ಒತ್ತಡ ಜೀವನ ಮಾನಸಿಕ ಅನಾರೋಗ್ಯಕ್ಕೆ ಕಾರಣ
ಮೈಸೂರು: ಒತ್ತಡ ಜೀವನ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಶ್ರೀಪಾದ ಸಂಕೊಳ್ಳಿ ಹೇಳಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋರೋಗ ಚಿಕಿತ್ಸಾ ವಿಭಾಗವು ಜೆ.ಕೆ. ಮೈದಾನದ ಎಂಎಂಸಿಆರ್ಐ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಿರುವ ಇಂಡೋ - ಯುರೋಪಿಯನ್ ಜನಜೀವನದ ಒತ್ತಡ ಎಂಬ ಮೂರು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲಾ ರಂಗದಲ್ಲಿಯೂ ಸ್ಪರ್ಧೆ ಇರುವ ಹಿನ್ನೆಲೆಯಲ್ಲಿ ಒತ್ತಡ ಹೆಚ್ಚಾಗಿ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಮಕ್ಕಳು ಸಹ ಹೊರತಾಗಿಲ್ಲ. ಆದ್ದರಿಂದಾಗಿ ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆ, ವಿಚ್ಚೇದನ ಹಾಗೂ ಮಾದಕ ಸೇವನೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದರು.
ವಿದ್ಯಾರ್ಥಿಗಳು ಶಿಕ್ಷಕರನ್ನು ಕೊಲ್ಲುವುದು, ಪೇದೆ ಇನ್ಸ್ಪೆಕ್ಟರ್ ಕೊಲ್ಲುವುದು ಇವುಗಳಿಗೆ ಮಾನಸಿಕ ಒತ್ತಡಗಳು ಕಾರಣ. ಇಂತಹ ಅನೇಕ ಪ್ರಕರಣಗಳು ನಡೆದಿವೆ. ಈ ಕಾಯಿಲೆ ಶಮನಕ್ಕೆ ಕೇವಲ ಚಿಕಿತ್ಸೆ ಮಾತ್ರವೇ ಮದ್ದಲ್ಲ. ಪ್ರೀತಿ ಹಾಗೂ ವಿಶ್ವಾಸದಿಂದ ಅವರನ್ನು ಗುಣಪಡಿಸುವಲ್ಲಿ ಮುಂದಾಗಬೇಕು ಎಂದು ಅವರು ಹೇಳಿದರು.
300 ಮಿಲಿಯನ್ ರೋಗಿಗಳು: ವಿಶ್ವದಲ್ಲಿಯೇ ಮಾನಸಿಕ ರೋಗದಿಂದ 300 ಮಿಲಿಯನ್ ಜನರು ಬಳಲುತ್ತಿದ್ದಾರೆ. ಅವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಆದರೆ ಕೆಲವು ಮಾನಸಿಕ ಕೇಂದ್ರಗಳಲ್ಲಿ ಅವರಿಗೆ ಸೂಕ್ತ ಸೌಲಭ್ಯ ಒದಗಿಸದೆ ಇರುವುದು ವರದಿಗಳಿಂದ ತಿಳಿದುಬಂದಿದ್ದು, ಇದು ಅಮಾನವೀಯ ಸಂಗತಿ. ಅಂತಹ ಕೇಂದ್ರಗಳಲ್ಲಿಯೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ ಸಂಗತಿ ಎಂದು ವಿಷಾದಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ಪಿ ಆರ್. ದಿಲೀಪ್, ಒತ್ತಡಗಳಿಗೆ ಒಳಗಾಗಲು ಬಹುಮುಖ್ಯ ಕಾರಣ ಹಾಗೂ ಆರಂಭದಲ್ಲಿಯೇ ಅದನ್ನು ಹೋಗಲಾಡಿಸಲು ಅನುಸರಿಸಬೇಕಾದ ಮಾರ್ಗ, ಸೂಕ್ತ ಕಾಲಕ್ಕೆ ನೀಡಬೇಕಾದ ಚಿಕಿತ್ಸೆ ಮತ್ತು ಇದರ ನಿರ್ಮೂಲನೆಗೆ ವಹಿಸಬೇಕಾದ ಪಾತ್ರಗಳನ್ನು ಬಹುಮುಖ್ಯವಾಗಿ ಚರ್ಚಿಸುವ ಮೂಲಕ ಇದರ ತಡೆಗೆ ಪರಿಹಾರವನ್ನು ತಜ್ಞರು ಸೂಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊರತರಲಾದ ಸಿಡಿಯನ್ನು ಯುರೋಪಿನ ಮನೋರೋಗ ಸಂಶೋಧನಾ ಸಮೂಹದ ಅಧ್ಯಕ್ಷ ಡಾ. ರೋಜರ್ ಅಲ್ವಿಕ್ ಅನಾವರಣಗೊಳಿಸಿದರು.
ಯುಕೆಯ ಮಾನಸಿಕ ಆರೋಗ್ಯ ಮತ್ತು ಸೊಸೈಟಿ ಕೇಂದ್ರದ ಸಹನಿರ್ದೇಶಕ ಪ್ರೊ.ರೊಬ್ ಪೂಲ್ ಅತಿಥಿಯಾಗಿದ್ದರು. ಎಂಎಂಸಿಆರ್ಐ ನಿರ್ದೇಶಕಿ ಡಾ.ಗೀತಾ ಕೆ. ಅವಧಾನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜನಾ ಸಮಿತಿ ಅಧ್ಯಕ್ಷ ಪ್ರೊ.ಪೀಟರ್ ಲೆಪ್ಪಿಂಗ್ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರೊ.ಬಿ.ಎನ್. ರವೀಶ್ ಇದ್ದರು. ನಂತರ ದೇಶ ವಿದೇಶದ ತಜ್ಞರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.