ಮಹದೇಶ್ವರ, ಮಂಟೇಸ್ವಾಮಿ ಸಾಮಾಜಿಕ ಚಳವಳಿಗಾರರು
ಮೈಸೂರು: ಪವಾಡ ಪುರುಷರಾದ ಮಹದೇಶ್ವರ ಹಾಗೂ ಮಂಟೇಸ್ವಾಮಿ ಅವರು ಸಾಮಾಜಿಕ ಚಳವಳಿಗಾರರು ಎಂದು ಸಂಶೋಧನಾ ವಿದ್ಯಾರ್ಥಿ ಪಿ.ಎಂ. ಕುಮಾರ್ ಹೇಳಿದರು.
ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಹುಮಾಧ್ಯಮ ಭಾಷಾ ಪ್ರಯೋಗಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮಂಟೇಸ್ವಾಮಿ ಮತ್ತು ಮಹದೇಶ್ವರ ಪರಂಪರೆಗಳ ಆಚರಣೆಯಲ್ಲಿ ದಲಿತ ಸಂವೇದನೆ ಎಂಬ ವಿಷಯ ಕುರಿತು ಮಾತನಾಡಿದರು.
ಉತ್ತರ ದೇಶದಿಂದ ಬಂದ ಮಹದೇಶ್ವರ ಹಾಗೂ ಮಂಟೇಸ್ವಾಮಿ ಅವರು ದಕ್ಷಿಣ ರಾಜ್ಯದಲ್ಲಿ ಲಕ್ಷಾಂತರ ಮಂದಿ ಒಕ್ಕೂಲು ಪಡೆದವರು. ಕೆಳವರ್ಗದ ಜನಜೀವನಕ್ಕಾಗಿ ಹೋರಾಡಿದ ಸಾಮಾಜಿಕ ನಾಯಕರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾದವರು. ಈ ಇಬ್ಬರು ಆಧ್ಯಾತ್ಮಿಕ ಮಾರ್ಗದ ಮೂಲಕ ವ್ಯವಸ್ಥೆ ಸುಧಾರಿಸಿದ ಹರಿಕಾರರು ಎಂದರು.
ಗುಡ್ಡರು ಪರಂಪರೆ: ಮಹದೇಶ್ವರರ ಪರಂಪರೆ ಗುಡ್ಡರು, ಮಂಟೇಸ್ವಾಮಿ ಪರಂಪರೆ ನೀಲಗಾರರು. ಈ ಎರಡು ಸಂಪ್ರದಾಯಗಳು ವಿಭಿನ್ನವಾದರೂ, ಚಳವಳಿಯ ಮಾರ್ಗ ಒಂದೇ. ಈ ಎರಡೂ ಸಂಪ್ರದಾಯಗಳಲ್ಲಿ ತಮಟೆ, ಕೊಂಬು ಕಹಳೆ ಹಾಗೂ ಮುಂಚೂಣಿಯ ಕಾರ್ಯದಲ್ಲಿ ದಲಿತರು ಭಾಗವಹಿಸುವ ಮೂಲಕ ನಡೆಸಿರುವ ಸಂವೇದನೆ ಆಗಾಧವಾದುದು ಎಂದರು.
ಕನ್ನಡ ಜನಪದ ಗೀತೆಗಳಲ್ಲಿ ಲಿಂಗ ವ್ಯವಸ್ಥೆ ಪಾವಿತ್ರ್ಯ ಭಂಜನೆ ಎಂಬ ವಿಷಯ ಕುರಿತು ಸಂಶೋಧನಾ ವಿದ್ಯಾರ್ಥಿನಿ ಬಿ. ರೇಖಾ ಮಾತನಾಡಿದರು.
ಕೊಳ್ಳೇಗಾಲ ಕನ್ನಡ ವಿವಿಯ ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರ ಮುಖ್ಯಸ್ಥ ಪ್ರೊ.ರಾ. ವೆಂಕಟೇಶ್ ಇಂದ್ವಾಡಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ, ಅಧ್ಯಾಪಕರ ಸಂಘದ ಡಾ.ಬಿ.ಕೆ ರವೀಂದ್ರನಾಥ್, ಡಾ.ಎನ್.ಕೆ. ಲೋಲಾಕ್ಷಿ, ಡಾ.ಜಯಲಕ್ಷ್ಮಿ ಸೀತಾಪುರ ಹಾಗೂ ಡಾ. ಅಕ್ಕಮಹಾದೇವಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.