ಮೇಯರ್ ಅಮಾನತಿಗೆ ಕೆಲ ಸದಸ್ಯರ ಆಗ್ರಹ
ಮೈಸೂರು: ನಗರಪಾಲಿಕೆಯ ಆಯುಕ್ತ ಡಾ.ಎಂ.ಆರ್. ರವಿ ಅವರ ಬಗ್ಗೆ ಹೇಳಿಕೆ ನೀಡಿದ್ದ ಮೇಯರ್ ರಾಜೇಶ್ವರಿ ಪುಟ್ಟಸ್ವಾಮಿ ಅವರ ವಿರುದ್ಧ ಪಾಲಿಕೆ ಸದಸ್ಯ ಆರ್. ಅನಂತ ನೇತೃತ್ವದಲ್ಲಿ ಕೆಲ ಸದಸ್ಯರು ಕಿಡಿಕಾರಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ವೈಯಕ್ತಿಕ ಪ್ರಚಾರಕ್ಕಾಗಿ ಮೇಯರ್ ಅವರು ಪಾಲಿಕೆ ಆಯುಕ್ತರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಮೇಯರ್ ಅವರ ವೈಯಕ್ತಿಕ ಲಾಭ ಫಲಿಸದೆ ಇದ್ದ ಕಾರಣಕ್ಕೆ ಆಯುಕ್ತರ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ನಿಜವಾಗಿದ್ದರೆ ಪಾಲಿಕೆ ಸಭೆಯಲ್ಲಿ ಚರ್ಚಿಸಬಹುದಿತ್ತು. ಆದರೆ ಜನವರಿ ತಿಂಗಳ ಸಭೆ ಕರೆಯದ ಮೇಯರ್ ವರ್ತನೆಯಿಂದ ಸದಸ್ಯರಿಗೆ ಬೇಸರವಾಗಿದೆ ಎಂದು ದೂರಿದರು. ಪಾಲಿಕೆ ಸದಸ್ಯರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಗರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸದೇ ಅನಾವಶ್ಯಕವಾಗಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಂದಾಗಿ ಮೇಯರ್ ಸ್ಥಾನಕ್ಕೆ ದಕ್ಕೆ ಬರುವಂತಾಗಿದೆ. ಆದ್ದರಿಂದ ಅವರನ್ನು ಕೂಡಲೇ ಅಮಾನತಿನಲ್ಲಿಡುವಂತೆ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರಿಗೆ ಪಾಲಿಕೆ ಸದಸ್ಯರಾದ ಅನಂತು, ನಂದಕುಮಾರ್, ಶಂಕರಪ್ಪ, ಜಯರಾಮ್, ಶಿವಣ್ಣ, ಸೋಮಶೇಖರ್, ವನಿತಾ ಪ್ರಸನ್ನ, ಶಾಂತುನೇಸನ್, ಶಾರದಮ್ಮ, ಪಾರ್ವತಿ, ಫರಿದಾಬೇಗಂ, ಪುಷ್ಪಲತಾ ಜಗನ್ನಾಥ್ ಅವರು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.