ಫಲಿತಾಂಶ ಪ್ರಕಟಣೆಗೆ ಮುಂದುವರಿದ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಆ. 30
ಯುವರಾಜ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಹಾಜರಾತಿ ಕೊರತೆ ಕಾರಣ ನೀಡಿ ತಡೆಹಿಡಿದಿರುವ 72 ಮಂದಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕೂಡಲೆ ಪ್ರಕಟಿಸಬೇಕು ಮತ್ತು ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶುಕ್ರವಾರ ಕನ್ನಡ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಆಡಳಿತ ಮಂಡಳಿಯಿಂದ ಕೆಲವು ತಪ್ಪು ನಿರ್ಧಾರವಾಗಿದೆ. ಈ ಸಮಸ್ಯೆ ಸರಿಪಡಿಸಿ ಫಲಿತಾಂಶ ಪ್ರಕಟಿಸುವುದಾಗಿ ಡಾ.ಎಚ್. ನಂಜೇಗೌಡರು ಹೇಳಿದ್ದರು. ಆದರೆ ಇದುವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಯುವರಾಜ ಕಾಲೇಜು ವಿಶ್ವವಿದ್ಯಾಲಯಕ್ಕೆ ಒಳಪಡದಿರುವುದರಿಂದ ಸ್ವಾಯತ್ತ ಸಂಸ್ಥೆಯಾಗಿ ತಮ್ಮ ಇಷ್ಟ ಬಂದಂತೆ ನಿರ್ಧಾರ ಕೈಗೊಳ್ಳುತ್ತಿದೆ. ಹಾಜರಾತಿಗೆ ಯಾವುದೆ ಸೂಚನೆ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಫಲಿತಾಂಶ ಪ್ರಕಟಿಸದೆ ಮುಂದಿನ ವರ್ಷಕ್ಕೆ ಪ್ರವೇಶವನ್ನೂ ನೀಡಿದ್ದಾರೆ ಎಂದು ಆರೋಪಿಸಿದರು. ಆದರೆ ಈಗ ಹಾಜರಾತಿ ಕೊರತೆ ಕಾರಣಕ್ಕೆ ಫಲಿತಾಂಶ ಪ್ರಟಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ಗೌರವ ಅಧ್ಯಕ್ಷ ವೀರಣ್ಣಗೌಡ, ಉಪಾಧ್ಯಕ್ಷ ದೇವರಾಜ್ ಟಿ. ಕಾಟೂರು, ವಿದ್ಯಾರ್ಥಿಗಳು ಇದ್ದರು.