ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತಾಂತರದಿಂದ ಅಸ್ಪೃಶ್ಯತೆ ನಿವಾರಿಸಲು ಸಾಧ್ಯ

Vishwanath S
Updated On : 31 Aug 2013, 12:11 pm

ಕ.ಪ್ರ.ವಾರ್ತೆ , ಮೈಸೂರು , ಆ. 30
ಮತಾಂತರ ಮತ್ತು ಭಾಷಾ ಕಲಿಕೆಯಿಂದ ಮಾತ್ರ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಎಸ್.ಮರಿಸ್ವಾಮಿ ಹೇಳಿದರು.
ಮಾನಸ ಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ- ಸ್ವರೂಪ, ಕಾನೂನಿನ ತೊಡಕು ಮತ್ತು ನಿರ್ಮೂಲನೆಯ ಸಾಧ್ಯತೆಗಳು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಈಗ ಈ ಹಿಂದೆ ಇದ್ದ ಸ್ಥಿತಿ ಇಲ್ಲ. ಶೇ.90 ರಷ್ಟು ಅಸ್ಪೃಶ್ಯತೆ ನಿವಾರಣೆಯಾಗಿದೆ. ಉಳಿದ ಶೇ.10 ರಷ್ಟನ್ನು ಹೋಗಲಾಡಿಸಲು ಪ್ರಯತ್ನಿಸಬೇಕಿದೆ. ಯಾವುದೆ ಉದ್ಯೋಗಕ್ಕೆ ಕೌಶಲ್ಯತೆ ಇರಬೇಕು.
ಕನ್ನಡ ಮಾತ್ರ ತಿಳಿದಿದ್ದರೆ ಸಾಲದು, ಇಂಗ್ಲಿಷ್, ಹಿಂದಿ ಭಾಷೆಯನ್ನು ಕಲಿತರೆ ವಿಪುಲ ಅವಕಾಶ ಲಭ್ಯವಾಗುತ್ತದೆ. ಆದ್ದರಿಂದ ಪಟ್ಟಣಕ್ಕೆ ವಲಸೆ ಹೋಗುವುದು, ಉದ್ಯೋಗ ಬದಲಾವಣೆ, ಧರ್ಮಾಂತರ, ಭಾಷಾ ಕಲಿಕೆ ಹಾಗೂ ವಿಜ್ಞಾನದಲ್ಲಿನ ಹೊಸತನ್ನು ಒಪ್ಪಿಕೊಳ್ಳುವ ಮೂಲಕ ಅಸ್ಪೃಶ್ಯತೆ ನಿವಾರಿಸಲು ಸಾಧ್ಯ ಎಂದು ಅವರು ಹೇಳಿದರು.
ಧರ್ಮಾಂತರಕ್ಕೆ ಮುಂದಾಗಿ: ಕಸ ಗುಡಿಸುವವರು ಅದೆ ವೃತ್ತಿಯಲ್ಲಿ ಮುಂದುವರಿಯುವ ಬದಲು, ಕಟ್ಟಡ ನಿರ್ಮಾಣ, ಅಡುಗೆ ಇತ್ಯಾದಿ ಕೆಲಸ ಹುಡುಕಬೇಕು. ಇಂದು ಕೆಲಸ ಆಗುವುದು ಮುಖ್ಯವೆ ಹೊರತು, ಕೆಲಸ ಮಾಡುವವರ ಹಿನ್ನೆಲೆಯಲ್ಲ. ಧರ್ಮಾಂತರಕ್ಕೆ ಮುಂದಾಗಬೇಕು. ಗುಂಪು ಕಟ್ಟಲು, ಹೊಸ ವ್ಯಕ್ತಿತ್ವ ರೂಪಿಸಿಕೊಳ್ಳಲು, ಹೋರಾಟ ನಡೆಸಲು ಧರ್ಮ ವೇದಿಕೆಯಾಗಬಲ್ಲದು ಎಂದು ಹೇಳಿದರು.
ಒದೆಯುವ ಕಾಲನ್ನು ತಬ್ಬಿ ಹಿಡಿಯುವ ಮನೋಭಾವ ಬಿಟ್ಟು, ತಮ್ಮತನ ತೋರಿಸಬೇಕು. ಯಾವುದೇ ಕಟ್ಟುಪಾಡಿಲ್ಲದೆ ಒಂದು ಜನಾಂಗವಾಗಿ ಮುಂದುವರಿಯುವ ದಲಿತರು ಹೊಸ ಯೋಜನೆ ಹಾಗೂ ಸರಿಯಾದ ಮಾರ್ಗ ಅನುಸರಿಸಬೇಕು ಎಂದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್. ನರೇಂದ್ರಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement