ಸೆ.2 ರಿಂದ ರಾಷ್ಟ್ರೀಯ ನಾದ ನೃತ್ಯೋತ್ಸವ
ಕ.ಪ್ರ.ವಾರ್ತೆ , ಮೈಸೂರು , ಆ. 30
ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದಿಂದ ಸೆ.2 ರಿಂದ 6 ರವರೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ರಾಷ್ಟ್ರೀಯ ನಾದ ನೃತ್ಯೋತ್ಸವ ಆಯೋಜಿಸಲಾಗಿದೆ.
ಸೆ.2ರ ಸಂಜೆ 5.30ಕ್ಕೆ ಇಸ್ಕಾನ್ನ ಶ್ರೀ ತಿರು ಸ್ವಾಮೀಜಿ ಉದ್ಘಾಟಿಸಲಿದ್ದು, ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಹಣಕಾಸು ಸಚಿವಾಲಯದ ಎಸಿ ಜೆ.ದರ್ಶನ್, ಲಲಿತಾ ಶ್ರೀನಿವಾಸನ್ ಭಾಗವಹಿಸುವರು.
ಸೆ.3ರ ಸಂಜೆ 5.30ರ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿವಿ ಕುಲಸಚಿವ ಡಾ.ವೈ.ಎಸ್. ಸಿದ್ದೇಗೌಡ, ಕಾಡಾ ಕಚೇರಿ ಆಡಳಿತ ಅಧಿಕಾರಿ ಎ.ಎಂ. ಯೋಗೀಶ್ ಅತಿಥಿಯಾಗಿ ಭಾಗವಹಿಸುವರು. ಕೃಪಾ ಫಡ್ಕೆ, ಶಾರದಾ ಮಣಿ ಶೇಖರ್, ಪುಷ್ಪಕೃಷ್ಣಮೂರ್ತಿ, ಭರತನಾಟ್ಯ ಪ್ರದರ್ಶಿಸುವರು. ಸೆ.4ರ ಸಂಜೆ 5.30ರ ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ.ಅಂಬಳಿಕೆ ಹಿರಿಯಣ್ಣ, ಪ್ರೊ.ಎಂ.ಜಿ. ಕೃಷ್ಣನ್ ಭಾಗವಹಿಸುವರು.
ಸೆ.5ರ ಸಂಜೆ 5.30ರ ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಡೀನ್ ಡಿ.ಎ. ಉಪಾಧ್ಯ, ಸಾಹಿತಿ ವಾಸುದೇವರಾವ್ ಹಳದಿಪುರ್ ಅತಿಥಿಗಳಾಗಿ ಭಾಗವಹಿಸುವರು. ನಂತರ ಎಂ. ಅನನ್ಯ, ಪಾರ್ಶ್ವನಾಥ್ ಉಫಾಧ್ಯೆ, ಪಿ.ಬಿ. ನಯನ ಭರತನಾಟ್ಯ ಪ್ರದರ್ಶಿಸುವರು. ಸೆ.6ರ ಸಂಜೆ 5.30ಕ್ಕೆ ನಡೆಯುವ ಸಮಾರೋಪದಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಮಾಲೇಗೌಡ, ಕಲಾವಿದೆ ವೈಜಯಂತಿ ಕಾಶಿ ಅತಿಥಿಯಾಗಿ ಭಾಗವಹಿಸುವರು.
ಪ್ರಾಂಶುಪಾಲ ಪ್ರೊ.ಮಲಿಯಯ್ಯ ನಿಧನ
ಕ.ಪ್ರ.ವಾರ್ತೆ , ಮೈಸೂರು , ಆ. 30
ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಲಿಯಯ್ಯ (59) ಅವರು ಉಸಿರಾಟದ ತೊಂದರೆಯಿಂದ ಶುಕ್ರವಾರ ನಿಧನರಾದರು.
