ಕೆಲಸಕ್ಕಾಗಿ ಕುವೆಂಪುನಗರಕ್ಕೆ ಬಂದಿದ್ದೆವು. ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಕಾಂಕ್ರೀಟ್ ಹಾಕಿದ ಬಳಿಕ ಊಟಕ್ಕಾಗಿ ಸ್ವಲ್ಪದರಲ್ಲೆ ಕೆಳಗಿಳಿಯಬೇಕು ಎನ್ನುವಾಗ 1.05ರ ಸುಮಾರಿನಲ್ಲಿ ಕಟ್ಟಡವೇ ಕುಸಿದು ಬಿತ್ತು ಎಂದು ಬಸಪ್ಪ ತಿಳಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಹೇಳುವಂತೆ ಕಟ್ಟಡದ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಿಸುತ್ತಿರಲಿಲ್ಲ. ಬದಲಿಗೆ ಅನುಮತಿ ಪಡೆಯದೆ ಎರಡನೆ ಮಹಡಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂಬುದು ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರ ಹೇಳಿಕೆಯಿಂದ ತಿಳಿದುಬಂದಿದೆ. ಆದರೆ ಪಾಲಿಕೆ ಅಧಿಕಾರಿಗಳು ಕಟ್ಟಡ ನಿರ್ಮಾಣದ ಗುಣಮಟ್ಟ ಪರಿಶೀಲಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದರ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement