54 ಲಕ್ಷ ಕಳವು ಮಾಡಿದ್ದ ಕದೀಮರ ಸೆರೆ
ಮೈಸೂರು: ನಗರದ ಚಾರೊಯೆನ್ ಪೋಕ್ ಪಾಂಡ ಇಂಡಿಯಾ ಪ್ರೈ.ಲಿ. ಕಚೇರಿಯಲ್ಲಿ 54 ಲಕ್ಷ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಜರ್‌ಬಾದ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಹೊಸಕೋಟೆ ತಾಲೂಕು ಕಾಮರಸಹಳ್ಳಿ ಗ್ರಾಮದ ಕೆ.ವಿ. ಧನರಾಜ್ (21) ಮತ್ತು ಆತನ ಅಣ್ಣ ಪುರುಷೋತ್ತಮ್ (23) ಬಂಧಿತ ಆರೋಪಿಗಳು. ಇವರು ಕಳ್ಳತನ ಮಾಡಿದ್ದ 54 ಲಕ್ಷಗಳನ್ನು ವಶಪಡಿಸಿಕೊಂಡು, ಸಂಸ್ಥೆಯ ಮಾಲೀಕರಿಗೆ ತಲುಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘಟನೆ ವಿವರ: 7 ವರ್ಷಗಳ ಹಿಂದೆ ನಗರದ ಆಲನಹಳ್ಳಿ ಬಡಾವಣೆಯ 7ನೇ ಮುಖ್ಯರಸ್ತೆಯಲ್ಲಿ ಸ್ಥಾಪನೆಯಾಗಿದ್ದ ಕೋಳಿ ಸಾಕಾಣಿಕೆ ಮತ್ತು ಅಭಿವೃದ್ಧಿಪಡಿಸುವ ಚಾರೊಯಿನ್ ಪೋಕ್ ಪಾಂಡ ಇಂಡಿಯಾ ಪ್ರೈ.ಲಿ. ನಲ್ಲಿ ಧನರಾಜ್ ಬರ್ಡ್ ಕ್ಯಾಚರ್ ಆಗಿ ಕೆಲಸ ಮಾಡುತ್ತಿದ್ದರು. ಕಚೇರಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ತಿಜೋರಿಯ ಕೀಯನ್ನು ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡಿದ್ದ. ಜ.27ರ ರಾತ್ರಿ 1 ಗಂಟೆಯ ಸಮಯದಲ್ಲಿ ತನ್ನ ಬಳಿಯಿದ್ದ ನಕಲಿ ಕೀಯಿಂದ ತಿಜೋರಿ ಬಾಗಿಲು ತೆರೆದು 54.47 ಲಕ್ಷ ಕಳ್ಳತನ ಮಾಡಿ, ತನ್ನ ಅಣ್ಣ ಪುರುಷೋತ್ತಮನ ಮುಖಾಂತರ ಸ್ವಗ್ರಾಮಕ್ಕೆ ತೆಗೆದುಕೊಂಡ ಹೋದ. ಗ್ರಾಮದ ನೀಲಗಿರಿ ತೋಪಿನ ಬಳಿ ಇರುವ ನೀರಿಲ್ಲದ ರಾಜ ಕಾಲುವೆಯಲ್ಲಿ ಹಳ್ಳ ತೆಗೆದು ಹಣವನ್ನು ಬಚ್ಚಿಟ್ಟಿದ್ದರು ಎಂದು ವಿವರಿಸಿದರು.
ಈ ಪ್ರಕರಣವನ್ನು ಭೇದಿಸಲು ನಜರ್‌ಬಾದ್ ಪೊಲೀಸರ ತಂಡ ರಚಿಸಿ ಶೀಘ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯುಕ್ತರು ನಗದು ಬಹುಮಾನ ನೀಡಿದರು. ಅಲ್ಲದೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಾ. ಭೂಪತಿ ಪೊಲೀಸ್ ಇಲಾಖೆಗೆ 2 ಲಕ್ಷ ನಗದು ಬಹುಮಾನ ನೀಡಿದರು.
ಈ ಪತ್ತೆ ಕಾರ್ಯದಲ್ಲಿ ನಜರ್‌ಬಾದ್ ಇನ್‌ಸ್ಪೆಕ್ಟರ್ ಜಿ.ಎನ್. ಮೋಹನ್, ಎಸ್‌ಐಗಳಾದ ಜಿ. ಉದಯರವಿ, ಎಚ್.ಎಂ. ಮಾಧು, ಸಿಬ್ಬಂದಿ ಎಂ.ಎಂ. ಬಾಬು, ಕೆ.ಎಸ್. ಗುರುಸ್ವಾಮಿ, ದೇವರಾಜ್ ಅರಸ್, ಅನಿಲ್ ಕೆ. ಶಂಕಪಾಲ್, ಎಚ್.ವಿ. ಮಧುಕೇಶ್, ಪ್ರಕಾಶ್, ವಿ. ಶ್ರೀನಿವಾಸ್, ಸಿ. ಮಹೇಶ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.