ಮೈಸೂರು ದಸರಾ ವೆಬ್ಸೈಟ್ಗೆ ಚಾಲನೆ
ಕ.ಪ್ರ.ವಾರ್ತೆ , ಮೈಸೂರು , ಆ. 30
ಮೈಸೂರು ದಸರಾ 2013ರ ವೆಬ್ಸೈಟ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಶುಕ್ರವಾರ ಚಾಲನೆ ನೀಡಿದರು.
2013ರ ದಸರಾ ವೆಬ್ಸೈಟ್ ಢಿಢಿಢಿ.ಟಣಡ್ಟ್ಠಜಜಛಡಛ್ಠಛ.್ಜ್ಟಢ.್ಝಟಿ ಅನ್ನು ಜಿಲ್ಲಾಡಳಿತ ಮತ್ತು ಎನ್ಐಸಿ, ಡಾಟ್ ಆಂಗಲ್ ಎಂಬ ಸ್ಥಳೀಯ ವೆಬ್ ಡೆವಲಪ್ಮೆಂಟ್ ಸಂಸ್ಥೆಯ ಸಹಯೋಗದೊಂದಿಗೆ ರಚಿಸಲಾಗಿದೆ. ವೆಬ್ಸೈಟ್ನಲ್ಲಿ ಈ ಕೆಳಕಂಡ ವೈಶಿಷ್ಟ್ಯಗಳನ್ನು ಅಳವಡಿಸಿದೆ.
ವೆಬ್ಸೈಟ್ ವಿನ್ಯಾಸ, ದಸರಾ ಮತ್ತು ಮೈಸೂರಿನ ಪರಂಪರನೆಯನ್ನು ಬಿಂಬಿಸಿದ್ದು, ನಾಡಹಬ್ಬ ದಸರಾದ ವೈಶಿಷ್ಟ್ಯಗಳಾದ ಗಜಪಯಣದಿಂದ ಪ್ರಾರಂಭವಾಗಿ ಪಂಜಿನ ಕವಾಯತು ಕಾರ್ಯಕ್ರಮದವರೆಗೂ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಪಡೆಯಬಹುದು.
ದಸರಾಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನೀಡಲಾಗಿದೆ.
ರಾಜರ ಕಾಲದ ವೀಡಿಯೋ: ರಾಜರ ಕಾಲದ ದಸರಾ ಆಚರಣೆ ವೀಡಿಯೋ ಸೇರಿದಂತೆ ಮೈಸೂರಿನ ಪ್ರವಾಸಿ ತಾಣಗಳ ವೀಡಿಯೋಗಳನ್ನು ವೀಕ್ಷಿಸಬಹುದು. ದಿನಾಂಕಾಧಾರಿತ ಕಾರ್ಯಕ್ರಮಗಳ ಪಟ್ಟಿಯನ್ನು ನೋಡಬಹುದು. ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಸಂಪೂರ್ಣ ಮಾಹಿತಿ-ಪಾರ್ಕಿಂಗ್ ಸೌಲಭ್ಯದ ಮಾಹಿತಿ ಮತ್ತು ಅದರ ನಕ್ಷೆಯನ್ನು ಸಹ ನೀಡಲಾಗಿದೆ. 50ಕ್ಕೂ ಹೆಚ್ಚು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಮಾಹಿತಿಗಳು ಲಭ್ಯವಿದೆ.
ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ದಸರಾ ಕವರೇಜ್. ಸೋಷಿಯಲ್ ಮೀಡಿಯಾದಲ್ಲಿ ದಸರಾ ಬಗ್ಗೆ ಅನಿಸಿಕೆಗಳನ್ನು ನೋಡಬಹುದು. ಗಣ್ಯರ ವೀಡಿಯೋ ಸಂದೇಶ. ವಿಶಿಷ್ಟ ದಸರಾ ಅನುಭವಗಳು, ಕಥೆಗಳು. ದಸರಾ ಪೋಲ್ಸ್. ಎಲ್ಲ ಪ್ರಮುಖ ಕಾರ್ಯಕ್ರಮಗಳ ಪ್ರಾರಂಭದ ಸಮಯದ ಮಾಹಿತಿ. ಜನತಾ ಸವಾರಿ- ಜನತೆಯಿಂದ ದಸರಾ ಸಂದೇಶ ಹಾಗೂ ಶುಭಾಶಯಗಳನ್ನುಳ್ಳ ವೀಡಿಯೋ ಕೂಡ ಇರುತ್ತದೆ.
2 ದಿನಗಳಲ್ಲಿ ದಸರಾ ಉಪ ಸಮಿತಿ ಪಟ್ಟಿ
ಮೈಸೂರು: ಎರಡು ದಿನಗಳಲ್ಲಿ ದಸರಾ ಉಪ ಸಮಿತಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು. ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಆನೆಗಳ ಮೊದಲ ತಂಡಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಶುಕ್ರವಾರ ಸಾಂಪ್ರದಾಯಿಕ ಸ್ವಾಗತ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಿಯನ್ನು ಇವತ್ತು ಮತ್ತು ನಾಳೆ ಅಂತಿಮಗೊಳಿಸಲಾಗುವುದು ಎಂದರು. ಈ ಬಾರಿ ರೈತ ದಸರಾ ಕಾರ್ಯಕ್ರಮವನ್ನು ಚಾಮರಾಜನಗರಕ್ಕೂ ವಿಸ್ತರಿಸಲಾಗುತ್ತಿದೆ. ದಸರಾ ಸಂಬಂಧ ಸೆ.3 ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸಂಸದರು ಹಾಗೂ ಶಾಸಕರ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹಣ ಬಿಡುಗಡೆಗೆ ಕ್ರಮ: ಈ ಬಾರಿ ದಸರೆಗೆ 10 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಲಾಗಿದೆ. ಆದರೆ ಹಣಕಾಸು ಇಲಾಖೆ ಇನ್ನೂ ಹಣಕಾಸು ಬಿಡುಗಡೆ ಮಾಡಿಲ್ಲ. ಶೀಘ್ರ ಹಣ ಬಿಡುಗಡೆ ಬಗ್ಗೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸುವುದಾಗಿ ಅವರು ಹೇಳಿದರು. ಅಲ್ಲಿಯವರೆಗೆ ಕಳೆದ ಬಾರಿ ಉಳಿದಿರುವ 48 ಲಕ್ಷ ಬಳಕೆ ಮಾಡಲಾಗುವುದು. ದಸರೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಬಾರಿ ದಸರೆಗೆ 1000 ಗೋಲ್ಡ್ಕಾರ್ಡ್ ಬಿಡುಗಡೆ ಮಾಡಲಾಗುವುದು. ಕಳೆದ ವರ್ಷ ಗೋಲ್ಡ್ ಕಾರ್ಡ್ ಬೆಲೆ 6,000 ರು. ಇತ್ತು. ಈ ಬಾರಿ ಉಪಸಮಿತಿಯಲ್ಲಿ ಚರ್ಚಿಸಿ, ದರ ನಿಗದಿ ಮಾಡಲಾಗುವುದು ಎಂದರು.