ಮಲಿಯಯ್ಯ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಇವರ ಸಹೋದರ ಅಲ್ಲದಾಸಯ್ಯ ಮಾನಸಗಂಗೋತ್ರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು. ಭೂಗೋಳಶಾಸ್ತ್ರ ಬೋಧಿಸುತ್ತಿದ್ದ ಮಲಿಯಯ್ಯ ಅವರು ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ವೃತ್ತಿ ಜೀವನ ಆರಂಭಿಸಿ, ನಂತರ ಬೆಂಗಳೂರು ಸರ್ಕಾರಿ ಕಾಲೇಜು, ಮಂಗಳೂರಿನ ಹೆಬ್ರಿ ಕಾಲೇಜು, ಹೊಳೆನರಸೀಪುರದ ಪಡುವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಮಾಡಿ, ಸದ್ಯ ಗುಂಡ್ಲುಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯು ಆ.31 ರಂದು ಸ್ವಗ್ರಾಮವಾದ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಡಿತರ ಚೀಟಿ, ಆಧಾರ್ ಜೆರಾಕ್ಸ್ ಪ್ರತಿ ಸಲ್ಲಿಸಿ: ಜಿಲ್ಲಾಧಿಕಾರಿ ಸಿ.ಶಿಖಾ
ಕ.ಪ್ರ.ವಾರ್ತೆ , ಮೈಸೂರು , ಆ. 30
ಜಿಲ್ಲೆಯಲ್ಲಿರುವ ಎಲ್ಲ ಅನಿಲ ರಹಿತ ಅಂತ್ಯೋದಯ ಅನ್ನ ಯೋಜನೆಯಡಿ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಸೆಪ್ಟೆಂಬರ್ನಲ್ಲಿ ಸೀಮೆಎಣ್ಣೆ ಪಡೆದುಕೊಳ್ಳುವ ವೇಳೆ, ನ್ಯಾಯಬೆಲೆ ಅಂಗಡಿಯಲ್ಲಿ ತಾವು ಹೊಂದಿರುವ ಪಡಿತರ ಚೀಟಿಗಳ ಜೆರಾಕ್ಸ್ ಪ್ರತಿ ಹಾಗೂ ಕುಟುಂಬದಲ್ಲಿನ 18 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮಹಿಳಾ ಕುಟುಂಬ ಮುಖ್ಯಸ್ಥರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ನೀಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಆದೇಶಿಸಿದ್ದಾರೆ.
ಆಧಾರ್ ಕಾರ್ಡ್ ಬಂದಿಲ್ಲದೆ ಇದ್ದ ಪಕ್ಷ ಇಐಡಿ (28 ಸಂಖ್ಯೆಗಳನ್ನು ಹೊಂದಿರುವ) ಸ್ವೀಕೃತಿಯ ಜೆರಾಕ್ಸ್ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ನೀಡಬೇಕು. ಈ ರೀತಿ ಪಡಿತರ ಚೀಟಿಗಳ ಜೆರಾಕ್ಸ್ ಪ್ರತಿ ಹಾಗೂ ಆಧಾರ್ ಕಾರ್ಡ್ ಯುಐಡಿ, ಇಐಡಿ ಜೆರಾಕ್ಸ್ ಪ್ರತಿಯನ್ನು ನೀಡದೆ ಇದ್ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಅಕ್ಟೋಬರ್ 2013ನೇ ಮಾಹಿಯಿಂದ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ದತ್ತಿ ಉಪನ್ಯಾಸ
ಮೈಸೂರು: ಬಸವ ಸಮಿತಿಯಿಂದ ಸೆ.1ರ ಬೆಳಗ್ಗೆ 11ಕ್ಕೆ ವಿಜಯನಗರದಲ್ಲಿನ ಬಸವ ಭವನದಲ್ಲಿ ಶರಣ ಸಂಗಮ 189ನೇ ದತ್ತಿ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರೊ.ಬಿ.ವಿ. ವಸಂತಕುಮಾರ್ ಉಪನ್ಯಾಸ ನೀಡುವರು.
ನೇಮಕ
ಜೆ.ಪಿ. ನಗರ ಸ್ನೇಹನಿಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ. ನಾಗರಾಜು, ಉಪಾಧ್ಯಕ್ಷರಾಗಿ ಎಸ್.ಡಿ. ರುದ್ರಮೂರ್ತಿ, ನಿರ್ದೇಶಕರಾಗಿ ಕೆ.ಎನ್. ಪ್ರಮೋದ್ ಚಂದರ್, ಗುರುಸಿದ್ದಯ್ಯ, ಡಾ.ಡಿ. ಎಂ.ನಾಗರಾಜು, ಕೆ.ಎಚ್. ದೇವರಾಜು, ಕೆ.ಶಿವಮೂರ್ತಿ, ಕೆ.ಶಿವಣ್ಣ, ಚಲುವಯ್ಯ, ಶಶಿಕಲಾ ನಾಗರಾಜ್, ಸರೋಜ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದತ್ತು ಸ್ವೀಕಾರ
ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೈಸೂರಿನ ಆಸರೆ ಫೌಂಡೇಷನ್ ಸಾರ್ಸ್ ಕ್ರೇನ್ನನ್ನು 7,500ಗೆ ಹಾಗೂ ಸಿದ್ದಾರ್ಥನಗರದ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಇಂಡಿಯನ್ ಗ್ರೇ ತೋಳ, ಬಡ್ಡೆ ರಿಗಾರ್, ಕಾಕಟೀಲ್ ಅನ್ನು 22 ಸಾವಿರಕ್ಕೆ ದತ್ತು ಪಡೆದಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ನಮೋ ಬ್ರಿಗೇಡ್ ಉದ್ಘಾಟನೆ ನಾಳೆ
ದೇಶದ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಆರಂಭಿಸಿರುವ ನಮೋ ಬ್ರಿಗೇಡ್ ಮೈಸೂರು ಶಾಖಾ ಉದ್ಘಾಟನಾ ಸಮಾರಂಭವನ್ನು ಸೆ.1 ರಂದು ನಗರದ ಮೆಟ್ರೋಪೋಲ್ ಹತ್ತಿರದ ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಮಾರಂಭವನ್ನು ವಕೀಲ ಓ. ಶ್ಯಾಮ್ಭಟ್ ಉದ್ಘಾಟಿಸಲಿದ್ದು, ಅರೈಸ್ ಇಂಡಿಯಾ ಸಂಸ್ಥಾಪಕ ತೇಜಸ್ವಿ ಸೂರ್ಯ, ಯುವ ಭಾರತ್ ಜಿಲ್ಲಾ ಪ್ರಭಾರಿ ನಿತ್ಯಾನಂದ್, ಸರ್ವೋ ಲುಬ್ರಿಕೇಷನ್ಸ್ನ ಎಸ್.ಕೆ. ದಿನೇಶ್ ಅತಿಥಿಯಾಗಿ ಭಾಗವಹಿಸುವರು ಎಂದು ವಕೀಲ ಫಣಿಚೇತನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪದಾಧಿಕಾರಿಗಳಾದ ಶೇಕ್ ಅಬ್ರಹಾಂ, ಅನಂತಕೃಷ್ಣ, ಅಜಯ್ಶಾಸ್ತ್ರಿ, ರಾಜೇಂದ್ರ ಪ್ರಸಾದ್ ಇದ್ದರು.
ರಘು ಆಚಾರ್ಗೆ ಗೆಲವು: ಅಭಿನಂದನೆ
ಚಿತ್ರದುರ್ಗ- ದಾವಣಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ರಘು ಆಚಾರ್ ಅವರಿಗೆ ದಾಖಲೆ ಗೆಲವು ಸಂದಿದೆ ಎಂದು ರಘು ಆಚಾರ್ ಯುವ ಬಳಗ ಅಭಿನಂದಿಸಿದೆ. ಜನರು ಜಾತಿ ಮರೆತು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ ಎಂದು ಬಳಗದ ಅಧ್ಯಕ್ಷ ಅರುಣ್ಕುಮಾರ್ ತಿಳಿಸಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಅಗ್ನಿಪಥ ನಾಟಕ
ಮೈಸೂರು: ಮೈಸೂರಿನ ನಟನ ಕಲಾವಿದರು ಅಭಿನಯಿಸಿರುವ, ಸಂಸದೆ, ಕಲಾವಿದೆ ಬಿ.ಜಯಶ್ರೀ ನಿರ್ದೇಶನದ ಅಗ್ನಿಪಥ ನಾಟಕ ಪ್ರದರ್ಶನವನ್ನು ಸೆ.1 ರಂದು ಬೆಂಗಳೂರಿನ ರಂಗಶಂಕರ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಉತ್ತರ ಕರ್ನಾಟಕದ ಗೊಂದಲಿಗರ ಮೇಳ ಹಾಗೂ ದಕ್ಷಿಣ ಕನ್ನಡದ ಯಕ್ಷಗಾನ ಶೈಲಿಯನ್ನು ಮೇಳೈಸಿ ಜಾನಪದ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ರಂಗ ಪ್ರಯೋಗದ ಹಾಡುಗಳನ್ನು ಕವಿ ಎಂ.ಎನ್. ವ್ಯಾಸರಾವ್ ರಚಿಸಿದ್ದಾರೆ. ಮುರಳಿ ಶೃಂಗೇರಿ ಸಂಭಾಷಣೆ ಬರೆದಿದ್ದು, ಶಶಿಧರ ಅಡಪ ರಂಗವಿನ್ಯಾಸ ನಿರ್ಮಿಸಿದ್ದಾರೆ. ಟಿಕೆಟ್ಗಾಗಿ ಮೊ. 94815 03135 ಸಂಪರ್ಕಿಸಬಹುದು.
ಗರ್ಭಧಾರಣಾ ಶಿಬಿರ ನಾಳೆ
ಕನಕದಾಸನಗರದಲ್ಲಿರುವ ಡಾ.ಜ್ಯೋತಿ ಹೆಲ್ತ್ ಕೇರ್ ಪ್ರೈ.ಲಿ.ನಲ್ಲಿ ಸೆ.1 ರಿಂದ 7ರವರೆಗೆ ಉಚಿತ ಫರ್ಟಿಲಿಟಿ (ಗರ್ಭಧಾರಣ) ಶಿಬಿರ ಏರ್ಪಡಿಸಿದ್ದು, ಮೊ. 98805 07884 ಸಂಪರ್ಕಿಸಬಹುದು.
ಸಾವಯವ ಸಂತೆ
ಬಾನುಲಿ ಕೃಷಿಕರ ಉತ್ಪಾದಕರ ಕಂಪನಿಯಿಂದ ಸೆ.1 ರಿಂದ ಪ್ರತಿ ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಸಾವಯವ ಸಂತೆ ಹಮ್ಮಿಕೊಳ್ಳಲಿದ್ದು, ಆಸಕ್ತರು ಮೊ. 94801 91936 ಸಂಪರ್ಕಿಸಬಹುದು.
ಆರೋಗ್ಯ ತಪಾಸಣೆ
ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಸೆ.1ರ ಬೆಳಗ್ಗೆ 10.30ಕ್ಕೆ ಸುಬ್ಬರಾಯನಕೆರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು, ಸಂಘದ ಅಧ್ಯಕ್ಷ ಡಿ.ಎಸ್.ಜಗದೀಶ್, ಶಾಸಕ ಎಂ.ಕೆ. ಸೋಮಶೇಖರ್ ಭಾಗವಹಿಸುವರು.
ರೇಕಿ ಚಿಕಿತ್ಸೆ
ಕುವೆಂಪುನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರದಲ್ಲಿ ಸೆ.1ರ ಬೆಳಗ್ಗೆ 9.30ಕ್ಕೆ ರೇಕಿ ಸ್ವಸಂಮ್ಮೋಹಿನಿ ಪೂರ್ವಜನ್ಮ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು, ಮೊ. 94496 96998 ಸಂಪರ್ಕಿಸಬಹುದು.
ಸಂರಚನಾ ಶಿಕ್ಷಣ
ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೆ.1ರ ಬೆಳಗ್ಗೆ 10ಕ್ಕೆ 53ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂರಚನಾ ಶಿಕ್ಷಣ ಕುರಿತ ಅಭಿವಿನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರೊ.ಎಸ್.ಆರ್. ಸಾವಿತ್ರಿ, ಪ್ರೊ.ಡಿ.ಜಿ. ರಾವ್ ಭಾಗವಹಿಸುವರು.