ಅಂತೂ ಬಂದೇ ಬಿಟ್ಟರು, ಹೊಸ ಜಿಲ್ಲಾಧಿಕಾರಿ
ಮೈಸೂರು: ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ಎಸ್. ರಾಮೇಗೌಡ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಚಾಮುಂಡಿಬೆಟ್ಟ ತಪ್ಪಲಿನ ಭೂವಿವಾದದ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅವರನ್ನು ಎರಡು ತಿಂಗಳ ಹಿಂದೆ ಎತ್ತಂಗಡಿ ಮಾಡಲಾಗಿತ್ತು. ಮೊದಲಿಗೆ ವಸ್ತ್ರದ್ ಅವರನ್ನು ಚಾಮರಾಜನಗರಕ್ಕೂ ಅಲ್ಲಿದ್ದ ಎನ್. ಜಯರಾಂ ಅವರನ್ನು ಮೈಸೂರಿಗೂ ವರ್ಗ ಮಾಡಲಾಗಿತ್ತು. ಇದಾದ ನಂತರ ವಸ್ತ್ರದ್ ಅವರು ಮತದಾರರ ನೋಂದಣಿ ಪ್ರಕ್ರಿಯೆ ನಡೆಯುತ್ತಿರುವುದಿರಂದ ಚುನಾವಣಾ ಆಯೋಗದ ಅನುಮತಿ ಇಲ್ಲದೇ ಬಿಡುಗಡೆ ಮಾಡುವಂತಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿಯೇ ಉಳಿಯಲು ಯತ್ನಿಸಿದ್ದರು. ಈ ವಿಷಯ ಸಿಎಂ ಶೆಟ್ಟರ್ ಹಾಗೂ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಜಟಾಪಟಿಗೂ ಕಾರಣವಾಗಿತ್ತು. ನಂತರ ವಸ್ತ್ರದ್ ಅವರನ್ನು ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರಾಗಿ ವರ್ಗಾಯಿಸಲಾಗಿತ್ತು. ಜಯರಾಂ ಅವರ ವರ್ಗಾವಣೆಯನ್ನು ರದ್ದುಪಡಿಸಿ, ಚಾಮರಾಜನಗರದಲ್ಲಿಯೇ ಮುಂದುವರಿಸಲಾಗಿತ್ತು.
ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಎಸ್.ಎನ್. ನಾಗರಾಜ್ ಸೇರಿದಂತೆ ಹಲವು ಹೆಸರುಗಳು ಕೇಳಿ ಬಂದಿದ್ದವು. ಆದರೂ ಸರ್ಕಾರ ಮೈಸೂರಿಗೆ ಕಾಯಂ ಜಿಲ್ಲಾಧಿಕಾರಿ ನೇಮಿಸಿರಲಿಲ್ಲ. ಹೀಗಾಗಿ ಜಿಪಂ ಸಿಇಒ ಡಾ.ಎಂ.ಎನ್. ಅಜಯ್ ನಾಗಭೂಷಣ್ ಪ್ರಭಾರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂಲತಃ ಹಾಸನ ಜಿಲ್ಲೆಯವರು: ಅಂತಿಮವಾಗಿ ಸರ್ಕಾರ ಜಿಲ್ಲಾಧಿಕಾರಿ ಹುದ್ದೆಗೆ ರಾಮೇಗೌಡ ಅವರನ್ನು ಬುಧವಾರ ನೇಮಕ ಮಾಡಿ ಆದೇಶಿಸಿತ್ತು. ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾ. ದೊಡ್ಡಮಗ್ಗೆಯವರಾದ ರಾಮೇಗೌಡರು ಕೆಎಎಸ್ ಶ್ರೇಣಿಯಿಂದ ಐಎಎಸ್ಗೆ ಬಡ್ತಿ ಹೊಂದಿದವರು. ಹಿಂದೆ ಗೃಹ ಸಚಿವ ಆರ್. ಅಶೋಕ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಮೈಸೂರಿಗೆ ಬರುವ ಮುನ್ನ ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಶುಕ್ರವಾರ ಬೆಳಗ್ಗೆ 9.45ಕ್ಕೆ ರಾಮೇಗೌಡ ಅವರು, ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್ ಅವರಿಂದ ಅಧಿಕಾರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹೂ ಗುಚ್ಚ ನೀಡಿ ನೂತನ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಗರ ಪ್ರದೇಶದಲ್ಲಿ ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರಗಾಲ ಇದೆ. ಅಲ್ಲದೆ ಅಂತರ್ಜಲ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಎಲ್ಲಿ ಪೈಪ್ಲೈನ್ ಮಾಡಬೇಕಾದ ಅಗತ್ಯವಿದೆಯೋ ಅಲ್ಲಿ ಕಾಮಗಾರಿ ಆರಂಭಿಸಲು ಸೂಚಿಸಲಾಗುವುದು. ಅಲ್ಲದೆ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ ಸಮಸ್ಯೆ ಇದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ. ಅಕ್ರಮ ಮರಳು ಗಣಿಗಾರಿಕೆ ಸಾಮಾನ್ಯವಾಗಿ ಎಲ್ಲಾ ಜಿಲ್ಲೆಯಲ್ಲಿಯೂ ಇದೆ. ಆದ್ದರಿಂದ ಇಲಾಖೆ ಮೂಲಕ ಗ್ರಾಹಕರಿಗೆ ಸಮಗ್ರ ಮರಳು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ರಾಮೇಗೌಡ ಹೇಳಿದರು.
ಜಿಲ್ಲೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗುತ್ತಿದೆ. ಅಕ್ಕಿ ಮಿಲ್ಗಳಿಂದ ತಮಿಳುನಾಡು ಅಥವಾ ಕೇರಳಕ್ಕೆ ಅಕ್ಕಿ ಅಥವಾ ಬತ್ತ ಸರಬರಾಜು ಆಗದಂತೆ ತಡೆಗಟ್ಟಬೇಕಿದೆ. ದಲ್ಲಾಳಿಗಳು ಅಥವಾ ಮಿಲ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿದರೆ ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಳ್ಳಲು ಸಹ ನಾವು ಸಿದ್ಧರಿದ್ದೇವೆ ಎಂದ ಅವರು, ರಾಮಕೃಷ್ಣಾಶ್ರಮಕ್ಕೆ ಸರ್ಕಾರಿ ಶಾಲೆ ನೀಡುವ ಸಂಬಂಧದ ವಿಷಯ ನನಗೆ ತಿಳಿದಿಲ್ಲ. ಚಾಮುಂಡಿ ಬೆಟ್ಟ ಭೂ ವಿವಾದ ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ. ಅದನ್ನು ನೋಡಿದ ಬಳಿಕ ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ರಾತ್ರಿಯೇ ನಗರಕ್ಕೆ ಆಗಮಸಿದ್ದ ರಾಮೇಗೌಡ ಅವರು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಪೂಜೆ ಸಲ್ಲಿಸಿದ ಬಳಿಕ ಅಧಿಕಾರ ಸ್ವೀಕರಿಸಿದ್ದಾರೆ.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಕೆ.ಎಂ. ಚಂದ್ರೇಗೌಡ, ಉಪ ವಿಭಾಗಾಧಿಕಾರಿ ಬಸವರಾಜು, ತಹಸೀಲ್ದಾರ್ಗಳಾದ ನವೀನ್ ಜೋಸೆಫ್, ಯತಿರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕಿ ಕುಮುದಾ ಗಿರೀಶ್ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.