ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ವಾಣಿಜ್ಯ ಭರಾಟೆಯಲ್ಲಿ ಹೊಣೆಗಾರಿಕೆ ಮರೆ'

Parashurama
Updated On : 1 Feb 2013, 10:39 am

ಮೈಸೂರು: ಇಂದಿನ ವಾಣಿಜ್ಯ ಭರಾಟೆಯಲ್ಲಿ ಮಾಧ್ಯಮದ ಹೊಣೆಗಾರಿಕೆ ಮರೆಯಾಗುತ್ತಿದೆ ಎಂದು ಬೆಂಗಳೂರು ವಿವಿ ಸಂವಹನ ವಿಭಾಗದ ಅಧ್ಯಕ್ಷ ಡಾ.ಬಿ.ಕೆ. ರವಿ ವಿಷಾದಿಸಿದರು.
ವಾರ್ತಾ ಇಲಾಖೆ ಹಾಗೂ ಮೈಸೂರು ವಿವಿಯ ಬಹುಮಾಧ್ಯಮ ಸಂಶೋಧನ ಕೇಂದ್ರ ಸಂಯುಕ್ತವಾಗಿ ಗಿರಿಜನ ಪ್ರದೇಶದ ಯೋಜನೆಯಡಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇಲ್ಲಿನ ಇಎಂಎಂಆರ್‌ಸಿ ಸಭಾಂಗಣದಲ್ಲಿ ಆಯೋಜಿಸಿರುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ಎಂಬ ಒಂದು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತದಲ್ಲಿ ಪತ್ರಿಕೋದ್ಯಮ ಎಂದರೆ ಲಾಭ ಗಳಿಕೆಯ ಉದ್ಯಮವಾಗದೆ ಅದೊಂದು ಸಮಾಜ ಸೇವೆ ಎಂದು ಪರಿಗಣಿಸಲ್ಪಟ್ಟ ಕಾಲವಿತ್ತು. ಆದರೆ ಜಾಗತೀಕರಣ ಹಾಗೂ ತಂತ್ರಜ್ಞಾನ ಬದಲಾವಣೆಯಾದ ನಂತರ ಭಾರತದ ಮಾಧ್ಯಮ ಉದ್ಯಮವಾಗಿ ತನಗೆ ತಾನೇ ವಿಮುಕ್ತಿಕರಣಗೊಂಡಿದೆ ಎಂದರು.
ಮಾಧ್ಯಮ ರಂಗದಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು, ಕಳೆದ ಸಾಲಿನಲ್ಲಿ 2 ಸಾವಿರ ಬಿಲಿಯನ್ ವಹಿವಾಟು ನಡೆಸಿದೆ. ಆದರೆ ಅದು ಯಾವ ದಿಕ್ಕಿನತ್ತ ಸಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಭಾರತ ಉತ್ತಮ ಸಂಸ್ಕೃತಿ ಹಾಗೂ ಸಂಪನ್ಮೂಲ ಹೊಂದಿರುವ ದೇಶ. ಇಲ್ಲಿನ ಯಾವುದೇ ವ್ಯಕ್ತಿ ಬೇರೆ ದೇಶದಲ್ಲಿ ಉನ್ನತ ಸ್ಥಾನವನ್ನು ಹೊಂದುವ ಅವಕಾಶಗಳು ಹೆಚ್ಚಾಗಿವೆ ಎಂದರು.
ಯುವಜನತೆಯನ್ನು ತಯಾರಿಸಿ: ಸಮಾಜದಲ್ಲಿ ಯಾರೇ ಆಗಲಿ ಯಾವುದೇ ರಂಗದಲ್ಲಿ ತಪ್ಪು ಮಾಡಿದರೂ ಸರಿಯಾದ ಶಿಕ್ಷೆಯಾಗಬೇಕು. ಆದರೆ ನಮ್ಮ ದೇಶದಲ್ಲಿ ಅಂತಹ ಕೆಲಸ ಸಮರ್ಪಕವಾಗಿ ಆಗದಿರುವುದು ವಿಷಾದನೀಯ. ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸಶಕ್ತರಾಗುವಂತೆ ಉತ್ತಮ ತರಬೇತಿ ನೀಡುವ ಮೂಲಕ ಯುವಜನತೆಯನ್ನು ತಯಾರು ಮಾಡಬೇಕಿದೆ. ಇಂತಹ ಕಾರ್ಯಕ್ರಮ ಅದಕ್ಕೆ ಪೂರಕವಾಗಲಿ ಎಂದು ಆಶಿಸಿದರು.   
ವಾರ್ತಾ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಪನಿರ್ದೇಶಕ ಮಹದೇವಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕಾಂತ್ ಇದ್ದರು. ಇಎಂಎಂಆರ್‌ಸಿ ನಿರ್ದೇಶಕ ಪ್ರೊ.ಎ. ಬಾಲಸುಬ್ರಮಣಿಯನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ನಾನಾ ಭಾಗಗಳ ಸುಮಾರು 40 ಮಂದಿ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments