ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

6ರಿಂದ ಸುತ್ತೂರು ಜಾತ್ರೆ, ಬನ್ನಿ ಸುತ್ತೋಣ...

Parashurama
Updated On : 3 Feb 2013, 11:46 am

ಮೈಸೂರು: ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದಲ್ಲಿರುವ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಮಹೋತ್ಸವವನ್ನು ಫೆ.6 ರಿಂದ 11 ರವರೆಗೆ ಹಮ್ಮಿಕೊಳ್ಳಲಾಗಿದೆ.
1050 ವರ್ಷಗಳಷ್ಟು ಹಿಂದೆಯೇ ಸಂಸ್ಥಾಪಿಸಲಾದ ಶ್ರೀಮಠದಿಂದ ಇಲ್ಲಿಯವರೆಗೆ ಧಾರ್ಮಿಕ ಹಾಗೂ ಸೇವಾ ಕಾರ್ಯಗಳು ನಡೆದುಕೊಂಡು ಬಂದಿವೆ. ಈಗಿನ 24ನೇ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸುತ್ತೂರು ಜಾತ್ರೆ ನಡೆಯಲಿದೆ. ಫೆ.8 ರಂದು ಶಿವರಾತ್ರೀಶ್ವರರ ರಥೋತ್ಸವ ಜರುಗಲಿದೆ. ಜತೆಗೆ ತೆಪ್ಪೋತ್ಸವ, ಮಹದೇಶ್ವರ ಉತ್ಸವ, ಕೊಂಡೊತ್ಸವ ಮೊದಲಾದ ಉತ್ಸವಗಳು ವಿಜೃಂಭಣೆಯಿಂದ ನೆರವೇರಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಶಾಸಕ ಎಚ್. ಗಂಗಾಧರನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.6 ರಂದು ದೇಸಿ ಆಟಗಳಿಗೆ ಸಚಿವ ಎಂ.ಪಿ. ರೇಣುಕಾಚಾರ್ಯ, ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್, ದೋಣಿ ವಿಹಾರಕ್ಕೆ ಮಾಜಿ ಸಚಿವ ಎಂ.ಮಹದೇವ್, ಕೃಷಿ ಮೇಳಕ್ಕೆ ಸಚಿವ ಸಿ.ಪಿ. ಯೋಗೇಶ್ವರ್, ವಸ್ತುಪ್ರದರ್ಶನಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಾಂಸ್ಕೃತಿಕ ಮೇಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಂಸದ ಎನ್. ಚೆಲುವರಾಯಸ್ವಾಮಿ, ಫೆ.7 ರಂದು ಸಾಮೂಹಿಕ ವಿವಾಹಕ್ಕೆ ಸಚಿವ ವಿ. ಸೋಮಣ್ಣ, ಭಜನಾ ಮೇಳಕ್ಕೆ ಡಿಸಿಎಂ ಕೆ.ಎಸ್. ಈಶ್ವರಪ್ಪ ಚಾಲನೆ ನೀಡುವರು.
ವಸ್ತು ಪ್ರದರ್ಶನ: ಫೆ.8 ರಂದು ರಥೋತ್ಸವಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಎಚ್. ಮುನಿಯಪ್ಪ, ಫೆ.9 ರಂದು ಕೃಷಿ ಸಂವಾದಕ್ಕೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ. ರೆಹಮಾನ್ ಖಾನ್, ಭಜನಾ ಮೇಳದ ಸಮಾರೋಪದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಫೆ.10 ರಂದು ವಿವಿಧ ಸ್ಪರ್ಧೆಗಳಿಗೆ ಸಂಸದ ಅನಂತಕುಮಾರ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಗೋವಿಂದ ಎಂ.ಕಾರಜೋಳ, ಸಂಸದ ಎಚ್. ವಿಶ್ವನಾಥ್, ಡಾ. ಮುಖ್ಯಮಂತ್ರಿ ಚಂದ್ರು, ಕುಸ್ತಿ ಪಂದ್ಯಾವಳಿಗೆ ಕೇಂದ್ರ ಸಚಿವ ಎಸ್.ಶಿವಣ್ಣ ಚಾಲನೆ ನೀಡುವರು, ದನಗಳ ಜಾತ್ರೆ ಸಮಾರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಫೆ.11 ರಂದು ವಸ್ತುಪ್ರದರ್ಶನ, ಕೃಷಿ ಮೇಳ ಮತ್ತು ಸಾಂಸ್ಕೃಕ ಮೇಳದ ಸಮಾರೋಪದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಧ್ಯಕ್ಷತೆ ಎಂದರು.
