ವಿಜೃಂಭಣೆಯಿಂದ ದೊಡ್ಡಮ್ಮತಾಯಿ ವಿಗ್ರಹ ಪ್ರತಿಷ್ಠಾಪನೆ
ಕ.ಪ್ರ.ವಾರ್ತೆ , ರಾವಂದೂರು , ಆ. 30
ಆಧುನಿಕತೆಯ ಒತ್ತಡದ ಬದುಕಿನಲ್ಲಿ ದೇವಾಲಯಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದ್ದು, ಮನಃಶಾಂತಿಗಾಗಿ ಇಂದು ದೇವಾಲಯ ಆಶ್ರಯಿಸುವಂತಾಗಿದೆ ಎಂದು ಬೆಟ್ಟದಪುರ ಸಲಿಲಾಖ್ಯ ಮಠದ ಚೆನ್ನಬಸವದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಹರಳಹಳ್ಳಿ ಗ್ರಾಮದ ದೊಡ್ಡಮ್ಮತಾಯಿ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ತನ್ನ ದಿನನಿತ್ಯದ ಜಂಟಾಟದ ಬದುಕಿನೊಂದಿಗೆ ಮಾನಸಿಕ ನೆಮ್ಮದಿ ಪಡೆಯಲು ಪೂಜೆ, ಭಕ್ತಿ ಇವು ಸಹಕಾರಿಯಾಗಿವೆ. ಇವು ಮನೋಸಹಜವಾದ ಚಾಂಚಲ್ಯವನ್ನು ತೊಲಗಿಸಿ, ಏಕಾಗ್ರತೆ ನೀಡುವುದರೊಂದಿಗೆ ಆಧ್ಯಾತ್ಮದ ಮೂಲಕ ಉತ್ತಮ ನಾಗರಿಕ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ದೇವಾಲಯಗಳು ಪುನರುಜ್ಜೀವನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಹರಳಹಳ್ಳಿ ಗ್ರಾಮದಲ್ಲಿ 1921ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುವ ಈ ಗ್ರಾಮ ದೇವತೆಯ ದೇವಾಲಯದಲ್ಲಿ, ಉತ್ಸವ ಮೂರ್ತಿಯನ್ನೇ ಇಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಇಂದು ದೇವತೆಯ ಮೂರ್ತಿಯನ್ನು ಪೂಜೆ, ಹವನಾದಿಗಳನ್ನು ನೆರವೇರಿಸಿ ಶಾಸ್ತ್ರೋಕ್ತವಾಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ವಿಗ್ರಹ ದಾನಿಗಳಾದ ಎಚ್.ಬಿ. ಮಾದೇಶ್, ಗ್ರಾಮದ ಮುಖಂಡರಾದ ರಾಮಶೆಟ್ಟಿ, ರಾಜಶೇಖರ್, ಶ್ರೀಕಂಠಾರಾಧ್ಯ, ಮಹೇಂದ್ರ, ಅರ್ಚಕ ರಾಮಾನಾಯಕ್ ಇದ್ದರು.