ನೀರು ಪೂರೈಸುವಲ್ಲಿ ಜಸ್ಕೋ ವಿಫಲ
ಕ.ಪ್ರ.ವಾರ್ತೆ , ಮೈಸೂರು , ಆ. 30
ನಗರದಲ್ಲಿ 24್ಗ7 ನೀರಿನ ವ್ಯವಸ್ಥೆ ಸರಿಪಡಿಸುವಲ್ಲಿ ಜಸ್ಕೋ ಕಂಪನಿಯು ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಗುತ್ತಿಗೆಯನ್ನು ರದ್ದು ಮಾಡುವಂತೆ ಪ್ರಜ್ಞಾವಂತ ಹಾಗೂ ಕಳಕಳಿಯುಳ್ಳ ನಾಗರಿಕರ ವೇದಿಕೆ ಸಂಚಾಲಕ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಶುಕ್ರವಾರ ನಗರಕ್ಕೆ ಆಗಮಿಸಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೀವ್ ಚಾವ್ಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಲಕ್ಷ್ಮಣ್, ಜಸ್ಕೋ ಸಂಸ್ಥೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಡಿಪಿಆರ್ನಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಅಲ್ಲದೇ ಕಂಪನಿಯು ಗ್ರಾಹಕರ ದೂರುಗಳನ್ನು ನಿವಾರಿಸುವಲ್ಲಿ, ತೆರಿಗೆ ವಸೂಲಾತಿಯಲ್ಲಿ, ನೀರಿನ ಸರಬರಾಜು, ನೀರಿನ ಸೋರಿಕೆಯಲ್ಲಿ ಮತ್ತು ರಿಪೇರಿ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರು ಪಟ್ಟಿ ಸಲ್ಲಿಸಿದರು.
2009ರ ಜುಲೈನಿಂದ ಇಲ್ಲಿಯವರೆಗೆ ಒಂದೂ ಟಾರ್ಗೆಟ್ ಪೂರೈಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತ ನಿರಂತರ ಎಚ್ಚರಿಕೆ ನೀಡಿದ್ದರೂ ಕೇಂದ್ರ ಸರ್ಕಾರ ಮಾತ್ರ ಆಲಿಸಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಜಸ್ಕೋ ಕಂಪನಿಯ ಸಾಧನೆಯನ್ನು ಪರಿಗಣಿಸಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ ಅವರು, ನೀರು ನಿರ್ವಹಣೆಗಾಗಿ ಖರ್ಚು ಮಾಡಿರುವ ಸುಮಾರು 75 ಕೋಟಿ ಹಣದಲ್ಲಿ ಕೇವಲ 30 ಕೋಟಿಯಷ್ಟು ಮಾತ್ರ ಜನರಿಗೆ ಉಪಯೋಗವಾಗಿದೆ. ಉಳಿದ ಹಣ ಲೂಟಿಯಾಗಿದೆ ಎಂದು ಅವರು ತಿಳಿಸಿದರು.
ಜಸ್ಕೋಗೆ ಒಂದು ತಿಂಗಳ ಗಡುವು: ಇದೇ ವೇಳೆ ಎಸಿಐಸಿಎಂ ಮನವಿ ಸ್ವೀಕರಿಸಿ ಮಾತನಾಡಿದ ರಾಜೀವ್ ಚಾವ್ಲಾ, ಜಸ್ಕೋ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಜಸ್ಕೋಗೆ ಇನ್ನು ಒಂದು ತಿಂಗಳ ಕಾಲ ಗಡುವು ನೀಡುತ್ತೇವೆ. ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಕಿಕ್ಔಟ್ ಮಾಡುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ನಗರದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ಜತೆ ಚರ್ಚೆ ನಡೆಸಿದ ಚಾವ್ಲಾ ಅವರು, ನೀರು ಸರಬರಾಜು ಸಮಸ್ಯೆ ಮಾಹಿತಿ ಪಡೆದುಕೊಂಡರು. ನೀರು ಕಂದಾಯ ಕಟ್ಟದೆ ಉಳಿಸಿಕೊಂಡಿರುವ ಗ್ರಾಹಕರ ಸಂಪರ್ಕವನ್ನು ಬಂದ್ ಮಾಡುವಂತೆಯೂ ಕಟ್ಟಾಜ್ಞೆ ಹೊರಡಿಸಿದರು. ಶಾಸಕರಾದ ವಾಸು, ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ಗೋ. ಮಧುಸೂದನ್, ಆರ್. ಧರ್ಮಸೇನ, ಜಿಲ್ಲಾಧಿಕಾರಿ ಸಿ.ಶಿಖಾ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.
ಶಾಸಕ ವಾಸು ಅಸಮಾಧಾನ: ಜಸ್ಕೋ ಕಾರ್ಯವೈಖರಿಯ ಬಗ್ಗೆ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಕೂಡ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಸಲು ಜಸ್ಕೋ ವಿಫಲವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದಲ್ಲಿ ನಮ್ಮದೇ (ಕಾಂಗ್ರೆಸ್) ಸರ್ಕಾರ ಇದೆ. ನಮ್ಮ ಜಿಲ್ಲೆಯವರೇ (ಸಿದ್ದರಾಮಯ್ಯ) ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಿರುವಾಗ ಜನ ನಮ್ಮಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಅದಕ್ಕೆ ಚ್ಯುತಿಯಾಗದಂತೆ ನಾವು ನಡೆದುಕೊಳ್ಳಬೇಕಿದೆ ಎಂದರು.