ಪ್ರೊ.ಸುಬ್ಬಪ್ಪ ಮಾತನಾಡಿ, ಈ ಬಾರಿಯ ಸುತ್ತೂರು ಜಾತ್ರೆಯಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ಕೃಷಿ, ಕೈಗಾರಿಕೆ, ಆರೋಗ್ಯ, ತಾಂತ್ರಿಕ, ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಸುಮಾರು 500 ಮಳಿಗೆ ಸ್ಥಾಪಿಸಲಾಗಿದೆ. ರಾಜ್ಯಮಟ್ಟದ ಭಜನಾ ಮೇಳದಲ್ಲಿ 350 ತಂಡಗಳು ಭಾಗವಹಿಸಲಿವೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮಾಂತರ ಕಲಾತಂಡಗಳಿಂದ ಪೌರಾಣಿಕ ನಾಟಕಗಳು, 180ಕ್ಕೂ ಅಧಿಕ ಜೋಡಿಗಳ ಸಾಮೂಹಿಕ ವಿವಾಹ, ದೇಸಿ ಆಟಗಳು, ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಮಹಾ ದಾಸೋಹ: ಕಳೆದ ವರ್ಷ ಸುತ್ತೂರು ಜಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಈ ಬಾರಿ ಭಕ್ತರ ಸಂಖ್ಯೆ 15 ಲಕ್ಷಕ್ಕೆ ಏರುವ ನಿರೀಕ್ಷೆ ಇದ್ದು, ಭಾಗವಹಿಸಿದ ಭಕ್ತರಿಗೆಲ್ಲ ಪ್ರಸಾದ ವಿತರಿಸಲು ಮಹಾ ದಾಸೋಹ ಸಿದ್ಧಪಡಿಸಲಾಗಿದೆ. ದಾಸೋಹಕ್ಕೆ 1500 ಕ್ವಿಂಟಾಲ್ ಅಕ್ಕಿ, 50 ಕ್ವಿಂಟಲ್ ಬೇಳೆ, 1200 ಟಿನ್ ಎಣ್ಣೆ, 25 ಸಾವಿರ ತೆಂಗಿನಕಾಯಿ ಬಳಸಲಿದ್ದು, ಪ್ರಸಾದ ವಿತರಿಸಲು 5 ಸಾವಿರ ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು. 5 ಕಡೆಗಳಲ್ಲಿ ಪ್ರತ್ಯೇಕವಾಗಿ ವಿವಿಧ ಮಠದ ಶ್ರೀಗಳು, ಗಣ್ಯರು, ಕಲಾತಂಡಗಳು, ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದರು.
ಕೃಷಿ ಮೇಳದ ಸೊಬಗು: ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಮೇಳ ವಿಶೇಷ ಕಾರ್ಯಕ್ರಮವಾಗಿದೆ. ಜಾತ್ರೆಗೆ ಬರುವ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವುದು, ಜಿಲ್ಲೆಯ ಪ್ರಮುಖ ಬೆಳೆಗಳಲ್ಲದೆ ಹೊಸದಾಗಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಪ್ರಾತ್ಯಕ್ಷಿಕೆ, ತಾರಸಿ ತೋಟ, 1 ಎಕರೆಯಲ್ಲಿ ಕೃಷಿ ಬ್ರಹ್ಮಾಂಡ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಬಿತ್ತನೆ ಬೀಜ, ಗೊಬ್ಬರ ಪ್ರದರ್ಶನ ಮತ್ತು ಮಾರಾಟ, ತೋಟಗಾರಿಕೆ ಬೆಳೆಗಳ ಪ್ರದರ್ಶನ, ಸಿರಿಧಾನ್ಯಗಳ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಲಾಗುವುದು. ರೇಷ್ಮೆ ಸಾಕಾಣಿಕೆ ಮನೆ ಮತ್ತು ಕುರಿ ಕೊಟ್ಟಿಗೆ ನಿರ್ಮಿಸಲಾಗಿದೆ. ಹಾಗೆ ಮಣ್ಣಿನ ಫಲವತ್ತತೆ ಸುಧಾರಣೆ, ನೀರಿನ ನಿರ್ವಹಣೆ, ಬೆಳೆ ಪದ್ಧತಿಗಳು, ಹೈಟೆಕ್ ತೋಟಗಾರಿಕೆ ಬಗ್ಗೆ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಮಹದೇವಪ್ಪ ತಿಳಿಸಿದರು.
ಸಾರಿಗೆ ವ್ಯವಸ್ಥೆ: ಸುತ್ತೂರು ಜಾತ್ರೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು, ಮೈಸೂರು, ಚಾಮರಾಜನಗರ, ನಂಜನಗೂಡು, ಗುಂಡ್ಲುಪೇಟೆ ತಾಲೂಕು ಕೇಂದ್ರಗಳಿಂದ ಸುತ್ತೂರು ಶ್ರೀ ಕ್ಷೇತ್ರಕ್ಕೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ನಿವೃತ್ತ ನ್ಯಾ. ಶೇಖರ್ ಪಾಟೀಲ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಗೌರವ ಕಾರ್ಯದರ್ಶಿ ಶಿವಕುಮಾರ್, ಸುತ್ತೂರು ಕ್ಷೇತ್ರದ ಆಡಳಿತಾಧಿಕಾರಿ ಎಸ್.ಬಿ. ಉದಯಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments